ಯಲ್ಲಾಪುರ: ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಸಹಾಯಕ ವ್ಯವಸ್ಥಾಪಕನು ಬ್ಯಾಂಕಿನ ಖಾತೆಯಿಂದ ತನ್ನ ಪತ್ನಿಯ ಖಾತೆಗೆ 2.69 ಕೋಟಿ ರೂಪಾಯಿ ವರ್ಗಾವಣೆ ಮಾಡಿ ಮೋಸವೆಸಗಿರುವ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕ್ ಆಫ್ ಬರೋಡಾ ಸ್ಥಳೀಯ ಶಾಖೆಯ ಸಹಾಯಕ ವ್ಯವಸ್ಥಾಪಕ, ಆಂಧ್ರಪ್ರದೇಶ ಮೂಲದ ಕುಮಾರ ಕೃಷ್ಣಮೂರ್ತಿ ಬೋನಾಲ 2022ರ ಏಪ್ರಿಲ್ 7ರಿಂದ ಸೆ.9ರವರೆಗಿನ ಅವಧಿಯಲ್ಲಿ ಮೋಸದಿಂದ ಹಣ ವರ್ಗಾವಣೆ ಮಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿಯ ಲಾಗಿನ್ ಅನ್ನು ಅವರ ಗಮನಕ್ಕೆ ಬಾರದಂತೆ ಉಪಯೋಗಿಸಿಕೊಂಡು ಆಂಧ್ರದ ಚಿರಾಲಾದ ಎಸ್ಬಿಐ ಶಾಖೆಯಲ್ಲಿ ಖಾತೆ ಹೊಂದಿರುವ ಪತ್ನಿ ರೇವತಿ ಪ್ರಿಯಾಂಕ ಗೊರ್ರೆ ಅವರ ಖಾತೆಗೆ 2.69 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಈ ಕುರಿತು ಶಾಖಾ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ ದೂರು ನೀಡಿದ್ದಾರೆ.