ಜಿಲ್ಲೆ

98 ಮಂದಿಗೆ ಕರೊನಾ ಪಾಸಿಟಿವ್ ; ತುಮಕೂರು ಜಿಲ್ಲೆಯಲ್ಲಿ ಈವರೆಗೆ 2509 ಮಂದಿಗೆ ಸೋಂಕು

ತುಮಕೂರು: ಜಿಲ್ಲೆಯಲ್ಲಿ 98 ಮಂದಿಗೆ ಶನಿವಾರ ಕರೊನಾ ಸೋಂಕು ದೃಢವಾಗಿದೆ. ಇನ್ನೂ ಚಿಕಿತ್ಸೆ ಲಕಾರಿಯಾಗದೆ ನಾಲ್ವರು ಮೃತಪಟ್ಟಿದ್ದು ಆತಂಕ ಮೂಡಿಸಿದೆ.

ತುಮಕೂರು ತಾಲೂಕಿನಲ್ಲಿ ಕರೊನಾ ಆರ್ಭಟ ಮುಂದುವರಿದಿದ್ದು ಇವತ್ತು ಒಂದೇ ದಿನ 28 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈವರೆಗೆ ತಾಲೂಕು ಒಂದರಲ್ಲೇ ಸೋಂಕಿತರ ಸಂಖ್ಯೆ 1009ಕ್ಕೆ ಮುಟ್ಟಿದೆ. ಕುಣಿಗಲ್ 17, ಗುಬ್ಬಿ 14, ತುರುವೇಕೆರೆ 13, ಪಾವಗಡ 9, ಮಧುಗಿರಿ 6, ಚಿಕ್ಕನಾಯಕನಹಳ್ಳಿ 4, ಕೊರಟಗೆರೆ 3 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ ಶಿರಾ ಹಾಗೂ ತಿಪಟೂರಿನಲ್ಲಿ ತಲಾ ಇಬ್ಬರಲ್ಲಿ ಸೋಂಕು ದೃಢವಾಗಿದೆ. ಜಿಲ್ಲೆಯಲ್ಲಿ ಈವರೆಗೆ 2509 ಮಂದಿಗೆ ಸೋಂಕು ತಗುಲಿದೆ.

ಕರೊನಾ ಶನಿವಾರ ಮತ್ತೆ ನಾಲ್ವರನ್ನು ಬಲಿ ಪಡೆದಿದೆ. ಓರ್ವ ಮಹಿಳೆ ಸೇರಿ ನಾಲ್ವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಿಪಟೂರಿನ ಓರ್ವರು ಹಾಗೂ ತುಮಕೂರಿನ ಮೂವರು ಕರೊನಾಕ್ಕೆ ಬಲಿಯಾಗಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 74ಕ್ಕೇರಿಕೆಯಾಗಿದೆ.

ಜ್ವರ, ತೀವ್ರ ಉಸಿರಾಟ ತೊಂದರೆ, ಅಸ್ತಮಾದಿಂದ ಬಳಲುತ್ತಿದ್ದು, ತಿಪಟೂರು ನಗರ ಪೊಲೀಸ್ ಟೌನ್ ಬಡಾವಣೆಯ 62 ವರ್ಷದ ವೃದ್ಧೆ ಜುಲೈ 30 ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಆ.5 ರಂದು ಮೃತಪಟ್ಟಿದ್ದಾರೆ. ತುಮಕೂರಿನ ಸತ್ಯಮಂಗಲದ 60 ವರ್ಷದ ವೃದ್ಧನಿಗೆ ಜ್ವರ, ಕೆಮ್ಮು, ವಾಂತಿ, ಮೈಕೈ ನೋವು ಕಾಣಿಸಿಕೊಂಡಿದ್ದು ಆ.6ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಶುಕ್ರವಾರ ಮೃಪಟ್ಟಿದ್ದು ಸೋಂಕು ಇರುವುದು ದೃಢಪಟ್ಟಿದೆ.

ಕ್ಯಾತಸಂದ್ರದ 32 ವರ್ಷದ ವ್ಯಕ್ತಿ ಜ್ವರ, ಉಸಿರಾಟ ತೊಂದರೆ, ಕೆಮ್ಮಿನಿಂದ ಬಳಲುತ್ತಿದ್ದು, ಆ.3ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ನಗರದ ಬಾರ್‌ಲೈನ್ ರಸ್ತೆಯ 40 ವರ್ಷದ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿದ್ದು ಜು.22 ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆ.5 ರಂದು ಮೃತಪಟ್ಟಿದ್ದಾರೆ. ಎಲ್ಲರ ಅಂತ್ಯಕ್ರಿಯೆಯನ್ನು ಕೋವಿಡ್ ಮಾರ್ಗಸೂಚಿ ಅನ್ವಯ ಮಾಡಲಾಗಿದೆ.

37 ಮಹಿಳೆಯರಲ್ಲಿ ಸೋಂಕು !: ತುಮಕೂರಿನ ಓರ್ವ ಗರ್ಭಿಣಿ, ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದೆ. 98 ಮಂದಿಯಲ್ಲಿ 37 ಮಹಿಳೆಯರು ಸೋಂಕಿಗೆ ತುತ್ತಾಗಿದ್ದಾರೆ. 61 ಪುರುಷರಲ್ಲಿ ಸೋಂಕು ದೃಢಪಟ್ಟಿದೆ. 60 ವರ್ಷ ಮೇಲ್ಪಟ್ಟ 17 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಐದುವರ್ಷದೊಳಗಿನ 1 ಹೆಣ್ಣುಮಗುವಿಗೆ ಸೋಂಕು ದೃಢವಾಗಿದೆ.

90 ಮಂದಿ ಗುಣಮುಖ: ಒಂದೇ ದಿನ 90 ಮಂದಿ ಗುಣಮುಖರಾಗಿ ಬಿಡುಗಡೆಯಾಗಿರುವುದು ತುಸು ನೆಮ್ಮದಿ ತಂದಿದೆ. ಈವರೆಗೆ 1459 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ. ಒಟ್ಟು 976 ಸಕ್ರಿಯ ಪ್ರಕರಣಗಳಿದ್ದು 13 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.