ಜಿಲ್ಲೆ

ಚಂದ್ರು ಕೊಲೆ ಕೇಸ್​: ಪೊಲೀಸರು ಮತ್ತು ಅರಗ ಜ್ಞಾನೇಂದ್ರ- ಸಿ.ಟಿ.ರವಿ ಹೇಳಿಕೆ... ಒಂದಕ್ಕೊಂದು ಸಂಬಂಧವೇ ಇಲ್ಲ

ಬೆಂಗಳೂರು: ಜೆ.ಜೆ.ನಗರದಲ್ಲಿ ಕೊಲೆಯಾದ 22 ವರ್ಷದ ಯುವಕ ಚಂದ್ರು ಕೇಸ್​ ತ್ರೀವ ರಾಜಕೀಯ ಸ್ವರೂಪ ಪಡೆದಿದೆ. ನಿನ್ನೆ(ಮಂಗಳವಾರ) ಪೊಲೀಸ್​ ಅಧಿಕಾರಿಗಳು ಕೊಟ್ಟ ಮಾಹಿತಿಯೇ ಬೇರೆ, ಇಂದು(ಬುಧವಾರ) ಗೃಹ ಸಚಿವ ಅರಗ ಜ್ಞಾನೇಂದ್ರ ಮತ್ತು ಸಿ.ಟಿ.ರವಿ ಕೊಟ್ಟ ಹೇಳಿಕೆಯೇ ಬೇರೆ ಇದೆ.

ಬೈಕ್​ ಡಿಕ್ಕಿಯಾಗಿದ್ದ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಹೇಳಿದ್ದರೆ, ಉರ್ದು ಬರಲ್ಲ ಎಂದು ಕನ್ನಡ ಮಾತನಾಡಿದ್ದಕ್ಕೆ ಚಂದ್ರುನನ್ನು ಚೂರಿಯಿಂದ ಚುಚ್ಚಿಚುಚ್ಚಿ ಕೊಲ್ಲಲಾಗಿದೆ ಎಂದು ಹೋಂ ಮಿನಿಸ್ಟರ್​ ಮತ್ತು ಸಿ.ಟಿ. ರವಿ ಹೇಳಿದ್ದು, ಈ ಪ್ರಕರಣ ವಿವಾದದ ಸ್ವರೂಪ ಪಡೆಯುತ್ತಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಚಂದ್ರು ಸಾವನ್ನ ಎಳೆದು ತಂದರೇ? ಅಥವಾ ಪೊಲೀಸರೇ ಸತ್ಯ ಬಚ್ಚಿಟ್ಟರೇ? ಎಂಬ ಚರ್ಚೆ ಹುಟ್ಟುಹಾಕಿದೆ.

ಏನಿದು ಪ್ರಕರಣ?: ಕಾಟನ್​ಪೇಟೆಯ ಜೈಮಾರುತಿನಗರ ನಿವಾಸಿ ಚಂದ್ರು (22) ಸೋಮವಾರ ತಡರಾತ್ರಿ ಕೊಲೆಯಾಗಿದ್ದಾನೆ. ಆರೋಪಿ ಶಾಹಿದ್​ ಸೇರಿ ಮೂವರನ್ನು ಜೆ.ಜೆ. ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಂದ್ರು ಕಳೆದ ಒಂದು ತಿಂಗಳಿನಿಂದ ಗೂಡ್ಸ್​ಶೆಡ್​ ರಸ್ತೆಯಲ್ಲಿರುವ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಉದ್ಯೋಗ ತರಬೇತಿ ಪಡೆಯುತ್ತಿದ್ದ. ಸ್ನೇಹಿತ ಸೈಮನ್​ ಹುಟ್ಟುಹಬ್ಬ ಆಚರಿಸಲು ಸೋಮವಾರ ರಾತ್ರಿ ಆತನ ಮನೆಗೆ ಹೋಗಿದ್ದ. ಆ ವೇಳೆ ಚಿಕನ್​ ರೋಲ್​ ತರಲೆಂದು ಸೈಮನ್ ಮತ್ತು ಚಂದ್ರು ಇಬ್ಬರೂ ತಡರಾತ್ರಿ ಬೈಕ್​ನಲ್ಲಿ ಜೆ.ಜೆ. ನಗರಕ್ಕೆ ಹೋಗಿದ್ದರು. ಹಳೇಗುಡ್ಡದಹಳ್ಳಿಯ ಕಾವೇರಿ ಆಶ್ರಮ ಶಾಲೆ ಸಮೀಪ ನಿಯಂತ್ರಣ ತಪ್ಪಿದ ಚಂದ್ರುವಿನ ಬೈಕ್​ ಮುಂದಿನಿಂದ ಬರುತ್ತಿದ್ದ ಶಾಹಿದ್​ ಬೈಕ್​ಗೆ ಡಿಕ್ಕಿ ಹೊಡೆದಿತ್ತು. ಯಾರಿಗೂ ಗಾಯಗಳಾಗಿರಲಿಲ್ಲ. ಈ ವೇಳೆ ಸರಿಯಾಗಿ ಬೈಕ್​ ಚಲಾಯಿಸುವಂತೆ ಶಾಹಿದ್​ಗೆ ಚಂದ್ರು ಬೆದರಿಸಿದ್ದ. ಇದರಿಂದ ಕೆರಳಿದ ಶಾಹಿದ್​, ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿ ಚಂದ್ರು ಹಾಗೂ ಸೈಮನ್​ ಜತೆ ಜಗಳ ಮಾಡಿದ್ದ. ಜಗಳ ವಿಕೋಪಕ್ಕೆ ತಿರುಗಿ ಶಾಹಿದ್​ ತನ್ನ ಬಳಿಯಿದ್ದ ಚೂರಿಯಿಂದ ಚಂದ್ರು ತೊಡೆಗೆ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಚಂದ್ರುವನ್ನು ಗೆಳೆಯ ಸೈಮನ್​ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದನಾದರೂ ಬದುಕಲಿಲ್ಲ ಎಂದು ಪೊಲೀಸ್​ ಕಮಿಷನರ್​ ಕಮಲ್​ ಪಂತ್​ ಮತ್ತು ಡಿಸಿಪಿ ಅನುಚೇತ್​ ಅವರು ಮಂಗಳವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿಗಳು ಹಲ್ಲೆ ನಡೆಸಿರುವ ದೃಶ್ಯ ಪತ್ತೆಯಾಗಿತ್ತು. ಈ ಆಧಾರದ ಮೇಲೆ ಪೊಲೀಸರು ಶಾಹಿದ್​ ಹಾಗೂ ಆತನ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದಿದ್ದಾರೆ.

ಆದರೆ ಇಂದು(ಬುಧವಾರ) ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಚಂದ್ರುನನ್ನು ಕೊಲೆ ಮಾಡಿದ್ದಾರೆ. ಕಾನೂನು ಕ್ರಮ ಕೈಗೊಳ್ಳುತ್ತೇವೆ. ಹಿಜಾಬ್ ವಿಚಾರದಿಂದ ಬೇರೆ ಬೇರೆ ವಿವಾದ ಶುರುವಾಗಿದೆ. ವಿರೋಧ ಪಕ್ಷದವರು ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡುತ್ತಾರೆ. ಅವರಿಗೆ ಜನರು ಶಾಂತಿಯುತವಾಗಿ ಇರುವುದು ಬೇಕಾಗಿಲ್ಲ. ಹೀಗೆ ಮಾಡುತ್ತಾ ಹೋದರೆ ನೆಲೆ ಕಳೆದುಕೊಳ್ಳುತ್ತಾರೆ. ಚಂದ್ರು ಹತ್ಯೆ ಬಗ್ಗೆ ಮಾಹಿತಿ ಸಿಕ್ಕಿದೆ. ಗಲಾಟೆ ವೇಳೆ ಉರ್ದು ಮಾತಾಡುವಂತೆ ಶಾಹಿದ್​ ತಂಡ ಹೇಳಿದೆ. ಈ ವೇಳೆ ಉರ್ದು ಬರಲ್ಲ ಎಂದು ಕನ್ನಡದಲ್ಲೇ ಮಾತನಾಡಿದ ಚಂದ್ರುವನ್ನ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ ಎಂದಿದ್ದಾರೆ.

ಸಿ.ಟಿ.ರವಿ ಕೂಡ ಹಲವು ವಿಚಾರಗಳನ್ನು ಪ್ರಸ್ತಾಪಿಸುತ್ತಾ ಚಂದ್ರು ಸಾವಿನ ಬಗ್ಗೆ ಮಾತನಾಡಿದ್ದಾರೆ. ನಾವಂತೂ ಶಾಲಾ ಸಮವಸ್ತ್ರರ ಪರ ನಿಂತಿದ್ದೇವೆ. ಮತಬ್ಯಾಂಕ್​ಗೆ ಆಕರ್ಷಿತ ಆಗಿರೋರು ಕಾಂಗ್ರೆಸ್​ನವರು. ನಮಗೆ ಜಾತಿ ಹೊಡೆಯುವ ಅವಶ್ಯಕತೆ ಇಲ್ಲ. ಅವರು ಪ್ರಮಾಣಿಕರಾಗಿದ್ರೆ ಹಿಜಾಬ್ ಸಂಘರ್ಷಕ್ಕೆ ಕಾನೂನಿನ ನೆರವು ಒದಗಿಸಿದ್ದವರು ಯಾರು ಅಂತ ಹೇಳಲಿ? ಎಲ್ಲ ವಕೀಲರೂ ಕಾಂಗ್ರೆಸ್ ಬೆಂಬಲಿತರೇ ಇದ್ದರು. ಶಾದೀಭಾಗ್ಯ ಯೋಜನೆ ತಂದು ಸಮಾಜ ಹೊಡೆದಿದ್ದು ಸಿದ್ದರಾಮಯ್ಯ. ಕನ್ನಡ ಮಾತಾಡಿದ್ದಕ್ಕೆ ಚಂದ್ರು ಹತ್ಯೆಯಾಗಿದೆ. ಯಾವ ದೇಶದಲ್ಲಿ ನಾವಿದ್ದೇವೆ? ವ್ಯಕ್ತಿಗತ ಆಧಾರದಲ್ಲಿ ನೋಡಬಾರದು. ಇದರ ಹಿಂದೆ ಪ್ರಚೋದನಾಕಾರಿ ಅಂಶ ಇದೆ. ಇವತ್ತು ಗೋರಿಪಾಳ್ಯದಲ್ಲಿ ನಡೆದಿದೆ. ಮೊನ್ನೆ ಕಾಶ್ಮೀರದಲ್ಲಿ ನಡೆದಿತ್ತು. ಇದನ್ನು ಖಂಡಿಸುತ್ತೇನೆ. ಇದರ ಬಗ್ಗೆ ಬುದ್ಧಿಜೀವಿಗಳು ಮೌನವಾಗಿದ್ದಾರೆ. ಸತ್ತವನು ಹಿಂದೂ ಆದರೆ ಅವರ ಕಣ್ಣಲ್ಲಿ ಕಣ್ಣೀರು ಬರೋದಿಲ್ಲ, ಸತ್ತವರು ಹಿಂದೂ ಆದರೆ ಸಿದ್ದರಾಮಯ್ಯ ಸಂತಾಪ ಸೂಚಿಸೋದಿಲ್ಲ ಎಂದು ಕಿಡಿಕಾರಿದ್ದಾರೆ.