ರಬಕವಿ/ಬನಹಟ್ಟಿ: ಜಿಲ್ಲೆಯ ನೂತನ ರಬಕವಿ ಬನಹಟ್ಟಿ ತಾಲೂಕಿನ ಹನಗಂಡಿ ಗ್ರಾಮ ರಾಜ್ಯದಲ್ಲೇ ಕಂಚಿನ ಹಾಗೂ ಪಂಚಲೋಹದ ಪ್ರತಿಮೆಗಳನ್ನು ತಯಾರಿಸಲು ಹೆಸರು ಮಾಡಿದೆ. ಅಲ್ಲಿನ ಶ್ರೀಧರ ಗೌರಿಮನಿಯವರು 25 ಕೆಜಿ ಬೆಳ್ಳಿಯ ಅಂಬಾರಿ ತಯಾರಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಅವರು ತ್ರಿವೆಂದ್ರಂ ಮಿಲಟರಿ ಕ್ಯಾಂಪಸ್‌ನಲ್ಲಿ ಇಡಲು ಈ ಬೆಳ್ಳಿ ಅಂಬಾರಿ ತಯಾರಿಸಿದ್ದು, ಇದು ನೋಡುಗರನ್ನು ಆಕರ್ಷಿಸುತ್ತಿದೆ. ಇದು ತ್ರಿವೆಂದ್ರಂ ಮಿಲಿಟರಿ ಕ್ಯಾಂಪಸ್‌ನಲ್ಲಿ ಭವಾನಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡಲು ಇದನ್ನು ತಯಾರಿಸಿದ್ದು ಒಟ್ಟು 25 ರಿಂದ 30 ಲಕ್ಷ ರೂವರೆಗೆ ಆಗಿದೆ. ಆರ್ಮಿ ಕ್ಯಾಂಪಸ್‌ನಲ್ಲಿಟ್ಟು ತಾವು ಕೆಲಸಕ್ಕೆ ತೆರಳುವ ಮುನ್ನ ಅಲ್ಲಿನ ಭವಾನಿ ಮಾತೆಯನ್ನು ಪೂಜಿಸಲು ನಿರ್ಮಿಸಲಾಗಿದೆ ಎನ್ನುತ್ತಾರೆ ಶ್ರೀಧರ ಗೌರಿಮನಿ.
ಗೌರಿಮನಿ ಮನೆತನದ 4ನೇ ತಲೆಮಾರಿನಿಂದಲೂ ಈ ಕಂಚಗಾರ ಕೆಲಸ ನಡೆಯುತ್ತ ಬಂದಿದೆ. ಸ್ವಾತಂತ್ರ ಪೂರ್ವದಲ್ಲಿಯೂ ಇವರು ದೇಶದ ಅನೇಕ ರಾಜ್ಯಗಳಿಗೆ ಕಂಚಿನ ಅಂದರೆ ಪಂಚಲೋಹದ ಪ್ರತಿಮೆಗಳನ್ನು ಮಾಡಿ ಕೊಡುವುದರಲ್ಲಿ ಅಪಾರ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅದರಲ್ಲೂ ಹನಗಂಡಿ ಗ್ರಾಮದಲ್ಲಿ ಅನೇಕ ಕುಟುಂಬಗಳು ಇಂದಿಗೂ ಕಂಚಗಾರಿಕೆಯಲ್ಲಿ ತೊಡಗಿದ್ದಾರೆ. ಗೌರಿಮನಿ ಮನೆತನದವರು ಮುಂಚೂಣಿಯಲ್ಲಿದ್ದಾರೆ. ಇವರು ತಮಿಳುನಾಡು, ಆಂಧ್ರಪ್ರದೇಶ ಈಗಿನ ತೆಲಂಗಾಣ, ಮಹಾರಾಷ್ಟ್ರ, ಕೇರಳ, ಗೋವಾ ಸೇರಿ ಅನೇಕ ರಾಜ್ಯಗಳ ಹೆಸರಾಂತ ವ್ಯಕ್ತಿಗಳ ಹಾಗೂ ದೇಶಪ್ರೇಮದ ವ್ಯಕ್ತಿಗಳ ಪ್ರತಿಮೆ ನಿರ್ಮಿಸಿ ಹೆಸರು ಗಳಿಸಿದ್ದಾರೆ.
ಅದರಲ್ಲೂ ರಾಜ್ಯದಲ್ಲಿ ಸಂಗೊಳ್ಳಿ ರಾಯಣ್ಣ, ವಿವೇಕಾನಂದರು, ವೀರರಾಣಿ ಚನ್ನಮ್ಮ, ಬಸವೇಶ್ವರರು, ಗಾಂಧೀಜಿ, ಸುಭಾಷಚಂದ್ರ ಭೋಷ್ ಸೇರಿ ದೇಶದ ಗಡಿ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ವೀರಮರಣವನ್ನಪ್ಪಿದ ವೀರಯೋಧರ ಪ್ರತಿಮೆಗಳನ್ನೂಮಾಡಿದ್ದೇವೆ ಎನ್ನುತ್ತಾರೆ ಕಲೆಗಾರ ಕಂಚಗಾರ ಶ್ರೀಧರ ಅವರು.
ಬಸವಣ್ಣ ದೇವರು, ಕಾಳಿಕಾದೇವಿ, ಬೃಹತ್ ಕಂಚಿನ ಗಂಟೆಗಳು, ಕಂಚಿನ ಆಮೆ, ದೇವಸ್ಥಾನಗಳ ಮೇಲಿನ ಬೃಹತ್ ಕಲಶಗಳು ಸೇರಿ ಅನೇಕ ಮಾದರಿಯ ಮತ್ತು ಭಕ್ತರು ಹೇಳಿದಂತೆ ಪ್ರತಿಮೆಗಳನ್ನು ಮಾಡಿಕೊಡುತ್ತಾರೆ. ನಮ್ಮ ಭಾರತೀಯ ಸಂಪ್ರದಾಯವನ್ನು ಎತ್ತಿಹಿಡಿಯುವ ಕಾಯಕದಲ್ಲಿ ನಿರತರಾದ ಗೌರಿಮನಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ.