ಸಾಂದರ್ಭಿಕ ಚಿತ್ರ 
ಜಿಲ್ಲೆ

ಎಸಿಬಿ ರಚನೆಯನ್ನೇ ರದ್ದುಪಡಿಸಿದ ಹೈಕೋರ್ಟ್: ಎಲ್ಲ ಕೇಸು ಲೋಕಾಯುಕ್ತಕ್ಕೆ ವರ್ಗಾಯಿಸಲು ಆದೇಶ

ಬೆಂಗಳೂರು: ಲೋಕಾಯುಕ್ತ ವ್ಯಾಪ್ತಿಗೆ ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ) ಸೇರ್ಪಡೆ ಮಾಡಿ ಹೈಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ. ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವಂತೆ ಸೂಚಿಸಿದ್ದು, ಎಲ್ಲ ಲೋಕಾಯುಕ್ತ ಪೊಲೀಸ್ ಠಾಣೆಗಳು ಮರು ಸ್ಥಾಪನೆಯಾಗಲಿವೆ. ಎಸಿಬಿಯಲ್ಲಿರುವ ಪೊಲೀಸರು ಲೋಕಾಯುಕ್ತ ವ್ಯಾಪ್ತಿಗೆ ಬರಲಿದ್ದಾರೆ.

ಎಸಿಬಿ ರಚನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘ, ಸಮಾಜ ಪರಿವರ್ತನಾ ಸಮುದಾಯ ಹಾಗೂ ವಕೀಲ ಚಿದಾನಂದ ಅರಸ್​ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಎಚ್​.ಎಸ್​. ಹೇಮಲೇಖಾ ಅವರಿದ್ದ ಪೀಠ ಗುರುವಾರ ಪ್ರಕಟಿಸಿದ್ದು, ಎಸಿಬಿ ರಚನೆಯನ್ನೇ ರದ್ದುಪಡಿಸಿ ಆದೇಶಿಸಿದೆ. ಇದುವರೆಗೆ ಎಸಿಬಿ ನಡೆಸಿರುವ ತನಿಖೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಬಾಕಿ ಇರುವ ಎಲ್ಲ ಪ್ರಕರಣಗಳನ್ನೂ ತಕ್ಷಣವೇ ಲೋಕಾಯುಕ್ತಕ್ಕೆ ವರ್ಗಾಯಿಸಬೇಕು ಎಂದು ಮಹತ್ವದ ಆದೇಶ ಹೊರಡಿಸಿದೆ.

ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುವ ಅಧಿಕಾರವನ್ನು ಮತ್ತೆ ಲೋಕಾಯುಕ್ತಕ್ಕೆ ಹಸ್ತಾಂತರಿಸಿರುವ ಹೈಕೋರ್ಟ್​, ಲೋಕಾಯುಕ್ತ, ಉಪ ಲೋಕಾಯುಕ್ತರ ನೇಮಕಾತಿ ಹಾಗೂ ಲೋಕಾಯುಕ್ತ ಬಲವರ್ಧನೆ ವಿಚಾರವಾಗಿ ಸರ್ಕಾರಕ್ಕೆ ಹಲವು ಶಿಫಾರಸುಗಳನ್ನೂ ಮಾಡಿದೆ.

ಎಸಿಬಿ ರದ್ದು, ಲೋಕಾಯುಕ್ತಕ್ಕೇ ಪವರ್​: ಎಸಿಬಿ ರಚನೆ ಮಾಡಿ 2016ರ ಮಾ.14ರಂದು ಹೊರಡಿಸಿರುವ ಆದೇಶ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಅಪರಾಧ ದಾಖಲು ಮತ್ತು ತನಿಖೆಗೆ ಸಂಬಂಧಿಸಿದಂತೆ ಇದ್ದ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಂದ ಹಿಂಪಡೆದು 2016ರ ಮಾ.19ರಂದು ಹೊರಡಿಸಿರುವ ಅಧಿಸೂಚನೆಯನ್ನು ಸರ್ಕಾರ ಸರಿಯಾಗಿ ಸಮರ್ಥಿಸಿಕೊಂಡಿಲ್ಲ. ಆದ್ದರಿಂದ, ಸರ್ಕಾರದ ಅಧಿಸೂಚನೆಗಳನ್ನು ರದ್ದುಪಡಿಸಲಾಗುತ್ತಿದೆ ಎಂದು ಹೈಕೋರ್ಟ್​ ತೀರ್ಪಿನಲ್ಲಿ ಹೇಳಿದೆ.

ಸರ್ಕಾರದ ಆದೇಶಗಳು ವಜಾಗೊಂಡ ಹಿನ್ನೆಲೆಯಲ್ಲಿ ಎಸಿಬಿ ರದ್ದಾಗಿದೆ. ಆದರೆ, ಎಸಿಬಿ ಮುಂದೆ ಬಾಕಿರುವ ತನಿಖೆ, ವಿಚಾರಣೆ, ಶಿಸ್ತುಕ್ರಮ ಪ್ರಕ್ರಿಯೆಗಳು ಲೋಕಾಯುಕ್ತಕ್ಕೆ ವರ್ಗಾವಣೆಯಾಗಲಿವೆ. ಎಸಿಬಿ ಮುಂದಿರುವ ಎಲ್ಲ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆ ಆಗಿರುವುದರಿಂದ ಆರೋಪಿಗಳು ಕಾನೂನಿನಿಂದ ತಪ್ಪಿಸಿಕೊಳ್ಳಲಾಗದು ಎಂದೂ ನ್ಯಾಯಾಲಯ ಹೇಳಿದೆ. ಜತೆಗೆ, 1991ರ ಫೆ.6, 2002ರ ಫೆ.8, 2002ರ ಮೇ 8, 2002ರ ಡಿ.5ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸುವ ಸಂಬಂಧ ಹೊರಡಿಸಿದ್ದ ಆದೇಶಗಳನ್ನು ಮರುಸ್ಥಾಪಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ.

ಪ್ರಾಮಾಣಿಕರನ್ನು ನೇಮಕ ಮಾಡಿ: ಭ್ರಷ್ಟಾಚಾರ ನಿಮೂರ್ಲನ ಮಾಡಲು ಹಾಗೂ ಕರ್ನಾಟಕ ಲೋಕಾಯುಕ್ತ ಕಾಯ್ದೆ ಹಾಗೂ ವಿಸ್ತೃತ ನೆಲೆಯಲ್ಲಿ ನ್ಯಾಯದಾನವನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆಯ ಸೆನ್​ಗಳಾದ 3(2)ಎ ಮತ್ತು 3(2)ಬಿ ಅಡಿ ಸಾರ್ವಜನಿಕ ಮತ್ತು ಖಾಸಗಿ ಬದುಕಿನಲ್ಲಿ ಅತ್ಯುತ್ತಮ ಹಿನ್ನೆಲೆ, ಪ್ರಾಮಾಣಿಕತೆ ಹೊಂದಿರುವ, ಸಮರ್ಥ, ನ್ಯಾಯಯುತವಾಗಿ ನಡೆದುಕೊಳ್ಳುವವರನ್ನು ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಹುದ್ದೆಗೆ ಶಿಫಾರಸು ಮಾಡಬೇಕು ಎಂದು ಸಾಂವಿಧಾನಿಕ ಪ್ರಾಧಿಕಾರಗಳಿಗೆ ಮನವಿ ಮಾಡುತ್ತಿರುವುದಾಗಿ ಹೈಕೋರ್ಟ್​ ತೀರ್ಪಿನಲ್ಲಿ ಹೇಳಿದೆ.

ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ನೇಮಕಾತಿಯ ಸಂದರ್ಭದಲ್ಲಿ ಜಾತಿ&ಮತ ಇತ್ಯಾದಿಗಳಿಂದ ಪ್ರೇರಣೆಗೆ ಒಳಗಾಗಬಾರದು. ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಮತ್ತು ಆ ಪ್ರಕ್ರಿಯೆ ರಾಜಕೀಯದಿಂದ ಹೊರತಾಗಿರಬೇಕು. ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಹುದ್ದೆಗಳು ಯಾರನ್ನೋ ಒಳಗೊಳ್ಳುವ ಕೇಂದ್ರಗಳಾಗಬಾರದು ಎಂದು ನ್ಯಾಯಲಯ ಸರ್ಕಾರಕ್ಕೆ ಸಲಹೆ ನೀಡಿದೆ.

ಸರ್ಕಾರಕ್ಕೆ ಕೋರ್ಟ್​ ಶಿಫಾರಸು

- ಕರ್ನಾಟಕ ಲೋಕಾಯುಕ್ತ ಕಾಯ್ದೆ ಸೆಕ್ಷನ್​ 12(4)ಕ್ಕೆ ತುರ್ತಾಗಿ ತಿದ್ದುಪಡಿ ಮಾಡುವ ಅಗತ್ಯವಿದೆ. ಉತ್ತಮ ಹಿನ್ನೆಲೆ ಹೊಂದಿರುವ ಪೊಲೀಸ್​ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸ್​ ದಳಕ್ಕೆ ನೇಮಕ ಮಾಡುವ ಮೂಲಕ ಅದನ್ನು ಸದೃಢಗೊಳಿಸಬೇಕು.

- ಎಸಿಬಿಗೆ ನಿಯೋಜಿಸಿರುವ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸ್​ ದಳಕ್ಕೆ ವರ್ಗಾಯಿಸಬೇಕು. ಎಸಿಬಿಯಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಲೋಕಾಯುಕ್ತದ ಆಡಳಿತಕ್ಕೆ ಒಳಪಡಲಿದ್ದಾರೆ.

- ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಅನುಮತಿ ಪಡೆಯದೆ ಕನಿಷ್ಠ ಮೂರು ವರ್ಷ ಸೇವಾವಧಿ ಪೂರ್ಣಗೊಳಿಸದ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಲೋಕಾಯುಕ್ತದಿಂದ ವರ್ಗಾಯಿಸುವಂತಿಲ್ಲ.

- ಒಮ್ಮೆ ತನಿಖೆ ಆರಂಭಿಸಿದ ಬಳಿಕ ರ್ನಿದಿಷ್ಟ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ನ್ಯಾಯಾಲಯದ ಮುಂದಿರುವ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.