ಜಿಲ್ಲೆ

9ರಂದು ಆರೋಗ್ಯ ಶಿಬಿರ, ಅಂಗಾಂಗ ದಾನ ನೋಂದಣಿ

ಬೆಳ್ತಂಗಡಿ: ಅಳದಂಗಡಿ ಸತ್ಯದೇವತಾ ದೈವಸ್ಥಾನದಲ್ಲಿ ಪ್ರತಿ ವರ್ಷದಂತೆ ನಡೆಯುವ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಆಲಡ್ಕ ಹಿಂದು ಯುವ ಶಕ್ತಿ ಬಳಗ ಕೈಜೋಡಿಸಿಕೊಂಡು ಬರುತ್ತಿದ್ದು, ಈ ವರ್ಷ ಜೂ.9ರಂದು ನಡೆಯುವ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ಅಂಗಾಂಗ ದಾನ ನೋಂದಣಿ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಆಲಡ್ಕ ಹಿಂದು ಯುವ ಶಕ್ತಿ ಬಳಗದ ಅಧ್ಯಕ್ಷ ದೇವದಾಸ ಸಾಲಿಯಾನ್ ಹೇಳಿದರು.

ಸೋಮವಾರ ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಳದಂಗಡಿ ಸತ್ಯ ದೇವತಾ ದೈವಸ್ಥಾನದಲ್ಲಿ ಪ್ರತಿ ವರ್ಷ ಮಾಡುತ್ತಿರುವ ಪುಸ್ತಕ ವಿತರಣೆಯಲ್ಲಿ ಕೈಜೋಡಿಸಿಕೊಂಡು ಬರುತ್ತಿದ್ದು, ಈ ಬಾರಿ 6000 ಮಕ್ಕಳಿಗೆ ಪುಸ್ತಕ ವಿತರಣೆ, ಯೋಧರಿಗೆ, ಖ್ಯಾತ ಮುಳುಗು ತಜ್ಞ ಈಶ್ವರ ಮಲ್ಪೆ, ಸಬಿತಾ ಮೋನಿಸ್ ಗರ್ಡಡಿ ಅವರಿಗೆ ಸಮಾರೋಪ ಸಮಾರಂಭದಲ್ಲಿ ಸನ್ಮಾನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ರಮೇಶ್ ಅರವಿಂದ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಹಿಂದು ಯುವ ಶಕ್ತಿ ಬಳಗದಿಂದ ಕೆಎಂಸಿ ಸಹಕಾರದಲ್ಲಿ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಜತೆಗೆ ಅಂಗಾಂಗ ದಾನ ನೋಂದಣಿ ನಡೆಯಲಿದೆ. ಈಗಾಲೇ ಸುಮಾರು 60 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಸಂಘಟನೆ 8 ವರ್ಷದಿಂದ ಹಲವು ಸಮಾಜಮುಖಿ ಕಾರ್ಯಕ್ರಮ ಮಾಡಿದ್ದು, ಮೂರು ಮನೆ ನಿರ್ಮಾಣ, 15 ಲಕ್ಷ ರೂ.ಗೂ ಮಿಕ್ಕಿ ವೈದ್ಯಕೀಯ ಚಿಕಿತ್ಸಾ ವೆಚ್ಚ ಇನ್ನಿತರ ಸೇವಾ ಕಾರ್ಯ ಮಾಡುತ್ತಾ ಬರುತ್ತಿದೆ ಎಂದರು.
ಹಿಂದು ಯುವ ಶಕ್ತಿ ಬಳಗದ ಕಾರ್ಯದರ್ಶಿ ಸಂತೋಷ ಕಟ್ಟೆ, ಸಂಘಟಕರಾದ ಪೂರ್ಣೇಶ್, ವಿಶ್ವನಾಥ ಬಂಗೇರ, ಸುರೇಂದ್ರ ಕೋಟ್ಯಾನ್ ಉಪಸ್ಥಿತರಿದ್ದರು.