ಬೆಳಗಾವಿ: ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಬಿಡುಗಡೆಯಾಗಿದ್ದ ಅನುದಾನ ನೀಡಲು ಲಂಚ ಕೇಳಿದ ಮುಜರಾಯಿ ಇಲಾಖೆ ತಹಸೀಲ್ದಾರ್ ಸೇರಿ ಇಬ್ಬರು ಎಸಿಬಿ ಪೊಲೀಸರ ಬಲೆ ಬಿದ್ದಿದ್ದಾರೆ.
ತಹಸೀಲ್ದಾರ್ ದಶರಥ ನಕುಲ ಜಾಧವ ಮತ್ತು ಇವರ ಸಂಬಂಧಿ ಸಂತೋಷ ಕಡೋಲಕರ ಬಂಧಿತರು.
ರಾಮದುರ್ಗದಲ್ಲಿನ ಯಕಲಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆಯ ಆರಾಧನಾ ಯೋಜನೆ ಅಡಿಯಲ್ಲಿ 4 ಲಕ್ಷ ರೂ. ಮಂಜೂರಾಗಿತ್ತು. ಅನುದಾನ ಬಿಡುಗಡೆಗಾಗಿ ನಕುಲ ಜಾಧವ 20 ಸಾವಿರ ರೂ. ಬೇಡಿಕೆ ಇಟ್ಟಿದ್ದರು.
ದೇವಸ್ಥಾನದ ಸುಭಾಷ ಗೋಡಕೆ ಎಂಬುವರು ಎಸಿಬಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ತಹಸೀಲ್ದಾರ್ ಪರವಾಗಿ ಲಂಚ ಸ್ವೀಕರಿಸುತ್ತಿದ್ದ ಸಂತೋಷ ಕಡೋಲಕರನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳಿಕ ಇದೇ ಪ್ರಕರಣದಲ್ಲಿ ತಹಸೀಲ್ದಾರ್ನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಎಸಿಬಿ ಎಸ್ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಗಳಾದ ಅಡಿವೇಶ ಗುದಿಗೊಪ್ಪ ಹಾಗೂ ಸುನಿಲಕುಮಾರ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.