ಶಿವಮೊಗ್ಗ: ಮನೆ ಬಾಡಿಗೆಗೆ ಪಡೆದುಕೊಳ್ಳುವುದಾಗಿ ಮಿಲಿಟರಿ ಅಧಿಕಾರಿ ಹೆಸರಲ್ಲಿ ಕರೆ ಮಾಡಿದ್ದ ಅಪರಿಚಿತನೊಬ್ಬ ವೈದ್ಯರೊಬ್ಬರಿಗೆ ಆನ್‌ಲೈನ್ ಮೂಲಕ 95,999 ರೂ. ವಂಚಿಸಿದ್ದಾನೆ.
ಆಲ್ಕೊಳ ಸಮೀಪದ ವೈದ್ಯ ಮೋಸ ಹೋದವರು. ವಾರದ ಹಿಂದೆ 99ಎಸಿಆರ್‌ಇ ಆ್ಯಪ್‌ನಲ್ಲಿ ಮನೆ ಬಾಡಿಗೆಗೆ ಇದೆ ಎಂಬ ಪ್ರಕಟಣೆಯನ್ನು ವೈದ್ಯ ನೀಡಿದ್ದರು. ಆ ಪ್ರಕಟಣೆ ನೋಡಿ ಡಾ. ಅಕ್ಷಯ್‌ಕುಮಾರ್ ಹೆಸರಿನಲ್ಲಿ ಫೋನ್ ಮಾಡಿದ್ದ ವ್ಯಕ್ತಿ ತಾನು ಮಿಲಿಟರಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದು ಶಿವಮೊಗ್ಗಕ್ಕೆ ವರ್ಗಾವಣೆ ಆಗಿದೆ. ಜ.20ಕ್ಕೆ ಶಿವಮೊಗ್ಗಕ್ಕೆ ಬಂದು ಭೇಟಿ ಮಾಡುತ್ತೇನೆ. ನಮ್ಮ ಆರ್ಮಿ ಕಚೇರಿಯಿಂದ ಮುಂಗಡ ಹಣ ಹಾಕುವುದಾಗಿ ಹೇಳಿ ಗೂಗಲ್ ಪೇ ಆ್ಯಪ್ ಆನ್ ಮಾಡಿಕೊಳ್ಳುವಂತೆ ಸೂಚಿಸಿದ್ದ.
ಆತನ ಮಾತು ನಂಬಿದ ವೈದ್ಯ ಗೂಗಲ್ ಪೇ ಆನ್ ಮಾಡಿಕೊಂಡಾಗ ಲಿಂಕ್ ಬಂದಿತ್ತು. ಆರ್ಮಿಯಲ್ಲಿ ಹಣ ವರ್ಗಾವಣೆಗೆ ಕಡಿವಾಣವಿದ್ದು ತಾವೇ ಹಣ ನಮೂದಿಸಿ ನಿಮ್ಮ ಖಾತೆಗೆ ಜಮಾ ಆಗುತ್ತದೆ ಎಂದಿದ್ದ. ಅವರ ಮಾತು ಕೇಳಿದ ವೈದ್ಯ ಮೊದಲ ಬಾರಿಗೆ 31 ಸಾವಿರ ರೂ., ಆನಂತರ ಕ್ರಮವಾಗಿ 49,999 ರೂ. ಮತ್ತು 15 ಸಾವಿರ ರೂ. ನಮೂದಿಸಿದ್ದರು. ಬಳಿಕ ಬ್ಯಾಂಕ್ ಖಾತೆ ಪರಿಶೀಲಿಸಿದಾಗ 95,999 ರೂ. ಕಡಿತ ಆಗಿರುವುದು ಗಮನಕ್ಕೆ ಬಂದಿದ್ದು ವಂಚನೆಗೆ ಒಳಗಾದ ಬಗ್ಗೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.