ಜಿಲ್ಲೆ

ಅಪಾಯದಲ್ಲಿ 96,321 ಮಂದಿ; ಆರೋಗ್ಯ ಇಲಾಖೆ ಸಾರ್ವತ್ರಿಕ ಸಮೀಕ್ಷೆ; 232 ಮಂದಿಗೆ ಕರೊನಾ ಸೋಂಕಿನ ಲಕ್ಷಣ

Bengaluru Rural

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ: ಕರೊನಾ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕೈಗೊಂಡಿರುವ ಸಾರ್ವತ್ರಿಕ ಆರೋಗ್ಯ ಸಮೀಕ್ಷೆಯಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ 96,321 ಮಂದಿ ಹೈ ರಿಸ್ಕ್‌ನಲ್ಲಿರುವುದು ಪತ್ತೆಯಾಗಿದೆ.

ಮೇ 10ರಿಂದ ನಡೆದ ಸಮೀಕ್ಷೆಯಲ್ಲಿ ಮನೆಮನೆಗೆ ತೆರಳಿ ಕುಟುಂಬದ ಮಾಹಿತಿ ಸಂಗ್ರಹಿಸಲಾಗಿದೆ. ಕೆಮ್ಮು, ಶೀತಜ್ವರ, ತೀವ್ರ ಉಸಿರಾಟ ತೊಂದರೆ ಜತೆಗೆ ಗರ್ಭಿಣಿಯರು, ಇತರೆ ಕಾಯಿಲೆ ಇರುವವರು ಹಾಗೂ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಎಂದು ವರ್ಗಿಕರಿಸಿ ಅವರ ವಿವರವನ್ನು ಹಾಗೂ ಸಂಪರ್ಕ ಸಂಖ್ಯೆಯನ್ನು ಕಲೆಹಾಕಲಾಗಿದೆ.

2 ಲಕ್ಷ ಪೂರ್ಣ: ಜಿಲ್ಲೆಯಲ್ಲಿ 2,41,693 ಮಂದಿಯ ಸಮೀಕ್ಷೆ ಗುರಿ ಹೊಂದಲಾಗಿತ್ತು. ಇದರಲ್ಲಿ ಇದುವರೆಗೆ 2,092,86 ಮಂದಿ ಸಮೀಕ್ಷೆ ಪೂರ್ಣಗೊಂಡಿದೆ. ಅಂದರೆ ಶೇ.86.59 ಸಮೀಕ್ಷೆಯಂತೆ 96 ಸಾವಿರ ಮಂದಿ ಹೈರಿಸ್ಕ್‌ನಲ್ಲಿದ್ದು, ಈ ಪೈಕಿ 2,630 ಮಂದಿ ಕೆಮ್ಮು, ಜ್ವರ ಮತ್ತಿತರ ರೋಗಲಕ್ಷಣ ಹೊಂದಿದ್ದಾರೆ. 92,133 ಮಂದಿ ಹಿರಿಯ ನಾಗರಿಕರಿದ್ದು, 26,292 ಹಿರಿಯ ನಾಗರಿಕರು ಹೈಬಿಪಿ ಹಾಗೂ ಮಧುಮೇಹದಂಥ ಕಾಯಿಲೆಗೊಳಗಾಗಿದ್ದಾರೆ. ಇದರಲ್ಲಿ 232 ಮಂದಿ ಹಿರಿಯರು ಕರೊನಾ ರೋಗಲಕ್ಷಣ ಹೊಂದಿದ್ದಾರೆ. 7,018 ಮಂದಿ ಗರ್ಭಿಣಿಯರಿರುವುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ರೋಗ ಅಪಾಯ: ಎಸ್‌ಎಆರ್‌ಐ ಲಕ್ಷಣ ಇರುವವರು, ಹಿರಿಯ ನಾಗರಿಕರು, ಮಧುಮೇಹ, ರಕ್ತದೊತ್ತಡ ಹಾಗೂ ಅನ್ಯ ಆರೋಗ್ಯ ಸಮಸ್ಯೆ ಇರುವವರಿಗೆ ಕರೊನಾ ಸೋಂಕು ಬೇಗ ತಗಲುವ ಅಪಾಯವಿದೆ. ಇಂಥ ವ್ಯಕ್ತಿಗಳ ಕುಟುಂಬದ ಬಗ್ಗೆ ಹೆಚ್ಚು ನಿಗಾವಹಿಸುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ಇಂಥವರಿಗೆ ನಿಯಮಿತ ಆರೋಗ್ಯ ತಪಾಸಣೆ ಅಗತ್ಯವಿದೆ. ಇತರರಿಗಿಂತ ಹೆಚ್ಚು ಎಚ್ಚರಿಕೆವಹಿಸಬೇಕಿದೆ. ಕರೊನಾ ಸೋಂಕು ತೀವ್ರವಾಗುತ್ತಿರುವ ದಿನಗಳಲ್ಲಿ ಕುಟುಂಬದ ಸದಸ್ಯರು ಇಂಥವರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಹೊಸಕೋಟೆಯಲ್ಲಿ ಹೆಚ್ಚು: ಗ್ರಾಮಾಂತರ ಜಿಲ್ಲೆಯಲ್ಲಿ ಹೊಸಕೋಟೆ ತಾಲೂಕಿನಲ್ಲಿ ಹೆಚ್ಚಿನ ಕೋವಿಡ್-19 ಪ್ರಕರಣ ಕಂಡುಬಂದಿವೆ. ಅಷ್ಟೇ ಸೀಲ್‌ಡೌನ್ ಪ್ರದೇಶಗಳಲ್ಲಿದ್ದು, ಹೊಸಕೋಟೆ ಕೋವಿಡ್-19 ಹಾಟ್‌ಸ್ಪಾಟ್ ಎನಿಸಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಹೊಸಕೋಟೆಯಲ್ಲಿಯೇ ಕರೊನಾ ಹೆಜ್ಜೆ ಇಟ್ಟಿತ್ತು. ಈಗ ಇದೇ ತಾಲೂಕಿನಲ್ಲಿ ಸೋಂಕು ತೀವ್ರವಾಗುತ್ತಿದೆ. ನೆಲಮಂಗಲ, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕುಗಳಲ್ಲೂ ಕರೊನಾ ಮಾರಿ ತೀವ್ರಗೊಳ್ಳುತ್ತಿದ್ದು, ಸಾರ್ವಜನಿಕರು ಸ್ವಯಂ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಅರೋಗ್ಯ ಇಲಾಖೆ ಮನವಿ ಮಾಡಿದೆ. ಹೋಂ ಕ್ವಾರಂಟೈನ್ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿರುವುದು ಸೋಂಕು ತೀವ್ರತೆ ಪಡೆಯಲು ಮತ್ತೊಂದು ಕಾರಣವಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಸಮೀಕ್ಷೆಯಲ್ಲಿ ಗಮನಕ್ಕೆ ಬಂದಿದೆ.

ಕರೊನಾ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಇತ್ತೀಚಿಗೆ ಸೋಂಕು ತೀವ್ರತೆ ಪಡೆಯುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನತೆ ಎಚ್ಚರಿಕೆ ವಹಿಸಬೇಕು. ಸ್ವಯಂ ರಕ್ಷಣೆ ಮೂಲಕ ಸೋಂಕಿನ ಸರಪಳಿಗೆ ತಡೆ ನೀಡಬೇಕಿದೆ. ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಗರ್ಭಿಣಿಯರು, ಮಕ್ಕಳು, ಹಿರಿಯ ನಾಗರಿಕರು ಎಚ್ಚರಿಕೆ ವಹಿಸಬೇಕು. ರಕ್ತದೊತ್ತಡ, ಮಧುಮೇಹದಂಥ ಕಾಯಿಲೆ ಇರುವವರು ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಕರೊನಾ ಸೋಂಕು ನಿಯಂತ್ರಣಕ್ಕೆ ಅರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು. ಡಾ.ಮಂಜುಳಾದೇವಿ ಜಿಲ್ಲಾ ಆರೋಗ್ಯಾಧಿಕಾರಿ