ಜಿಲ್ಲೆ

9,638 ರೈತರಿಗೆ ‘ಕಿಸಾನ್ ಸಮ್ಮಾನ’ ಪ್ರೋತ್ಸಾಹಧನ ಕೈತಪ್ಪುವ ಭೀತಿ

ನರೇಗಲ್ಲ: ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ 6 ಸಾವಿರ ರೂ. ಪ್ರೋತ್ಸಾಹ ಧನ ಪಡೆಯಲು ರೈತರು ಇ- ಕೆವೈಸಿ ಮಾಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ತಾಂತ್ರಿಕ, ವಲಸೆ ಹೋಗಿರುವುದು ಸೇರಿದಂತೆ ಹಲವು ಕಾರಣಗಳಿಂದ ಗಜೇಂದ್ರಗಡ, ರೋಣ ಅವಳಿ ತಾಲೂಕಿನಲ್ಲಿ ಒಟ್ಟು 9,638 ರೈತರು ಇ- ಕೆವೈಸಿ ಮಾಡಿಸಿಲ್ಲ. ಹೀಗಾಗಿ ಈ ಯೋಜನೆಯ ಲಾಭದಿಂದ ಇವರು ವಂಚಿತರಾಗುವ ಸಾಧ್ಯತೆ ಹೆಚ್ಚಿದೆ.

ಆದಾಯ ತೆರಿಗೆ ಕಟ್ಟುವವರು, ಸರ್ಕಾರಿ ನೌಕರರು, ನಿವೃತ್ತ ನೌಕರರು ಸೇರಿ ಅನರ್ಹರು ಯೋಜನೆಯ ಪ್ರಯೋಜನ ಪಡೆಯದಿರಲಿ ಎಂದು ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ರೈತ ಸಂಪರ್ಕ ಕೇಂದ್ರ, ನಾಗರಿಕ ಸೇವಾ ಕೇಂದ್ರ, ಗ್ರಾಮ್ ಒನ್, ಕರ್ನಾಟಕ ಒನ್ ಸೇರಿ ಖಾಸಗಿ ಕಂಪ್ಯೂಟರ್ ಕೇಂದ್ರಗಳಲ್ಲಿ ಮೊಬೈಲ್ ಸಂಖ್ಯೆ ಲಿಂಕ್ ಇರುವ ಆಧಾರ್ ಕಾರ್ಡ್ ಒಯ್ದು ಇ-ಕೆವೈಸಿ ಮಾಡಿಸಬಹುದಾಗಿದೆ.

ರೋಣ ಹೋಬಳಿಯ 34 ಗ್ರಾಮಗಳ 3,821 ರೈತರು, ಹೊಳೆಆಲೂರ ಹೋಬಳಿಯ 23 ಗ್ರಾಮಗಳ 2,714 ರೈತರು ಹಾಗೂ ನರೇಗಲ್ಲ ಹೋಬಳಿಯ 35 ಗ್ರಾಮಗಳ 3,103 ರೈತರು ಸೇರಿ ಅವಳಿ ತಾಲೂಕಿನ ಒಟ್ಟು 9,638 ರೈತರು ಇ-ಕೆವೈಸಿ ಮಾಡಿಸಬೇಕಿದೆ. ಅರ್ಹರ ಬ್ಯಾಂಕ್ ಖಾತೆಗೆ ಈಗಾಗಲೇ 13 ಕಂತುಗಳ ಹಣ ವರ್ಗಾವಣೆಯಾಗಿದ್ದು, 14ನೇ ಕಂತು ಬರಬೇಕಿದೆ.

ಸಮಸ್ಯೆ ಏನು: ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್‌ಬುಕ್ ನೀಡಿ ಎಫ್‌ಐಡಿ ( ಫಾರ್ಮರ್ಸ್‌ ಯುನಿಕ್ ಐಡಿ) ಮಾಡಿಸಬೇಕು. ನಂತರದಲ್ಲಿ ಇ-ಕೆವೈಸಿ ಮಾಡಿಸಬೇಕು. ಈ ಕೆವೈಸಿ ಮಾಡಿಸಲು ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು. ಲಿಂಕ್ ಇಲ್ಲದ ಆಧಾರ್ ಕಾರ್ಡ್‌ನಿಂದ ಇ-ಕೆವೈಸಿ ಮಾಡಲು ಸಾಧ್ಯವಿಲ್ಲ. ಆಧಾರ್‌ಗೆ ಮೊಬೈಲ್‌ಸಂಖ್ಯೆ ಲಿಂಕ್ ಇಲ್ಲದಿರುವುದು ಒಂದು ಸಮಸ್ಯೆಯಾದರೆ, ಪಹಣಿ ಕುಟುಂಬದ ಮೃತ ವ್ಯಕ್ತಿಯ ಹೆಸರಿನಲ್ಲಿದ್ದು, ಅವರ ಆಧಾರ್ ಸಂಖ್ಯೆ ಇಲ್ಲದಿರುವುದು ಮತ್ತೊಂದು ಸಮಸ್ಯೆ. ಅಂತಹ ರೈತರು ಜಮೀನನ್ನು ವಾರಸಾ ಪ್ರಕಾರ ತಮ್ಮ ಹೆಸರಿಗೆ ಬದಲಾವಣೆ ಮಾಡಿಕೊಂಡಿಲ್ಲ. ಜಮೀನು ವಾರಸಾ ಪ್ರಕಾರ ಮಾಡಿಕೊಂಡರೆ ಸಾಲದು, ಕೃಷಿ ಇಲಾಖೆಯ ತಂತ್ರಾಂಶದಲ್ಲಿ ಮೃತರ ಹೆಸರನ್ನು ತೆಗೆದು ಹಾಕಲು ಮೃತರ ಮರಣ ಪ್ರಮಾಣಪತ್ರ ನೀಡಿ ಅರ್ಜಿ ಸಲ್ಲಿಸಬೇಕು. ನಂತರದಲ್ಲಿ ಮೃತರ ಹೆಸರನ್ನು ತೆಗೆದು ಹಾಕಿ, ಪಹಣಿಯಲ್ಲಿರುವವರ ಹೆಸರನ್ನು ನೋಂದಣಿ ಮಾಡಲಾಗುತ್ತದೆ. ಬಹಳಷ್ಟು ಜನರು ಪಹಣಿಯನ್ನು ಮಾತ್ರ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಆದರೆ, ಕೃಷಿ ಇಲಾಖೆಯಲ್ಲಿ ಮೃತರ ಹೆಸರಿನಲ್ಲಿಯೇ ಇದೆ. ಇದರಿಂದಾಗಿಯೂ ಇ-ಕೆವೈಸಿಗೆ ಹಿನ್ನಡೆಯಾಗಿದೆ.

ಈ ಗೊಂದಲಕ್ಕೆ ವಲಸೆ ಪ್ರಮುಖ ಕಾರಣವಾಗಿದೆ. ಜಮೀನು ಅವಳಿ ತಾಲೂಕಿನಲ್ಲಿದ್ದು, ಜಮೀನಿನ ಮಾಲೀಕರು ದುಡಿಯಲು ಪರಸ್ಥಳಗಳಿಗೆ ಹೋಗಿರುತ್ತಾರೆ. ಅವರೂ ಇ-ಕೆವೈಸಿ ಮಾಡಿಸಿಲ್ಲ. ಹೀಗೆ ಹಲವು ಕಾರಣಗಳಿಂದ ಕಿಸಾನ್ ಸಮ್ಮಾನ್ ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲ.

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಸದುಪಯೋಗಕ್ಕೆ ಇ-ಕೆವೈಸಿ ಕಡ್ಡಾಯವಾಗಿದೆ. ಈ ಬಗ್ಗೆ ಕೃಷಿ ಇಲಾಖೆಯಿಂದ ಸಾಕಷ್ಟು ಪ್ರಚಾರ ಮತ್ತು ತಿಳಿವಳಿಕೆ ನೀಡಲಾಗಿದೆ. ರೈತರ ಮೊಬೈಲ್‌ಗಳಿಗೆ ಗ್ರುಪ್ ಕಾಲ್, ಎಸ್‌ಎಂಎಸ್ ಹಾಗೂ ರೈತರ ಮನೆ ಬಾಗಿಲಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ. ಸಿಎಸ್‌ಸಿ ಕೇಂದ್ರ, ಗ್ರಾಮ ಒನ್ ಸೇವಾ ಕೇಂದ್ರದ ಸಿಬ್ಬಂದಿಗೂ ಈ ಬಗ್ಗೆ ತಿಳಿವಳಿಕೆ ನೀಡಲಾಗಿದೆ.-ರವೀಂದ್ರಗೌಡ ಪಾಟೀಲ ಸಹಾಯಕ ಕೃಷಿ ನಿರ್ದೇಶಕ, ರೋಣ