ಚನ್ನರಾಯಪಟ್ಟಣ : ಕೆಎಎಡಿಬಿ ಕೈಗಾರಿಕೆಗಳ ಅಭಿವೃದ್ಧಿಯ ಹೆಸರಲ್ಲಿ ಹೋಬಳಿ ವ್ಯಾಪ್ತಿಯ 13 ಗ್ರಾಮಗಳ 1,777 ಎಕರೆ ಕೃಷಿಭೂಮಿ ಸ್ವಾಧೀನ ವಿರೋಧಿಸಿ ಸ್ಥಳೀಯ ಬಹುಪಾಲು ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ 975ದಿನಗಳು ಪೂರೈಸುತ್ತಿದ್ದು, ಸರ್ಕಾರಗಳು ಬದಲಾದರೂ ರೈತರ ಸಮಸ್ಯೆ ಮಾತ್ರ ಬಗೆಹರಿದಿಲ್ಲ.
ತಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಬಿಡುವುದಿಲ್ಲ ಎಂದು ಪ್ರತಿಭಟಿಸುತ್ತಿದ್ದ ರೈತರನ್ನು ಹಲವು ಬಾರಿ ಮಾತುಕತೆಗೆ ಕರೆದರೂ ಯಾವುದೇ ತೀರ್ಮಾನ ತೆಗೆದುಕೊಳ್ಳದ ಸರ್ಕಾರ ದಿನಗಳನ್ನು ದೂಡುತ್ತಿದೆ. ವಿರೋಧಪಕ್ಷದಲ್ಲಿದ್ದಾಗ ರೈತರನ್ನು ಉಳಿಸುವ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಅಧಿಕಾರಕ್ಕೆ ಬಂದ ಮೇಲೆ ಮರೆಗುಳಿಗಳಂತೆ ವರ್ತಿಸುತ್ತಿರುವುದು ಜನಪರ ಎಂದು ಕರೆದುಕೊಳ್ಳುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಧರಣಿನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಉಸ್ತುವಾರಿ ಸಚಿವರು, ಬೃಹತ್ ಕೈಗಾರಿಕಾ ಸಚಿವರು ಮತ್ತು ರೈತರ ಸಭೆ ಕರೆದು ಮಾತುಕತೆ ನಡೆಸಿ, ತಮ್ಮ ಮಾತಿನಂತೆ ಚನ್ನರಾಯಪಟ್ಟಣ ಹೋಬಳಿಯ ಉದ್ದೇಶಿತ ಭೂಸ್ವಾಧೀನವನ್ನು ರದ್ದುಗೊಳಿಸುವ ಘೋಷಣೆ ಮಾಡಬೇಕೆಂದು ರೈತರು ಒತ್ತಾಯಿಸಿದರು.
ತಪ್ಪಿದಲ್ಲಿ ಶೀಘ್ರವಾಗಿ ತೀವ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ. ಇನ್ನು ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ರೈತರು ಎಚ್ಚರಿಕೆ ನೀಡಿದರು.
ಹಿರಿಯ ವಕೀಲ ಬಿ.ಟಿ.ವೆಂಕಟೇಶ್ ಮಾತನಾಡಿ, ಹೋರಾಟದ ಹೊರತಾಗಿ ಭೂಮಿ ಉಳಿಸಿಕೊಳ್ಳಲು ಬೇರೆ ಮಾರ್ಗಗಳಿಲ್ಲ. ರೈತರು ಪೊಲೀಸರಿಗೆ, ಸರ್ಕಾರದ ಯಾವ ಬೆದರಿಕೆಗಳಿಗೆ ಹೆದರದೆ ತಮ್ಮ ಹೋರಾಟವನ್ನು ಮುಂದುವರಿಸಿರಿ. ಯಾವುದೇ ಸಂದರ್ಭದಲ್ಲಿ ಬೇಕಾದರು ನಮ್ಮ ವಕೀಲರ ಸೈನ್ಯ ನಿಮ್ಮೊಂದಿಗಿರುತ್ತದೆ. ಗೌರವಯುತವಾಗಿ ನಡೆಸಿಕೊಂಡವರಿಗೆ ನಾವು ಗೌರವ ಕೊಡೋಣ. ರೈತರನ್ನು ಕಡೆಗಣಿಸುತ್ತಿರುವ ಸರ್ಕಾರಗಳಿಗೆ ನಮ್ಮ ಗೌರವ ಪಡೆಯುವ ಯೋಗ್ಯತೆ ಇಲ್ಲ, ಅವರಿಗೆ ಅವರದೇ ಭಾಷೆಯಲ್ಲಿ ಉತ್ತರ ಕೊಡೋಣ ಎಂದರು.
ಪ್ರಾಂತ ರೈತ ಸಂಘದ ಯಶವಂತ್ ಮಾತನಾಡಿ, ಸಾವಿರ ದಿನಗಳನ್ನು ಸಮೀಪಿಸುತ್ತಿರುವ ಹೋರಾಟ, ಇಂದಿನ ಸರ್ಕಾರಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿ. ಬಂಡವಾಳಶಾಹಿಗಳ ಗುಲಾಮರಾಗಿ ವರ್ತಿಸುತ್ತಿರುವ ಸರ್ಕಾರಗಳು ರೈತರ ಪರವಾಗಿರಲು ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶಾಶ್ವತ ನೀರಾವರಿ ಹೋರಾಟಗಾರರಾದ ಆಂಜನರೆಡ್ಡಿ, ಹೋರಾಟಗಾರ ಕಾರಳ್ಳಿ ಶ್ರೀನಿವಾಸ್ ಅವರು ರೈತರೊಂದಿಗೆ ಸಂವಾದ ನಡೆಸಿ, ಸಾವಿರ ದಿನಗಳ ಹೋರಾಟ ರೈತರ ಸಾಧನೆ. ಆದರೆ, ಅದು ರೈತ ಹೋರಾಟಗಳ ಮೈಲಿಗಲ್ಲಾಗಬೇಕಾದರೆ ನಾವು ಗೆಲ್ಲಲೇ ಬೇಕು. ಅದಕ್ಕಾಗಿ ಎಂತಹ ತ್ಯಾಗಕ್ಕೂ ನಾವು ಸಿದ್ಧರಾಗಬೇಕು. ನಾಳೆ ಪ್ರಗತಿ ಪರಿಶೀಲನೆ ಸಭೆಗೆ ಬರುತ್ತಿರುವ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಭೇಟಿ ಮಾಡಿ, ಬೆಳಗಾವಿ ಅಧಿವೇಶನ ಪ್ರಾರಂಭವಾಗುವ ಮೊದಲು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಬೇಕು. ತಪ್ಪಿದಲ್ಲಿ ಸಾವಿರ ದಿನದ ಸಂದರ್ಭದಲ್ಲಿ ಸರ್ಕಾರಗಳಿಗೆ ಸರಿಯಾದ ಪಾಠ ಕಲಿಸುವ ಉಗ್ರ ಹೋರಾಟಕ್ಕೆ ಯೋಜನೆ ರೂಪಿಸೋಣ ಎಂದು ಹೇಳಿದರು. ತಹಸೀಲ್ದಾರ್ ಬಾಲಕೃಷ್ಣ ಅವರು ರೈತರ ಮನವಿ ಪತ್ರ ಸ್ವೀಕರಿಸಿದರು. ರೈತ ಹೋರಾಟಗಾರರಾದ ಹನುಮಂತರಾಯಪ್ಪ, ನರಸಪ್ಪ, ತಿಮ್ಮರಾಯಪ್ಪ, ಮುಖಂಡರಾದ ನಲ್ಲಪ್ಪನಹಳ್ಳಿ ನಂಜಪ್ಪ, ಮಾರೇಗೌಡ, ಜಯರಾಮೇಗೌಡ, ರಾಮಚಂದ್ರಪ್ಪ, ನಾರಾಯಣಮ್ಮ, ವೆಂಕಟಮ್ಮ, ಮೋಹನ್, ಅಶ್ವತ್ಥಪ್ಪ, ಗೋಪಿನಾಥ್ ಸೇರಿದಂತೆ ನೂರಾರು ರೈತರು, ರೈತಮಹಿಳೆಯರು ಭಾಗವಹಿಸಿದ್ದರು.
ಹಿಂದಿನ ಜನವಿರೋಧಿ, ಕೋಮುವಾದಿ ಸರ್ಕಾರ ಅಧಿಕಾರಕ್ಕೆ ಬರಬಾರದು ಎನ್ನುವ ಕಾರಣಕ್ಕೆ ಅವರ ವಿರುದ್ಧ ಎಲ್ಲ ಜನಪರ ಸಂಘಟನೆಗಳು ಕೆಲಸಮಾಡಿದ ಪರಿಣಾಮವಾಗಿ ಇಂದಿನ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ, ಅವರ ಬಂಡವಾಳಶಾಹಿಗಳ ಪರವಾದ ವರ್ತನೆ ನಾವೆಂದೂ ಸಹಿಸುವುದಿಲ್ಲ. ಮಾತು ತಪ್ಪಿದ ಸರ್ಕಾರಗಳಿಗೆ ಅತಿಶೀಘ್ರದಲ್ಲಿ ಸರಿಯಾಗಿ ಬುದ್ದಿ ಕಲಿಸೋಣ. -ಮಾವಳ್ಳಿ ಶಂಕರ್ ಪ್ರಧಾನ ಸಂಚಾಲಕ, ದಸಂಸ