ಜಿಲ್ಲೆ

ಕೆರೆಯೊಳಗೆ ಬಿದ್ದ ತಡೆಗೋಡೆ: ಕೀಲಂಪಾಡಿ ರಸ್ತೆ ಸಂಚಾರ ಬಂದ್

Avinash R

ಶಶಿ ಕುತ್ಯಾಳ ಪುತ್ತೂರು ಗ್ರಾಮಾಂತರ

ಪುತ್ತೂರು-ಪಾಣಾಜೆ ರಸ್ತೆಯ ಮಿತ್ತಡ್ಕ ಕೇಸರಿನಗರದಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕೀಲಂಪಾಡಿ ಎಂಬಲ್ಲಿ ರಸ್ತೆ ಭಾಗದಲ್ಲಿದ್ದ ತಡೆಗೋಡೆ ಕುಸಿದು ಕೆಳಗಿರುವ ಕೆರೆಗೆ ಬಿದ್ದಿದೆ. ಇದರಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿರುವುದಲ್ಲದೆ, ಕುಡಿಯುವ ಹಾಗೂ ಕೃಷಿ ಚಟುವಟಿಕೆಯ ವ್ಯವಸ್ಥೆಯ ಕೆರೆ ಸಂಪೂರ್ಣವಾಗಿ ಮುಚ್ಚಿ ಹೋಗಿದೆ.

ತಿರುವು ರಸ್ತೆಯ ಕೆಳಗಿನ ಭಾಗದಲ್ಲಿ ಸುಮಾರು 50 ಅಡಿಯಷ್ಟು ಆಳವಿದ್ದು, ಮೂಸೆಕುಂಞಿ ಎಂಬುವರ ಕೆರೆ ಇದೆ. ಈ ಪರಿಸರದ ಸುಮಾರು 10 ಕುಟುಂಬಗಳು ಇದೇ ಕೆರೆ ನೀರನ್ನು ಕುಡಿಯಲು ಬಳಸುತ್ತಿದ್ದರು. ಇದೀಗ ರಸ್ತೆ ತಡೆಗೋಡೆಯೊಂದಿಗೆ ಕುಸಿದು ಮುಚ್ಚಿ ಹೋಗಿದೆ.

2019-20ನೇ ಸಾಲಿನ ಮಳೆಹಾನಿ ದುರಸ್ತಿ ಯೋಜನೆಯಡಿ 25 ಲಕ್ಷ ರೂ. ವೆಚ್ಚದಲ್ಲಿ ಯೋಜನಾ ಉಪವಿಭಾಗದ ವತಿಯಿಂದ 20 ಮೀಟರ್‌ನಷ್ಟು ಉದ್ದದ ತಡೆಗೋಡೆ ನಿರ್ಮಿಸಲಾಗಿತ್ತು. ವರ್ಷ ಕಳೆಯುವ ಮೊದಲೇ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡು ಮಣ್ಣು ಕುಸಿಯಲಾರಂಭಿಸಿತ್ತು. ಮತ್ತೆ ಅಲ್ಲಿ ಮಣ್ಣು ಮತ್ತು ಕಲ್ಲು ಹಾಸಿ ಕುಸಿತ ತಡೆದಿದ್ದರೂ ಈಗ ತಡೆಗೋಡೆಯ ಭಾಗವೇ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

ತಡೆಗೋಡೆ ಕಾಮಗಾರಿಯ ನಡೆಯುವಾಗಲೇ ಇಲ್ಲಿನ ನಿವಾಸಿಗಳು ಕಳಪೆ ಎಂದು ಆರೋಪಿಸಿದ್ದರು. ಅಡಿಪಾಯ ಗಟ್ಟಿಗೊಳಿಸದೆ ತಡೆಗೋಡೆ ನಿರ್ಮಿಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಅದನ್ನು ಲೆಕ್ಕಿಸದೆ ಕಾಮಗಾರಿ ನಿರ್ವಹಿಸಲಾಗಿತ್ತು.

ಆ ಭಾಗದಲ್ಲಿ ಮಣ್ಣು ಕುಸಿತವಾದ ಸಂದರ್ಭ ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿ, ತಡೆಗೋಡೆಯ ಅಡಿಪಾಯ ಭಾಗವನ್ನು ಭದ್ರಗೊಳಿಸುವ ಕಾರ್ಯ ನಡೆಯದಿದ್ದರೆ ತಡೆಗೋಡೆ ಸಹಿತ ರಸ್ತೆ ಭಾಗ ಕುಸಿದು ಬೀಳುವ ಹಾಗೂ ಪಕ್ಕದಲ್ಲಿರುವ ಕೆರೆ ಇಲ್ಲದಾಗುವ ಸಂಭವವಿದೆ ಎಂದು ಎಚ್ಚರಿಸಿತ್ತು. ಬಳಿಕ ರಸ್ತೆ ಬದಿಗೆ ಜಲ್ಲಿ ಕಾಂಕ್ರೀಟ್ ಮಿಕ್ಸ್ ಅಳವಡಿಸಲಾಗಿದ್ದರೂ, ಅಡಿಪಾಯ ಗಟ್ಟಿಗೊಳಿಸದ ಪರಿಣಾಮ ರಸ್ತೆ ಭಾಗವೇ ತಡೆಗೋಡೆಯೊಂದಿಗೆ ಕುಸಿದಿದೆ.

ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ

ಕೀಲಂಪಾಡಿ ಭಾಗದ ರಸ್ತೆಯ ಇಕ್ಕೆಲಗಳಲ್ಲಿ ಮರಗಳನ್ನು ಕಡಿದು ಹಾಕಿ ಸಂಚಾರ ನಿರ್ಬಂಧಿಸಲಾಗಿದೆ. ಆದರೆ ದ್ವಿಚಕ್ರ ವಾಹನಗಳಿಗೆ ಬಿಟ್ಟು ಉಳಿದ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ. ಹಾಗಾಗಿ ಅಲ್ಲಿನ ರಿಕ್ಷಾ ಚಾಲಕರು ಮತ್ತಿತರ ವಾಹನ ಸವಾರರು ಸೋಮವಾರದೊಳಗೆ ರಸ್ತೆ ದುರಸ್ತಿ ಮಾಡಿಕೊಡಬೇಕು. ಇಲ್ಲದಿದ್ದರೆ ನಾವೇ ನಿರ್ಬಂಧ ತೆರವುಗೊಳಿಸಿ ರಸ್ತೆಯಲ್ಲಿ ಸಂಚಾರ ಮುಂದುವರಿಸುತ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಕಾಮಗಾರಿ ಕಳಪೆ ಎಂದು ಆರೋಪಿಸಿದ್ದರೂ ಅದನ್ನು ಲೆಕ್ಕಿಸದೆ ತಡೆಗೋಡೆ ನಿರ್ಮಾಣಮಾಡಿದ ಹಾಗೂ ಅಡಿಪಾಯ ಗಟ್ಟಿಗೊಳಿಸದಿರುವ ಪರಿಣಾಮ ಸಮಸ್ಯೆಯಾಗಿದೆ. ರಸ್ತೆ ಸಂಚಾರ ಸಮಸ್ಯೆ ಜತೆ 10ರಷ್ಟು ಕುಟುಂಬಗಳು ಬಳಕೆ ಮಾಡುತ್ತಿದ್ದ ಕುಡಿಯುವ ನೀರಿನ ಹಾಗೂ ಕೃಷಿ ಬಳಕೆಯ ಕೆರೆ ಸಂಪೂರ್ಣ ಮುಚ್ಚಿ ಹೋಗಿದೆ. ಹಾಜಿ ಎಸ್.ಅಬೂಬಕ್ಕರ್ ಆರ್ಲಪದವು, ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ
ಹಾಜಿ ಎಸ್.ಅಬೂಬಕ್ಕರ್ ಆರ್ಲಪದವು, ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ
ಪಂಚಾಯಿತಿ ವತಿಯಿಂದ 40 ಸಾವಿರ ರೂ. ವೆಚ್ಚದಲ್ಲಿ ಟಾರ್ಪಾಲು ಹೊದಿಕೆ ಮಾಡಿ ಕುಸಿತ ತಡೆಯುವ ಹಾಗೂ ಆ ಭಾಗದ ಚರಂಡಿ ದುರಸ್ತಿ ಕಾರ್ಯ ನಡೆಸಲಾಗಿದೆ. ದೊಡ್ಡ ದುರಸ್ತಿ ಕಾರ್ಯ ಮತ್ತು ಪರ್ಯಾಯ ವ್ಯವಸ್ಥೆ ಮಾಡಲು ಪಂಚಾಯಿತಿಯಲ್ಲಿ ಅನುದಾನವಿಲ್ಲ. ಪ್ರಾಕೃತಿಕ ವಿಕೋಪ ವಿಪತ್ತು ನಿರ್ವಹಣೆಗಾಗಿ ಪಂಚಾಯಿತಿಗೆ ಬರೀ ರೂ.25 ಸಾವಿರ ಮಾತ್ರ ಬರುವುದು. ಅದನ್ನು ಕೂಡ ಕೊಡುತ್ತೇವೆ ಎಂದು ಹೇಳಿದ್ದರೂ ಇನ್ನೂ ಬಂದಿಲ್ಲ. ವಿದ್ಯಾಶ್ರೀ ಸರೋಳಿಕಾನ, ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ
ವಿದ್ಯಾಶ್ರೀ ಸರೋಳಿಕಾನ, ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ