ಜಿಲ್ಲೆ

ಕೊಡಗಿನಲ್ಲಿ ತಲೆ ಎತ್ತಲಿದೆ ಮತ್ಸ್ಯಾಲಯ

ಮಡಿಕೇರಿ:

ಜಿಲ್ಲೆಯ ಪ್ರವಾಸೋದ್ಯಮ ಬೆಳೆವಣಿಗೆ ಮಹತ್ವದ ಕೊಡುಗೆ ನೀಡಲಿದೆ ಎನ್ನುವ ದೊಡ್ಡ ಮಟ್ಟದ ನಿರೀಕ್ಷೆ ಹೊಂದಿರುವ ಅತ್ಯಾಧುನಿಕ ಶೈಲಿಯ ಅಕ್ವೇರಿಯಂ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ಕೊಟ್ಟಿದೆ. ಇದಕ್ಕಾಗಿ ಕುಶಾಲನಗರ ತಾಲೂಕು ಹಾರಂಗಿ ಜಲಾಶಯದ ಬಳಿ ಅರ್ಧ ಎಕರೆ ಜಾಗ ಗುರುತಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸೂಚಿಸಿದ್ದಾರೆ. ೧೦ ಕೋಟಿ ರೂ. ವೆಚ್ಚದಲ್ಲಿ ಈ ಮತ್ಸ್ಯಾಲಯ ಇಲ್ಲಿ ತಲೆ ಎತ್ತಲಿದೆ.
ಗಡಿಯಲ್ಲಿ ಬೈಲಕುಪ್ಪೆಯ ಗೋಲ್ಡನ್ ಟೆಂಪಲ್, ಸುತ್ತಮುತ್ತಲ ಕೆಲವೇ ಕಿಮೀಗಳ ಅಂತರದಲ್ಲಿ ಹಾರಂಗಿ ಜಲಾಶಯ, ಸಂಗೀತ ಕಾರಂಜಿ, ಹಾರಂಗಿ ಸಾಕಾನೆ ಶಿಬಿರ, ಕಾವೇರಿ ನಿಸರ್ಗಧಾಮ, ಚಿಕ್ಲಿಹೊಳೆ ಜಲಾಶಯ, ದುಬಾರೆ ಸಾಕಾನೆ ಶಿಬಿರ, ವೈಟ್ ಮತ್ತು ಸ್ಟಿಲ್ ವಾಟರ್ ರಿವರ್ ರ‌್ಯಾಫ್ಟಿಂಗ್, ಐಷಾರಾಮಿ ರೆಸಾರ್ಟ್‌ಗಳು, ಹೋಮ್‌ಸ್ಟೇಗಳು… ಹೀಗೆ ಕೊಡಗಿನ ಪ್ರವಾಸೋದ್ಯಮ ಹಬ್ ಆಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಕುಶಾಲನಗರದ ಹಿರಿಮೆಗೆ ಗರಿ ಎನ್ನುವಂತೆ ಸಮೀಪದ ಹಾರಂಗಿಯಲ್ಲಿ ಮತ್ತೊಂದು ಪ್ರವಾಸಿ ತಾಣವಾಗಿ ಅತ್ಯಾಧುನಿಕ ಶೈಲಿಯ ಅಕ್ವೇರಿಯಂ ತಲೆ ಎತ್ತಲಿದೆ.

ಪಶ್ಚಿಮಘಟ್ಟದ ಸೆರಗಿನಲ್ಲಿ ಇರುವ ಕೊಡಗು ಪ್ರಾಕೃತಿಕ ಸೌಂದರ್ಯದಿಂದಾಗಿ ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಪ್ರತಿನಿತ್ಯ ಸೆಳೆಯುತ್ತಿದೆ. ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಕಾಲ ಕಾಲಕ್ಕೆ ಸಾಕಷ್ಟು ಸವಲತ್ತುಗಳನ್ನು ಸರ್ಕಾರ ಒದಗಿಸುತ್ತಾ ಬಂದಿದೆ. ಆಧುನಿಕ ಜಮಾನ ಮತ್ತು ಸಮಯಕ್ಕೆ ಸರಿಯಾಗಿ ಬದಲಾಗುತ್ತಿರುವ ಟ್ರೆಂಡ್‌ಗೆ ಅನುಗುಣವಾಗಿ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಒಂದಿಲ್ಲೊಂದು ಆಕರ್ಷಣೆಗಳನ್ನು ಒದಗಿಸುತ್ತಾ ಬಂದಿದೆ. ಖಾಸಗಿಯವರೂ ಪ್ರವಾಸಿ ಆಕರ್ಷಣೆಗಳನ್ನು ಅಳವಡಿಸಿಕೊಳ್ಳುತ್ತಿರುತ್ತಾರೆ. ಇದೀಗ ಮೀನುಗಾರಿಕೆ ಇಲಾಖೆ ಮುಖಾಂತರವೂ ಸರ್ಕಾರ ಪ್ರವಾಸಿಗರನ್ನು ಸೆಳೆಯಲು ಜಿಲ್ಲೆಗೆ ಅತ್ಯಾಧುನಿಕ ಅಕ್ವೇರಿಯಂ ತರುತ್ತಿದೆ.

ಕೊಡಗಿನಲ್ಲಿ ಮೀನುಗಾರಿಕೆ ಇಲಾಖೆ ಮುಖಾಂತರ ಅಕ್ವೇರಿಯಂ ಆರಂಭಿಸಬೇಕು ಎನ್ನುವುದು ಪರಿಸರಕ್ಕೆ ಪೂರಕ ಪ್ರವಾಸೋದ್ಯಮದಲ್ಲಿ ಆಸಕ್ತಿ ಇರುವ ಶಾಸಕ ಡಾ. ಮಂತರ್ ಗೌಡ ಅವರ ಚಿಂತನೆಗಳಲ್ಲಿ ಒಂದಾಗಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ ಹಾರಂಗಿಗೆ ಬಂದಿದ್ದ ಸಂದರ್ಭ ಈ ವಿಷಯದಲ್ಲಿ ಶಾಸಕರು ಸಚಿವರ ಗಮನ ಸೆಳೆದಿದ್ದರು.
ಸಚಿವರು ಕೂಡ ಈ ಚಿಂತನೆಯನ್ನು ಮೆಚ್ಚಿಕೊಂಡು ಅಕ್ವೇರಿಯಂ ನಿರ್ಮಾಣಕ್ಕೆ ಉತ್ಸುಕತೆ ತೋರಿಸಿದಲ್ಲದೆ ಸರ್ಕಾರದ ಸಂಪೂರ್ಣ ಅನುದಾನದಲ್ಲಿ ಅಕ್ವೇರಿಯಂ ನಿರ್ಮಾಣ ಮತ್ತು ನಿರ್ವಹಣೆ ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯವಾಗಿದ್ದು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಕ್ಕೆ ತರುವ ಚಿಂತನೆ ಹಂಚಿಕೊಂಡಿದ್ದರು.

ನಂತರ ನಿರಂತರವಾಗಿ ಈ ಬಗ್ಗೆ ಮೀನುಗಾರಿಕೆ ಇಲಾಖೆ ಜತೆ ಸಂಪರ್ಕ ಇಟ್ಟುಕೊಂಡಿದ್ದ ಮಂತರ್ ಗೌಡ, ಅಕ್ವೇರಿಯಂ ಸ್ಥಾಪನೆ ಬಗ್ಗೆ ಮೀನುಗಾರಿಕೆ ಇಲಾಖೆ ಮೂಲಕವೇ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದರು. ಇದೀಗ ಈ ಯೋಜನೆಗೆ ಸರ್ಕಾರ ಅನುಮೋದನೆ ಕೊಟ್ಟಿದೆ. ೨೦೨೪-೨೫ನೇ ಸಾಲಿಗೆ ಮೀನುಗಾರಿಕೆ ನಿರ್ದೇಶನಾಲಯದ ಮೂಲಕ ಆರ್‌ಐಡಿಎಫ್ ಟ್ರಾಂಚ್ -೩೦ರ ಅಡಿಯಲ್ಲಿ ೧೦ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಈ ಬೆನ್ನಲೇ ಮಂಗಳವಾರ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ್ದ ಡಾ. ಮಂತರ್ ಗೌಡ ಅಕ್ವೇರಿಯಂ ನಿರ್ಮಾಣಕ್ಕಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದಕ್ಕಾಗಿ ಅರ್ಧ ಎಕರೆ ಜಾಗ ಒದಗಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೀನುಗಾರಿಕೆ ಇಲಾಖೆ ಅಡಿಯಲ್ಲಿ ಹಾರಂಗಿ ಜಲಾಶಯದ ಒತ್ತಿನಲ್ಲಿ ಮೀನು ಮರಿ ಉತ್ಪಾದನಾ ಕೇಂದ್ರವೊಂದು ಕಾರ್ಯಾಚರಿಸುತ್ತಿದೆ. ಅಪರೂಪದ ಮಹಶೀರ್ ಮೀನು ಮರಿಗಳ ಉತ್ಪಾದನೆ ಸೇರಿದಂತೆ ರೈತರಿಗೆ ಸಾಕಲು ಅಗತ್ಯವಿರುವ ವಿವಿಧ ತಳಿಗಳ ಮೀನು ಮರಿಗಳನ್ನು ಈ ಕೇಂದ್ರದಲ್ಲಿ ಉತ್ಪಾದಿಸಿ ಪೂರೈಕೆ ಮಾಡಲಾಗುತ್ತಿದೆ. ಅಲಂಕಾರಿಕಾ ಮೀನುಗಳ ಪ್ರಾಯೋಗಿಕ ಸಾಕಾಣಿಕೆಯೂ ಇಲ್ಲಿ ನಡೆಯುತ್ತಿದೆ. ಇದೇ ಜಾಗದಲ್ಲಿ ಅಕ್ವೇರಿಯಂ ಸ್ಥಾಪಿಸಲು ಶಾಸಕ ಡಾ. ಮಂತರ್ ಗೌಡ ಆಸಕ್ತಿ ತೋರಿಸಿದ್ದರು.

ಆದರೆ ಇಲ್ಲಿ ಮತ್ಸ್ಯಾಲಯ ಸ್ಥಾಪನೆಯಾದರೆ ಸ್ಥಳಾವಕಾಶದ ಸಮಸ್ಯೆ ತಲೆದೋರಬಹುದು ಎನ್ನುವ ಆತಂಕವನ್ನು ಅಧಿಕಾರಿಗಳು ತೋಡಿಕೊಂಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದರೆ ವಾಹನ ನಿಲುಗಡೆ ಸೇರಿದಂತೆ ವಿವಿಧ ತೊಂದರೆಗಳು ಎದುರಾಗಬಹುದು. ಮೀನು ಮರಿಗಳ ಉತ್ಪಾದನೆ ಸಂದರ್ಭ ಆರೋಗ್ಯಯುತ ಪರಿಸರದ ಅಗತ್ಯವಿದ್ದು, ಪ್ರವಾಸಿಗರ ಅತ್ಯಧಿಕ ಓಡಾಟದಿಂದ ಇದಕ್ಕೂ ಅಡ್ಡಿ ಆಗಬಹುದು ಎಂದು ಗಮನ ಸೆಳೆಯಲಾಗಿತ್ತು.
ಹಾರಂಗಿ ಜಲಾಶಯದ ಒತ್ತಿನಲ್ಲಿ ನಿರ್ಮಾಣ ಆಗಿರುವ ಉದ್ಯಾನದಲ್ಲಿ ಮತ್ಸ್ಯಾಗಾರ ಕಾರ್ಯಾಚರಣೆ ಆರಂಭಿಸಿದರೆ ಎಲ್ಲಾ ರೀತಿಯಿಂದಲೂ ಅನುಕೂಲತೆ ಇದೆ ಎನ್ನುವುದು ಅಧಿಕಾರಿಗಳ ಸಲಹೆ. ಇಲ್ಲಿ ವಾಹನ ನಿಲುಗಡೆಗೆ ವಿಶಾಲ ಜಾಗವಿದೆ. ಉದ್ಯಾನ, ಸಂಗೀತ ಕಾರಂಜಿ ಹಾಗೂ ಪಕ್ಕದಲ್ಲೇ ಸಾಕಾನೆ ಶಿಬಿರ ಇರುವುದರಿಂ ಪ್ರವಾಸಿಗರಿಗೆ ಒಂದೇ ಸ್ಥಳದಲ್ಲಿ ಹೆಚ್ಚಿನ ಪ್ರವಾಸಿ ಆಕರ್ಷಣೆಗಳ ವೀಕ್ಷಣೆಗೆ ಅವಕಾಶ ಆಗುತ್ತದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಜಲಾಶಯದ ಬಳಿಯೇ ಜಾಗ ಗುರುತಿಸಲಾಗಿದೆ.

ದೇಶ ವಿದೇಶಗಳ ಬಗೆ ಬಗೆಯ ಮೀನುಗಳನ್ನು ಒಂದೇ ಸ್ಥಳದಲ್ಲಿ ವೀಕ್ಷಿಸುವ ಅವಕಾಶವನ್ನು ಪ್ರವಾಸಿಗರಿಗೆ ಕಲ್ಪಿಸುವ ಮಹತ್ವದ ಉದ್ದೇಶ ಅಕ್ವೇರಿಯಂ ನಿರ್ಮಾಣದ ಹಿಂದೆ ಇದೆ. ಇದು ಹಾರಂಗಿ ಮಾತ್ರವಲ್ಲದೆ ಕೊಡಗಿಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಅನುಕೂಲ ಆಗಬಹುದು ಎನ್ನಲಾಗುತ್ತಿದೆ. ಇದರ ಜತೆಯಲ್ಲಿ ಕಾವೇರಿ ನದಿಯಲ್ಲಿ ಮಾತ್ರ ಹೆಚ್ಚಾಗಿ ಕಂಡು ಬರುವ ಅಪರೂಪದ ಮಹಶೀರ್ ತಳಿಯ ಮೀನುಗಳು ಕಾವೇರಿಯ ಉಪನದಿ ಹಾರಂಗಿಯಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಈ ಮೀನುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಹಾರಂಗಿ ಅಣೆಕಟ್ಟೆಯಿಂದ ಕೂಡಿಗೆ ಸೇತುವೆ ತನಕ ಮೀನುಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ. ಹಾರಂಗಿ ಸೇತುವೆ ಬಳಿ ಸೋಪಾನ ಕಟ್ಟೆ ಮಾದರಿಯಲ್ಲಿ ನದಿ ಬದಿಯಲ್ಲಿ ಕಟ್ಟೆ ಕಟ್ಟಿ ಇಲ್ಲಿ ಮೀನುಗಳಿಗೆ ಪ್ರವಾಸಿಗರ ಮೂಲಕ ಆಹಾರ ನೀಡುವ ಯೋಜನೆಯೂ ಚಿಂತನೆಯ ಹಂತದಲ್ಲಿದೆ.

ಕುಶಾಲನಗರ ತಾಲೂಕು ಹಾರಂಗಿಯಲ್ಲಿ ೧೦ ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮತ್ಸ್ಯಾಲಯ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ಕೊಟ್ಟಿದೆ. ೨೦೨೪-೨೫ನೇ ಸಾಲಿಗೆ ಮೀನುಗಾರಿಕೆ ನಿರ್ದೇಶನಾಲಯದ ಮೂಲಕ ಆರ್‌ಐಡಿಎಫ್ ಟ್ರಾಂಚ್ -೩೦ರ ಅಡಿಯಲ್ಲಿ ಕಾಮಗಾರಿ ನಡೆಸಲಾಗುವುದು. ಇದಕ್ಕಾಗಿ ಹಾರಂಗಿ ಜಲಾಶಯದ ಬಳಿ ಜಾಗ ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಾಗ ಒದಗಿಸಿ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಡಾ. ಮಂತರ್ ಗೌಡ, ಮಡಿಕೇರಿ ಶಾಸ