ಜಿಲ್ಲೆ

ಹಾಸನ ಜಿಲ್ಲೆಯಲ್ಲಿ ಪುಂಡಾಟ ಮೆರೆದು ಸೆರೆ ಸಿಕ್ಕ 'ಅಶ್ವತ್ಥಾಮ ಆನೆ’ಗೆ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಅವಕಾಶ

arunakunigal

ಮೈಸೂರು: ಈ ಬಾರಿ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿರುವ ‘ಅಶ್ವತ್ಥಾಮ’ ಆನೆ ಯಾರು ಗೊತ್ತಾ? ಹಾಸನ ಜಿಲ್ಲೆಯ ಗ್ರಾಮಗಳಲ್ಲಿ ಪುಂಡಾಟ ಮೆರೆದು 4 ವರ್ಷದ ಹಿಂದೆ ಸೆರೆ ಸಿಕ್ಕವ.

34 ವರ್ಷದ ಅಶ್ವತ್ಥಾಮ 2.85 ಮೀಟರ್ ಎತ್ತರ, 3.46 ಮೀಟರ್ ಉದ್ದ ಇದ್ದಾನೆ. 3,630 ಕೆ.ಜಿ. ತೂಕವಿದ್ದು, ಸಮತಟ್ಟಾದ ಬೆನ್ನು ಹೊಂದಿರುವ ಈ ಗಂಡಾನೆ ಭವಿಷ್ಯದ ಅಂಬಾರಿ ಹೊರುವ ಆನೆಯಾಗಿ ಹೊರಹೊಮ್ಮುವ ಎಲ್ಲ ಲಕ್ಷಣ ಹೊಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ 5ರಿಂದ 8 ವರ್ಷ ದಸರಾ ಮಹೋತ್ಸವಕ್ಕೆ ಕರೆತಂದು ತರಬೇತಿ ನೀಡಿದರೆ, 15 ವರ್ಷದ ನಂತರ ಅಂಬಾರಿ ಹೊರಲು ಅಶ್ವತ್ಥಾಮನನ್ನು ಸಜ್ಜುಗೊಳಿಸಬಹುದು ಎಂಬ ಲೆಕ್ಕಾಚಾರ ಅರಣ್ಯ ಇಲಾಖೆಯದ್ದಾಗಿದೆ. ದಂತವೂ ನೀಳವಾಗಿರುವುದು ಆನೆಯ ಲಕ್ಷಣ ಹೆಚ್ಚಲು ಕಾರಣವಾಗಿದೆ. ಅಶ್ವತ್ಥಾಮನಿಗೆ ಮಾವುತನಾಗಿ ಶಿವು, ಕಾವಾಡಿಯಾಗಿ ಗಣೇಶ ಕರ್ತವ್ಯ ನಿರ್ವಹಿಸುತ್ತಿದ್ದು, ಆನೆಯನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ.

ಮತ್ತಿಗೂಡಿಗೆ ಬಂದ ಅಶ್ವತ್ಥಾಮ: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಯ್ಕೆಯಾದ ಹಿನ್ನೆಲೆಯಲ್ಲಿ ದೊಡ್ಡಹರವೆ ಶಿಬಿರದಿಂದ ಅಶ್ವತ್ಥಾಮನನ್ನು ಮತ್ತಿಗೂಡು ಆನೆ ಶಿಬಿರಕ್ಕೆ ಎರಡು ದಿನದ ಹಿಂದೆಯೇ ಕರೆಸಿಕೊಳ್ಳಲಾಗಿತ್ತು. ಈಗಾಗಲೇ ಜಂಬೂಸವಾರಿಗೆ ಆಯ್ಕೆಯಾದ ಎಲ್ಲ 8 ಆನೆಗಳಿಗೂ ಪೌಷ್ಟಿಕ ಆಹಾರ ನೀಡುವ ಮೂಲಕ ತಯಾರಿ ಆರಂಭಿಸಲಾಗಿದೆ.
ನಾಡಹಬ್ಬ ಮೈಸೂರು ದಸರಾ ಉತ್ಸವದ ಮುನ್ನುಡಿಯಂತಿರುವ ಗಜಪಯಣಕ್ಕೆ ಹುಣಸೂರು ತಾಲೂಕಿನ ನಾಗಾಪುರದಲ್ಲಿ ಸೋಮವಾರ ಸಂಭ್ರಮದ ಚಾಲನೆ ಸಿಕ್ಕಿದೆ.