ಜಿಲ್ಲೆ

ನಟ ಅರ್ಜುನ್ ಸರ್ಜಾರ ತಾಯಿ ಲಕ್ಷ್ಮೀ ದೇವಮ್ಮ ವಿಧಿವಶ

arunakunigal

ಮಧುಗಿರಿ: ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ತಾಯಿ, ಹಿರಿಯ ನಟ ಶಕ್ತಿಪ್ರಸಾದ್ ಅವರ ಪತ್ನಿ ಲಕ್ಷ್ಮೀ ದೇವಮ್ಮ (85) ಶನಿವಾರ ನಿಧನರಾದರು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮೀದೇವಿ ಅವರನ್ನು 10 ದಿನಗಳ ಹಿಂದೆ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶನಿವಾರ ವಿಧಿವಶವಾದರು.

ಇಂದು ಸಂಜೆ ಸ್ವಗ್ರಾಮ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿಯಲ್ಲಿ ಲಕ್ಷ್ಮೀದೇವಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನ ಬೆಂಗಳೂರಿನ ನಿವಾಸದಲ್ಲಿ ಕೆಲಕಾಲ ಅಂತಿಮ ದರ್ಶನಕ್ಕೆ ‌ವ್ಯವಸ್ಥೆ ಮಾಡಲಾಗಿದೆ.

ತುಮಕೂರು ಜಿಲ್ಲಾ ಪರಿಷತ್ ಮಾಜಿ ಸದಸ್ಯರಾಗಿದ್ದ ಲಕ್ಷ್ಮೀದೇವಮ್ಮ ಅವರು ಜಕ್ಕೇನಹಳ್ಳಿಯ ಅಹೋಬಲಪತಿ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಅಧ್ಯಕ್ಷೆಯಾಗಿ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದರು.

ಲಕ್ಷ್ಮೀದೇವಮ್ಮ ಅವರಿಗೆ ಕಿಶೋರ್ ಸರ್ಜಾ, ಅರ್ಜುನ್ ಸರ್ಜಾ ಮತ್ತು ಅಮ್ಮಾಜಿ ಸೇರಿ ಮೂವರು ಮಕ್ಕಳು. ಕಿಶೋರ್ ಸರ್ಜಾ ಈಗಾಗಲೇ ಮೃತರಾಗಿದ್ದಾರೆ. ನಟರಾದ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ, ಸೂರಜ್ ಸರ್ಜಾ ಅವರು ಮೊಮ್ಮಕ್ಕಳು. ಚಿರಂಜೀವಿ ಸರ್ಜಾ ಅವರ ಅಗಲಿಕೆಯಿಂದ ಲಕ್ಷ್ಮೀದೇವಮ್ಮ ಬಹಳ ನೊಂದಿದ್ದರು.