- ಮಡಿಕೇರಿ : ಸುಂಟಿಕೊಪ್ಪ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಶ್ರೀ ಮಳೂರು ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವ ಅಂಗವಾಗಿ ಜರುಗಿದ ಎತ್ತು ಪೋರಾಟ್, ಚೌರಿಕುಣಿತ, ಶ್ರೀ ದೇವರ ಉತ್ಸವ ಮೂರ್ತಿಯ ನೃತ್ಯ ಬಲಿ ಹಾಗೂ ವಿಶೇಷ ಪೂಜಾ ಕೈಂಕರ್ಯ ಭಕ್ತಾದಿಗಳ ಸಮುಖದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಸಂಪನ್ನ್ನಗೊಂಡಿತು.
ಉಲುಗುಲಿ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಬೆಳ್ಳಾರಿಕ್ಕಮ್ಮ ಉತ್ಸವದ ಅಂಗವಾಗಿ ಕಳೆದ 7 ದಿನಗಳ ಕಾಲ ಸುಂಟಿಕೊಪ್ಪ, ಉಲುಗುಲಿ, ಆಂಜನಗೇರಿ ಬೇಟಗೇರಿ, ಹರದೂರು ಗ್ರಾಮಸ್ಥರು ವಾಡಿಕೆಯಂತೆ ವ್ರತದಲ್ಲಿದ್ದು, ವಾರದ ನಂತರ ದೇವಾಲಯದಲ್ಲಿ ಚೌರಿಕುಣಿತದೊಂದಿಗೆ ದೇವಿಗೆ ಪೂಜೆ ಸಲ್ಲಿಸಿದರು.
- ಕೊನೆಯ ದಿನವಾದ ಸೋಮವಾರ ಕೊಡವ ಮತ್ತು ಗೌಡ ಮನೆತನದ ಪುರುಷರು ಮತ್ತು ಯುವಕರು ಕೊಡಗಿನ ಸಾಪ್ರಾದಾಯಿಕ ಕೊಡವರ ಉಡುಪು ಕುಪ್ಯ ಚಾಲೆ ಮತ್ತು ಗೌಡ ಜನಾಂಗದ ಕುಪ್ಪಸ ದಟ್ಟಿ ಬಿಳಿ ಉಡುಪು ಧರಿಸಿ ದೇವಾಲಯದ ಭಂಡಾರವನ್ನು ಗ್ರಾಮದ ಮಂದನ ರಮೇಶ್ ಅವರ ಮನೆಯಿಂದ ಎತ್ತಿನ ಮೂಲಕ ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತಂದು ದೇವಾಲಯಕ್ಕೆ ಸಮರ್ಪಿಸಿದರು.
- ಗ್ರಾಮಸ್ಥರಿಂದ ಈಡುಗಾಯಿ ಎತ್ತು ಪೋರಾಟ್, ಚೌರಿಕುಣಿತ ಜರುಗಿತು. ಬಳಿಕ ಬೆಳ್ಳಾರಿಕ್ಕಮ್ಮ ಉತ್ಸವಮೂರ್ತಿಯನ್ನು ದೇವಸ್ಥಾನ ಆವರಣದಲ್ಲಿ ಪ್ರದಕ್ಷಿಣೆ ಹಾಕಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಅರ್ಚಕರಾದ ಗಣೇಶ್ ಶರ್ಮ, ಮಂಜುನಾಥ ಉಡುಪ, ಮಂಜುನಾಥ್ ಶರ್ಮ ದಿನದ ಪೂಜಾ ಕೈಂಕರ್ಯ ನೆರವೇರಿಸಿದರು.
- ಅಲ್ಲದೆ ದೇವಾಲಯದ ಆವರಣದಲ್ಲಿನ ವಸಂತ ಕಟ್ಟೆಯಲ್ಲಿ ನಡೆದ ದೇವರ ಉತ್ಸವ ಮೂರ್ತಿಯ ಪೂಜೆ ಮತ್ತು ಉತ್ಸವ ಮೂರ್ತಿಯ ನೃತ್ಯ ಬಲಿ ಹಾಗೂ ದರ್ಶನ ಬಲಿ ವಿಶೇಷವಾಗಿ ಗಮನ ಸೆಳೆಯಿತು. ಸುತ್ತಲ ಗ್ರಾಮಗಳ ನೂರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.