ಜಿಲ್ಲೆ

ವಿದ್ಯಾರ್ಥಿನಿಗೆ ವಕೀಲನಿಂದ ಲೈಂಗಿಕ ಕಿರುಕುಳ​: 2 ತಿಂಗಳ ಬಳಿಕ ಇಂದು ಕೋರ್ಟ್​ಗೆ ಶರಣಾದ ಆರೋಪಿ

ಮಂಗಳೂರು: ಇಂಟರ್ನ್​ಶಿಪ್​ಗೆಂದು ಬಂದಿದ್ದ ಕಾನೂನು ಪದವಿ ವಿದ್ಯಾರ್ಥಿನಿಯೊಬ್ಬರ ಮೇಲೆ ತನ್ನ ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಹೊತ್ತು ತಲೆಮರೆಸಿಕೊಂಡಿದ್ದ ಮಂಗಳೂರು ಮೂಲದ ವಕೀಲ ಕೆ.ಎಸ್​. ಎನ್​. ರಾಜೇಶ್​ ಭಟ್​ ಕೊನೆಗೂ ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾರೆ.

ಕೆ.ಎಸ್​.ಎನ್​. ರಾಜೇಶ್ ಭಟ್​ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಉತ್ತರ ಪ್ರದೇಶ ಮೂಲದ ವಿದ್ಯಾರ್ಥಿನಿ ಅ.19ರಂದು ದೂರು ದಾಖಲಿಸಿದ್ದರು. ರಾಜೇಶ್​ರ ಕಚೇರಿಯಲ್ಲಿ ಇಂಟರ್ನ್​ಶಿಪ್ ಮಾಡಲು ಬಂದಿದ್ದ ವಿದ್ಯಾರ್ಥಿನಿಗೆ ಕಚೇರಿಯಲ್ಲೇ ಲೈಂಗಿಕ ಕಿರುಕುಳ ನೀಡಿದ್ದರು. ಖಾಸಗಿ ಅಂಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದರು ಎಂದು ರಾಜೇಶ್​ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದರು. ದೂರು ನೀಡುವ ಮುನ್ನ, ಅಂದರೆ ಘಟನೆ ಬಳಿಕ ಸಂತ್ರಸ್ತೆಗೆ ಕರೆ ಮಾಡಿದ್ದ ರಾಜೇಶ್​, ಗೊತ್ತಿಲ್ಲದೆ ತಪ್ಪು ಮಾಡಿದೆ. ಇನ್ನು ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ. ದಯವಿಟ್ಟು ಕಚೇರಿಗೆ ಬಾ ಎಂದು ಕಣ್ಣೀರಿಟ್ಟಿದ್ದರು ಎನ್ನಲಾದ ಆಡಿಯೋ ವೈರಲ್​ ಆಗಿತ್ತು. ಲೈಂಗಿಕ ಕಿರುಕುಳದ ಜತೆಗೆ ಜೀವ ಬೆದರಿಕೆ ಹಾಕಿರುವ ಬಗ್ಗೆಯೂ ಪ್ರಕರಣ ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆರೋಪಿ, ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ದೂರು ದಾಖಲಾದ ಬಳಿಕ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದ ರಾಜೇಶ್, ಇಂದು (ಸೋಮವಾರ) ಮಂಗಳೂರಿನ ಮೂರನೇ ಜೆಎಂಎಫ್​ಸಿ ಕೋರ್ಟ್​ಗೆ ಶರಣಾಗಿದ್ದಾರೆ.