ಕೊಳ್ಳೇಗಾಲ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಜಿಲ್ಲಾ ಲೋಕಾಯುಕ್ತ ಇನ್ಸ್‌ಪೆಕ್ಟರ್ ಶಶಿಕುಮಾರ್ ಅವರಿಗೆ ಸಾರ್ವಜನಿಕರು ದೂರುಗಳ ಸುರಿಮಳೆಗೈದರು.
ಇ-ಸ್ವತ್ತು ಮಾಡಿಕೊಡುವಲ್ಲಿ ನಗರಸಭೆ ವಿಳಂಬ ಮಾಡುತ್ತಿದೆ ಎಂದು ಕೆಲವರು ದೂರಿದರೆ, ಮತ್ತೆ ಕೆಲವರು ತಾಲೂಕು ಪಂಚಾಯಿತಿ ಮತ್ತು ಸೆಸ್ಕ್‌ಗೆ ಸಂಬಂಧಪಟ್ಟ ಸಮಸ್ಯೆಗಳ ದೂರು ಸಲ್ಲಿಸಿದರು.
ಆರ್‌ಟಿಐ ಕಾರ್ಯಕರ್ತ ದಶರಥ ಮಾತನಾಡಿ, ಆಸ್ತಿಗಳ ಇ-ಸ್ವತ್ತು ಮಾಡುವಲ್ಲಿ ನಗರಸಭೆ ವಿಳಂಬನೀತಿ ಅನುಸರಿಸುತ್ತಿರುವುದಲ್ಲದೆ, ಸರ್ಕಾರಿ ಆಸ್ತಿಗಳ ಒತ್ತುವರಿಗೆ ಅವಕಾಶ ಕಲ್ಪಿಸಿದೆ ಎಂದು ದೂರು ನೀಡಿದರು.
ರೈತ ಮುಖಂಡ ಮುಲ್ಲರಾಜು ಮಾತನಾಡಿ, ನಗರಸಭೆ ವ್ಯಾಪ್ತಿಯ 1ನೇ ವಾರ್ಡಿನ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯ 5ನೇ ಅಡ್ಡರಸ್ತೆಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಆಗಿದ್ದರೂ ನಗರಸಭೆ ಅಧಿಕಾರಿಗಳು ಸರ್ಕಾರಿ ಆಸ್ತಿಯನ್ನು ರಕ್ಷಣೆ ಮಾಡುವಲ್ಲಿ ವಿಫಲವಾಗಿದ್ದಾರೆ ಎಂದು ದೂರಿದರು.
ಈ ವೇಳೆ ಇನ್ಸ್‌ಪೆಕ್ಟರ್ ಶಶಿಕುಮಾರ್ ಅವರು, ಸ್ಥಳದಲ್ಲಿದ್ದ ನಗರಸಭಾ ಕಚೇರಿಯ ರಾಜಸ್ವ ನಿರೀಕ್ಷಕ ಪ್ರದೀಪ್‌ಕುಮಾರ್ ಅವರಿಗೆ ಈ ಪ್ರಕರಣ ಸಂಬಂಧ ಕಡತಗಳನ್ನು ಒದಗಿಸುವಂತೆ ಸೂಚನೆ ನೀಡಿದರು.
ದೂರುದಾರ ಮಲ್ಲರಾಜು ಅವರಿಗೂ ಲಿಖಿತವಾಗಿ ದೂರು ನೀಡುವಂತೆ ತಿಳಿಸಿದರು.
ಈ ಎಲ್ಲ ದೂರುಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕಾನೂನು ಪ್ರಕಾರ ನ್ಯಾಯ ದೊರಕಿಸಿಕೊಡುವುದಾಗಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಶಶಿಕುಮಾರ್ ತಿಳಿಸಿದರು.
ಜಿಲ್ಲಾ ಲೋಕಾಯುಕ್ತ ಹೆಡ್ ಕಾನ್‌ಸ್ಟೇಬಲ್ ಮಹಾಲಿಂಗಸ್ವಾಮಿ, ಕಾನ್‌ಸ್ಟೇಬಲ್ ಶ್ರೀನಿವಾಸ್, ಚಾಲಕ ಕೃಷ್ಣೇಗೌಡ ಹಾಗೂ ಅಧಿಕಾರಿಗಳು ಹಾಜರಿದ್ದರು.