ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯ ಮತ್ತು ಉತ್ತರ ಪತ್ರಿಕೆ ಮೌಲ್ಯಮಾಪನ ಕೆಲಸದಲ್ಲಿ ಭಾಗಿಯಾಗುವ ಸಿಬ್ಬಂದಿಗೆ ನೀಡಲಾಗುತ್ತಿರುವ ಸಂಭಾವನೆ ದರವನ್ನು ಶೇ.20ಕ್ಕೆ ಹೆಚ್ಚಳ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಜತೆಗೆ 3 ಷರತ್ತು ವಿಧಿಸಿದೆ. ಅಂದಹಾಗೇ ಇದು ಮುಂದಿನ 3 ವರ್ಷ ಜಾರಿಯಲ್ಲಿರಲಿದೆ.
ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಯುಜಿಸಿ ವೇತನ ಪಡೆಯುವ ಉಪನ್ಯಾಸಕರಿಗೆ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ಮಾತ್ರವನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳನ್ವಯ ನೀಡತಕ್ಕದ್ದು. ಇವರಿಗೆ ಬೇರೆ ಯಾವುದೇ ಸಂಭಾವನೆ ನೀಡುವಂತಿಲ್ಲ. ಈ ಪರೀಕ್ಷಾ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಬೋಧಕ ಸಿಬ್ಬಂದಿ ಎಸಗುವ ತಪ್ಪುಗಳಿಗೆ ವಿಧಿಸಲಾಗುವ ದಂಡದ ಬಗ್ಗೆ ಸೂಕ್ತವಾದ ನಿಯಮಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕು. ಇದಕ್ಕೆ ತಗಲುವ ವೆಚ್ಚವನ್ನು ಯೋಜನೇತರ ಅಡಿಯಲ್ಲಿ ಪ್ರಸ್ತುತ ವರ್ಷದಲ್ಲಿ ಇಲಾಖೆಗೆ ಒದಗಿಸಿರುವ ಅನುದಾನದ ಮಿತಿಯಲ್ಲಿಯೇ ಭರಿಸಬೇಕೆಂದು ತಿಳಿಸಿದೆ.
ಮೊದಲು 3 ಗಂಟೆ ಅವಧಿಯ ಕನ್ನಡ ಆವೃತ್ತಿಯಲ್ಲದ ಪ್ರಶ್ನೆ ಪತ್ರಿಕೆ ತಯಾರಿಸಲು ಪ್ರತಿ ಒಬ್ಬರಿಗೆ 2082 ರೂ. ನಿಗದಿ ಪಡಿಸಿತ್ತು. ಇದನ್ನು 2,498 ರೂ.ಗೆ ಹೆಚ್ಚಿಸಲಾಗಿದೆ. ವಾಹನ ಚಾಲಕರಿಗೆ ನೀಡಲಾಗುತ್ತಿದ್ದ 696 ರೂ. ಅನ್ನು 1253 ರೂ.ಗೆ ಏರಿಕೆ ಮಾಡಲಾಗಿದೆ. ಈ ರೀತಿ ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸಿರುವ ಹಾಗೂ ಮೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗಿರುವ ಸಿಬ್ಬಂದಿಗೆ ಶೇ.20 ಹೆಚ್ಚಳವಾಗಲಿದೆ.