ಜಿಲ್ಲೆ

ಅರ್ಚನಾ ರೆಡ್ಡಿ ಕೊಲೆ ಕೇಸ್​: ಜಿಮ್​ ಟ್ರೈನರ್​ ನವೀನ್​ ಕೋಟ್ಯಧೀಶ ಆಗಿದ್ದೇಗೆ?​ EXCLUSIVE ಮಾಹಿತಿ ಇಲ್ಲಿದೆ

ಆನೇಕಲ್​: ಡಿ.27ರ ರಾತ್ರಿ ಹೆದ್ದಾರಿಯಲ್ಲೇ ಬೆಳ್ಳಂದೂರಿನ ಅರ್ಚನಾ ರೆಡ್ಡಿಯನ್ನು ಬರ್ಬರವಾಗಿ ಕೊಂದ ಆರೋಪಿ ನವೀನ್​ನ ಹಿನ್ನೆಲೆ ಕೇಳಿದ್ರೆ ಶಾಕ್​ ಆಗ್ತೀರಿ.

ಗಂಡನಿಂದ ವಿಚ್ಛೇದನ ಪಡೆದಿರುವ ಅರ್ಚನಾಗೆ ಕೆಲ ವರ್ಷಗಳ ಹಿಂದೆ ಜಿಮ್ ಟ್ರೈನರ್ ನವೀನ್​ನ​ ಪರಿಚಯ ಸಂಬಂಧಕ್ಕೆ ತಿರುಗಿತ್ತು. ಜಿಮ್ ಟ್ರೈನರ್ ಆಗಿದ್ದ ನವೀನ್ ಇದ್ದಕ್ಕಿದ್ದಂತೆ ಕೋಟ್ಯಧೀಶನಾದ. ಅರ್ಚನಾಳ ಹಿಂದೆ ಬಿದ್ದು ಆಕೆಯ ಹಣದಿಂದ ರಾಯಲ್ ಲೈಫ್ ನಡೆಸುತ್ತಿದ್ದ. ಕಳೆದ ವರ್ಷ ಜನವರಿಯಲ್ಲಿ ತನ್ನ ಬರ್ತ್​ ಡೇ ಅನ್ನು ಜಿಗಣಿಯ ಪ್ರಮುಖ ಬಡಾವಣೆಯೊಂದರಲ್ಲಿ ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದ. ಆ ವೇಳೆ ಅರ್ಚನಾ ರೆಡ್ಡಿ ಕೂಡ ನವೀನ್​ ಜತೆ ಇದ್ದಳು. ತದನಂತರ ಅರ್ಚನಾ ದೂರವಾಗ್ತಿದ್ದಂತೆ ಆಕೆಯ ಮಗಳು ಯುವಿಕಾ ರೆಡ್ಡಿಯ ಜತೆ ಸಲುಗೆ ಬೆಳೆಸಿಕೊಂಡಿದ್ದ. ಅಷ್ಟೇ ಅಲ್ಲ, ಇತ್ತೀಚಿಗೆ ನವೀನ್ ಪುಡಿರೌಡಿಗಳ ಸಂಪರ್ಕವನ್ನೂ ಬೆಳೆಸಿದ್ದ.

ಅರ್ಚನಾ ದುಡ್ಡಿನಿಂದ ಐಷಾರಾಮಿ ಜೀವನ ನಡೆಸುತ್ತಿದ್ದ ನವೀನ್​, ಕೆಲ ಪುಡಿರೌಡಿಗಳನ್ನು ಮೇಂಟೇನ್ ಮಾಡುತ್ತಿದ್ದ. ಅರ್ಚನಾಳ ಹಣಕಾಸು ವ್ಯವಹಾರದಲ್ಲೂ ಮೂಗು ತೂರಿಸುತ್ತಿದ್ದನಂತೆ. ರೌಡಿಯೊಬ್ಬನ ಜತೆ ಅರ್ಚನಾ ರೆಡ್ಡಿ ಆಪ್ತತೆ ಬೆಳೆಸಿಕೊಂಡದ್ದು ನವೀನ್​ಗೆ ಸಹಿಸಲಾಗಿರಲಿಲ್ಲ. ಅರ್ಚನಾ ರೆಡ್ಡಿ ಹೆಸರಲ್ಲಿದ್ದ ಕೋಟ್ಯಂತರ ಮೌಲ್ಯದ ಆಸ್ತಿ ನವೀನ್​ನ ಕಣ್ಣನ್ನು ಕುಕ್ಕುವಂತೆ ಮಾಡುತ್ತಿತ್ತು. ದಿನಕಳೆದಂತೆ ನವೀನ್​ನನ್ನು ಅರ್ಚನಾ ಮನೆ ಕೆಲಸದವನಂತೆ ಬಳಸಿಕೊಳ್ಳುತ್ತಾ, ಆತನಿಂದ ದೂರವಾಗಲು ಯತ್ನಿಸುತ್ತಿದ್ದಳು. ಇದನ್ನು ಅರಿತು ಆಕೆಯ ಮಗಳ ಮೇಲೆ ನವೀನ್​ ಕಣ್ಣು ಹಾಕಿದ್ದ. ಯುವಿಕಾಳ ಜತೆಗೆ ಅತಿ ಸಲುಗೆಯಿಂದ ಇದ್ದ. ಬೆಂಗಳೂರು ಸುತ್ತಮುತ್ತಾ ಯಾವುದೇ ಜಿಮ್​ಗಳಿಗೆ ಹೋದರೂ ಅಲ್ಲಿಗೆಲ್ಲಾ ಅರ್ಚನಾಳ ಮಗಳು ಯುವಿಕಾ ರೆಡ್ಡಿಯನ್ನು ನವೀನ್​ ಕರೆದೊಯ್ಯುತ್ತಿದ್ದ. ಅತಿಯಾದ ಸಲುಗೆ ಪರಿಣಾಮ ಇಬ್ಬರೂ ಜಿಗಣಿಯ ಮಧುಮಿತ್ರ ಲೇಔಟ್​ನಲ್ಲಿ ವಾಸವಿದ್ದರು. ಈ ವಿಚಾರ ಅರ್ಚನಾ ರೆಡ್ಡಿಗೆ ಗೊತ್ತಾಗಿ ಗಲಾಟೆ ಮಾಡಿದ್ದಳು.

ಕೊಲೆ ಆರೋಪಿ ನವೀನ್​

ಕೊನೆಗೆ ಆಕೆಯನ್ನ ಮುಗಿಸಲು ಸಹಚರರಾದ ಅನುಪ್ ಮತ್ತು ಸಂತೋಷ್​ ಜತೆ ಸಂಚು ರೂಪಿಸಿದ್ದ ನವೀನ್​, ಡಿ.27ರ ರಾತ್ರಿ ಹೊಸೂರು ರಸ್ತೆ ಹೊಸರಸ್ತೆ ಜಂಕ್ಷನ್​ ಬಳಿ ನಡುರಸ್ತೆಯಲ್ಲೇ ಅರ್ಚನಾ ರೆಡ್ಡಿಯನ್ನು ಕೊಲೆ ಮಾಡಿದ್ದ. ಇಷ್ಟೆಲ್ಲಾ ಬೆಳವಣಿಗೆ ಬಳಿಕವೂ ಯುವಿಕಾ ರೆಡ್ಡಿ ಕೊಲೆ ಆರೋಪಿ ಮನೆಯಲ್ಲೇ ಇದ್ದಳಂತೆ!

ನವೀನ್​ ಜತೆ ಅನುಪ್​ ಮತ್ತು ಸಂತೋಷ್​

ಇನ್ನು ಅರ್ಚನಾಳ ಕೊಲೆಯಲ್ಲಿ ಭಾಗಿಯಾದ ಅನುಪ್​ ಮತ್ತು ಸಂತೋಷ್​ರ ಹಿನ್ನೆಲೆಯೂ ಕೆಟ್ಟದ್ದಾಗೆ ಇದೆ. ಉತ್ತರಪ್ರದೇಶ ಮೂಲದಿಂದ ಬೆಂಗಳೂರಿಗೆ ಬಂದಿದ್ದ ಅನೂಪ್ ಮೊದಲು ಬೀಡಾ ಅಂಗಡಿ ನಡೆಸುತ್ತಿದ್ದ. ಫೀಲ್ಡ್​ನಲ್ಲಿ ಹೆಸರು ಮಾಡಬೇಕೆಂದು ರೌಡಿಸಂಗೆ ಇಳಿಸಿದ್ದ. ಆಗ ಪರಿಚಯವಾದವನೇ ಈ ನವೀನ್. ಈತನ ಜತೆ ಸೇರಿ ಅನುಪ್​ ಐಷಾರಾಮಿ ಜೀವನ ನಡೆಸುತ್ತಿದ್ದ.

ಇನ್ನೊಬ್ಬ ಆರೋಪಿ ಸಂತೋಷ್, ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯದ ನಿವಾಸಿ. ಯಾವುದೋ ಸಂಘಟನೆ ಹೆಸರಲ್ಲಿ ಓಡಾಡಿಕೊಂಡಿದ್ದ ಈತ, ಬಿಂದಾಸ್ ಲೈಫ್ ಲೀಡ್ ಮಾಡುವ ಆಸೆಯಲ್ಲಿ ನವೀನ್​ನ ಸಹವಾಸ ಮಾಡಿದ್ದ. ಪ್ರತಿದಿನ ನವೀನ್ ಜತೆ ಓಡಾಡಿಕೊಂಡಿದ್ದ. ಅರ್ಚನಾ ರೆಡ್ಡಿಯ ಬೆಂಗಾವಲಿನಂತೆ ಕೆಲಸ ಮಾಡಿಕೊಂಡಿದ್ದ. ಕೊನೆಗೆ ನವೀನ್ ಜತೆ ಸೇರಿ ಕೊಲೆಗೆ ಸಾಥ್ ಕೊಟ್ಟಿದ್ದ.

ನವೀನ್​ 3ನೇ ಸಂಬಂಧ: ಮೊದಲು ಅರವಿಂದ್​ ಎಂಬಾತನನ್ನು ಪ್ರೀತಿಸಿ ಅರ್ಚನಾ ರೆಡ್ಡಿ ಮದುವೆ ಆಗಿದ್ದಳು. ಈ ದಂಪತಿಗೆ ಒಂದು ಗಂಡು ಮತ್ತು ಹೆಣ್ಣು ಮಗು ಜನಿಸಿತ್ತು. ಕೆಲ ವರ್ಷದ ಬಳಿಕ ವಿಚ್ಛೇದನ ಪಡೆದ ಅರ್ಚನಾಗೆ ಗಂಡನಿಂದ ಸುಮಾರು 15 ಕೋಟಿ ರೂ. ಪರಿಹಾರ ಸಿಕ್ಕಿತ್ತಂತೆ. ನಂತರ ರಿಯಲ್ ಎಸ್ಟೇಟ್ ಬಿಜಿನೆಸ್​ ಮಾಡಿಕೊಂಡು ಬೆಂಗಳೂರಿನ ಕೆಲ ರೌಡಿಗಳ ಸಂಪರ್ಕ ಹೊಂದಿದ್ದಳಂತೆ. ಸಿದ್ದಿಕ್​ನ ಜತೆ ಮೂರು ವರ್ಷ ಸಹಬಾಳ್ವೆ ಮಾಡಿದ ಅರ್ಚನಾ, ಆತನಿಂದಲೂ ದೂರವಾಗಿ ನವೀನ್​ ಜತೆ ಸ್ನೇಹ ಬೆಳೆಸಿ ಲಿವೀಂಗ್ ಟುಗೇದರ್​ನಲ್ಲಿದ್ದಳು.