ಜಿಲ್ಲೆ

ಸಮತೋಲಿತ, ಅಭಿವೃದ್ಧಿ ಪರ ಬಜೆಟ್

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ 2024-25ನೇ ಸಾಲಿನ ಬಜೆಟ್ ಬಡವರ, ರೈತರ, ಮಹಿಳೆಯರ, ಮಧ್ಯಮ ವರ್ಗದವರ ಹಿತವನ್ನು ಕಾಪಾಡುವ ಬಜೆಟ್ ಆಗಿದೆ. ಆರ್ಥಿಕ ಸಮತೋಲನ ಕಾಪಾಡುವ ಹಾಗೂ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಬಜೆಟ್ ಮಂಡಿಸಿದ್ದಾರೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದ್ದಾರೆ.

ಮುದ್ರಾ ಯೋಜನೆಯಡಿ ಸಾಲದ ಮೊತ್ತವನ್ನು 10 ಲಕ್ಷ ರೂ. ನಿಂದ 20 ಲಕ್ಷ ರೂ.ಗೆ ಹೆಚ್ಚಿಸಿರುವುದರಿಂದ ನಿರುದ್ಯೋಗ ಯುವಕ-ಯುವತಿಯರಿಗೆ ಅನುಕೂಲಕರವಾಗಲಿದೆ. ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಯ ಹಂತ-4ರ ಅನುಷ್ಠಾನದಿಂದ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ದಾರಿಯಾಗಲಿದೆ ಎಂದು ಅಭಿಪ್ರಾಯಿಸಿದ್ದಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ 10 ಲಕ್ಷ ಕೋಟಿ ರೂ. ಅನುದಾನದಲ್ಲಿ 3 ಕೋಟಿ ಮನೆಗಳನ್ನು ನಿರ್ವಿುಸುವ ಗುರಿ ಹೊಂದಲಾಗಿದ್ದು, ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗಲಿದೆ. 12 ಕೈಗಾರಿಕಾ ಪಾರ್ಕ್​ಗಳ ಸ್ಥಾಪನೆಯೊಂದಿಗೆ ಶಿಪ್ಪಿಂಗ್ ಉದ್ಯಮದಲ್ಲಿ ಉದ್ಯೋಗಾವಕಾಶ ಸೃಷ್ಟಿಸಿ ಹೆಚ್ಚಿನ ಒತ್ತು ನೀಡಲಾಗಿದೆ. ಒಟ್ಟಿನಲ್ಲಿ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದ್ದು, ದೇಶವನ್ನು ಆರ್ಥಿಕವಾಗಿ ವಿಶ್ವದ 3ನೇ ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಸಂಶಯವಿಲ್ಲ ಎಂದು ಹೇಳಿದ್ದಾರೆ.