ಬೆಂಗಳೂರು: ಅಂತರ್ಜಲ ಕುಸಿತದಿಂದ ಬತ್ತಿಹೋಗಿರುವ ಕೊಳವೆಬಾವಿಗಳಿಗೆ ಮರುಜೀವ ನೀಡುವ ಪ್ರಯತ್ನಕ್ಕೆ ಬೆಂಗಳೂರು ಜಲಮಂಡಳಿ ಮುಂದಾಗಿದ್ದು, ಮಳೆನೀರು ಇಂಗಿಸುವಿಕೆಯ ಭಾಗವಾಗಿ ಕಳೆದ 15 ದಿನಗಳ ಅವಧಿಯಲ್ಲಿ 986 ಇಂಗುಗುಂಡಿಗಳನ್ನು ನಿರ್ಮಿಸಿದೆ.
ಬೆಂಗಳೂರು ನಗರದಲ್ಲಿ ಪ್ರತಿ ವರ್ಷ ಸರಾಸರಿ 845 ಮಿಲಿಮೀಟರ್ನಷ್ಟು ಮಳೆಯಾಗುತ್ತದೆ. ಆದರೆ, ಮಳೆ ನೀರೆಲ್ಲವೂ ಚರಂಡಿ ಸೇರುತ್ತಿದೆ. ಹೀಗೆ ಪೋಲಾಗುತ್ತಿರುವ ನೀರನ್ನು ತಡೆಯಲು ಜಲಮರುಪೂರಣಗೊಳಿಸಿದರೆ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ. ಈ ನೆಲೆಯಲ್ಲಿ ಜಲಮಂಡಳಿ ಕ್ರಮ ಕೈಗೊಂಡಿದೆ. "ಜಲಮಂಡಳಿಯಿಂದ ಮಳೆಗಾಲ ಆರಂಭಕ್ಕೂ ಮುನ್ನ 1 ಸಾವಿರ ಇಂಗುಗುಂಡಿಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ 986 ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ' ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ.
ಜಲಮಂಡಳಿ ವ್ಯಾಪ್ತಿಯಲ್ಲಿ ಬತ್ತಿಹೋಗಿರುವ ಕೊಳವೆಬಾವಿಗಳ ಪಕ್ಕದಲ್ಲಿ 12 ಅಡಿ ಆಳ ಹಾಗೂ 3 ಅಡಿ ಅಗಲ ಅಳತೆಯಲ್ಲಿ ಗುಂಡಿ ತೋಡಲಾಗುತ್ತಿದೆ. ಬಳಿಕ ಸಿಮೆಂಟ್ ರಿಂಗ್ಗಳನ್ನು ಅಳವಡಿಸಿ, ಸುತ್ತಲೂ ಜಲ್ಲಿ ಕಲ್ಲುಗಳನ್ನು ಹಾಕಿ ಕ್ರಮಬದ್ಧವಾಗಿ ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದಿದ್ದಾರೆ.
ಜಲಮಂಡಳಿ ವ್ಯಾಪ್ತಿಯಲ್ಲಿ ಬತ್ತಿಹೋಗಿರುವ ಕೊಳವೆಬಾವಿಗಳಿಗೆ ಮಳೆ ನೀರು ಮರುಪೂರಣಕ್ಕೆ ಆದ್ಯತೆ ನೀಡಿದ್ದೇವೆ. ಜತೆಗೆ ವಿವಿಧ ಬಡಾವಣೆ, ಅಪಾರ್ಟ್ಮೆಂಟ್ ಸೇರಿದ 74 ಜಾಗಗಳಲ್ಲಿ ಸಾಮೂಹಿಕವಾಗಿ ಮಳೆನೀರು ಕೊಯ್ಲು ಪದ್ಧತಿ ಅಳವಡಿಸಲಾಗಿದೆ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಮಳೆನೀರು ಇಂಗಲಿದೆ. ಇದರಿಂದ ಬತ್ತಿರುವ ಕೊಳವೆ ಬಾವಿಗಳಲ್ಲಿ ಮತ್ತೆ ನೀರು ಲಭ್ಯವಾಗುವ ವಿಶ್ವಾಸವಿದೆ ಎಂದು ಡಾ.ವಿ.ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ.