ಹುಣಸೂರು: ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಅಂಕುಶ ಹಾಕಿ ಸರ್.. ಬಿಳಿಕೆರೆ ಆರ್‌ಐನ ದುಂಡಾವರ್ತನೆಗೆ ಬ್ರೇಕ್ ಹಾಕಬೇಕು ಸ್ವಾಮಿ.. ಕುರಿ ಉಣ್ಣೆ ನೇಕಾರರ ಹಾಗೂ ಮಾರಾಟಗಾರರ ಸಂಘದ ದುರಾಡಳಿತದಿಂದಾಗಿ 60ಕ್ಕೂ ಹಚ್ಚು ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದು ನ್ಯಾಯ ಕೊಡಿಸಿ ಸರ್..
ಇಲ್ಲಿನ ನಗರಸಭಾ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ದೂರುಗಳ ಅರ್ಜಿ ಸ್ವೀಕಾರ ಸಭೆಯಲ್ಲಿ ನೊಂದ ಜನರ ಅಹವಾಲುಗಳ ಪರಿ ಇದಾಗಿತ್ತು.
ನಗರದ ಕಲ್ಕುಣಿಕೆ ಮಾರಿಗುಡಿ ಬೀದಿಯ ಶೇಖರ್ ಮನವಿ ಸಲ್ಲಿಸಿ ನಗರದ ಸೇತುವೆಯಲ್ಲಿರುವ ಕುರಿ ಉಣ್ಣೆ ನೇಕಾರರ ಮತ್ತು ಮಾರಾಟಗಾರರ ಸಂಘದ ಸುಪರ್ದಿಯಲ್ಲಿರುವ 10 ಎಕರೆ ಭೂಮಿಯಲ್ಲಿ 60ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, 3 ದಶಕಗಳಾದರೂ ಈ ಕುಟುಂಬಗಳಿಗೆ ಮನೆ ಖಾತೆಯಾಗಿಲ್ಲ. ನಗರಸಭೆಯಿಂದ ಮೂಲಸೌಕರ್ಯಗಳು ದೊರಕುತ್ತಿಲ್ಲ. ಕಾರಣ ಸಂಘವು ನಗರಸಭೆಗೆ 72 ಲಕ್ಷ ರೂ.ಗಳ ಕಂದಾಯ ಬಾಕಿ ಉಳಿಸಿಕೊಂಡಿದೆ. ಈ ಕುರಿತು ನಗರಸಭೆ ಸಂಘಕ್ಕೆ ನೋಟಿಸ್ ಜಾರಿಗೊಳಿಸಿ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಆ ಮೂಲಕ ನಿವಾಸಿಗಳಿಗೆ ಮನೆಯ ಖಾತೆ ಮಾಡಿಕೊಡುವ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ಕೋರಿದರು. ಈ ಕುರಿತು ಸಂಬಂಧಪಟ್ಟ ಅಧಿಕಾರಿಯ ಗಮನಕ್ಕೆ ತರಬೇಕೆಂದು ಲೋಕಾಯುಕ್ತ ಡಿವೈಎಸ್‌ಪಿ ಮಾಲತೇಶ್ ನಗರಸಭೆ ಪೌರಾಯುಕ್ತೆ ಕೆ.ಮಾನಸರಿಗೆ ಸೂಚಿಸಿದರು.
ಆರ್‌ಟಿಐ ಕಾರ್ಯಕರ್ತರಿಗೆ ಕಡಿವಾಣ ಹಾಕಿ: ನಗರಸಭೆ ಮಾಜಿ ಸದಸ್ಯ ಜಾಕಿರ್ ಹುಸೇನ್ ಮಾತನಾಡಿ, ನಗರಸಭೆಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರ ಹಾವಳಿ ಜಾಸ್ತಿಯಾಗಿದೆ. ಒಬ್ಬೊಬ್ಬ ಕಾರ್ಯಕರ್ತ ಪ್ರತಿದಿನ ಹತ್ತಾರು ಮಾಹಿತಿ ಕೋರಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ಅಧಿಕಾರಿಗಳು ಸಾರ್ವಜನಿಕ ಸೇವೆಗೆ ಅಡ್ಡಿಯುಂಟು ಮಾಡುತ್ತಿದ್ದಾರೆ. ಇದರಿಂದ ನಗರಸಭೆ ಆಡಳಿತದಲ್ಲಿ ಗೊಂದಲ ಹೆಚ್ಚುತ್ತಿದೆ. ವಿನಾಕಾರಣ ಖಾಸಗಿ ವ್ಯಕ್ತಿಗಳ ಆಸ್ತಿಪಾಸ್ತಿಗಳ ಕುರಿತು ಮಾಹಿತಿ ಕಲೆಹಾಕಿ ಅವರಿಗೆ ಧಮ್ಕಿ ಹಾಕುವ ಕಾರ್ಯ ಎಗ್ಗಿಲ್ಲದೆ ನಡೆದಿದೆ. ಒಂದೇ ಒಂದು ಕಟ್ಟಡ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ಬಂದೊದಗಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಕೋರಿದಾಗ, ಮಾಹಿತಿ ಕೇಳುವ ಹಕ್ಕು ದೇಶದ ಪ್ರತಿಯೊಬ್ಬ ಪ್ರಜೆಗೂ ಇದೆ. ಮಾಹಿತಿ ಕೇಳುವ ವ್ಯಕ್ತಿ ಸಂಬಂಧಪಟ್ಟ ಕಚೇರಿಯ ಮಾಹಿತಿ ಹಕ್ಕು ಅಧಿಕಾರಿಯ ಬಳಿ ಮಾತ್ರ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬೇಕು. ಅವರು ಮಾಹಿತಿ ಕೇಳುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಅನುಚಿತವಾಗಿ ನಡೆದುಕೊಂಡರೆ ಪೊಲೀಸರಿಗೆ ದೂರು ನೀಡಿ ಕ್ರಮವಹಿಸಿರಿ ಎಂದು ದೂರುದಾರರಿಗೆ ತಿಳಿಸಿದರು.
ಸಭೆಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ರೂಪಶ್ರೀ, ಉಮೇಶ್, ನಗರಸಭೆ ಪೌರಾಯುಕ್ತೆ ಕೆ.ಮಾನಸಾ, ಎಇಇ ಶರ್ಮಿಳಾ, ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಮುನಿಯಪ್ಪ, ನಗರಠಾಣೆ ಎಸ್‌ಐ ಜಮೀರ್ ಅಹಮದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.
ಭ್ರಷ್ಟಾಚಾರ ವಿರುದ್ಧ ಜಾಗೃತಿ ಸಪ್ತಾಹ: ಡಿವೈಎಸ್‌ಪಿ ಮಾಲತೇಶ್ ಮಾತನಾಡಿ, ಡಿ.31ರಿಂದ ಒಂದು ವಾರ ನಾವೆಲ್ಲರೂ ಭ್ರಷ್ಟಾಚಾರ ವಿರುದ್ಧದ ಜಾಗರೂಕತೆ ಜಾಗೃತಿ ಸಪ್ತಾಹ ಆಚರಿಸಲಿದ್ದೇವೆ. ಮೊದಲು ನಾವು, ನಮ್ಮ ಕಚೇರಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದೆಯೇ ಎನ್ನುವುದನ್ನು ಗಮನಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ನಾವು ಏನನ್ನು ಕೊಟ್ಟು ಹೋಗುತ್ತಿದ್ದೇವೆ ಎನ್ನುವ ಸಾಮಾಜಿಕ ಕಳಕಳಿ ನಮ್ಮದಾಗಬೇಕು. ಭಾರತರತ್ನ ಸರ್ದಾರ ವಲ್ಲಭಬಾಯ್ ಪಟೇಲ್‌ರ ಜನ್ಮದಿನದ ಸಂದರ್ಭದಲ್ಲಿ ಆಚರಿಸುವ ಈ ಕಾರ್ಯಕ್ರಮ ಪಟೇಲರ ದೇಶಸೇವೆಯನ್ನು ನೆನಪಿಸುವ ಮತ್ತು ಜಾಗೃತಗೊಳಿಸುವ ಕಾರ್ಯಕ್ರಮವಾಗಿದೆ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದು ವಿಶೇಷವಾಗಿತ್ತು.
ಹುಣಸೂರು ನಗರದ ನಗರಸಭಾ ಸಭಾಂಗಣದಲ್ಲಿ ಆಯೋಜಿಸಿದ್ದ ಲೋಕಾಯುಕ್ತರಿಂದ ಅಹವಾಲು ಸ್ವೀಕಾರ ಸಭೆಯಲ್ಲಿ ನಾಗರಿಕರು ಅರ್ಜಿಗಳನ್ನು ಸಲ್ಲಿಸಿದರು.