ಜಿಲ್ಲೆ

ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಶೇ.96.91 ಮತದಾನ

ಜಿಲ್ಲೆಯಲ್ಲಿ ಶಾಂತಿಯುತ ಪ್ರಕ್ರಿಯೆ-ಕೊನೇ ಕ್ಷಣದವರಿಗೂ ಮತದಾರರ ಮನವೊಲಿಕೆ ಕಸರತ್ತು

ಚಿಕ್ಕಬಳ್ಳಾಪುರ: ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಜಿಲ್ಲೆಯಾದ್ಯಂತ ಸೋಮವಾರ ಸುಗಮವಾಗಿ ನಡೆಯಿತು.
ಹತ್ತು ಮತಗಟ್ಟೆಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ 4ರವರೆಗೆ ಮತದಾರರು ಹಕ್ಕು ಚಲಾಯಿಸಿದ್ದು, ಇದರ ನಡುವೆ ಅಭ್ಯರ್ಥಿಗಳ ಬೆಂಬಲಿಗರು ಮತಕೇಂದ್ರಗಳ ಸಮೀಪದಲ್ಲಿ ಅಳವಡಿಸಿದ್ದ ಶಾಮಿಯಾನದಡಿ ಕುಳಿತು ಕೊನೇ ಕ್ಷಣದವರೆಗೂ ಮತದಾರರ ಮನವೊಲಿಕೆಗೆ ಕಸರತ್ತು ನಡೆಸಿದರು. ಬಹುತೇಕ ಕಡೆ ಕೇಂದ್ರಗಳ ಸುತ್ತಲು ಹೆಚ್ಚಿನ ಮತದಾರ ಶಿಕ್ಷಕರು, ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳು ಠಿಕಾಣಿ ಹೂಡಿದ್ದ ಹಿನ್ನೆಲೆಯಲ್ಲಿ ಜನದಟ್ಟಣೆ ಹೆಚ್ಚಾಗಿತ್ತು. ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.


ಪಕ್ಷಗಳ ತೀವ್ರ ಪೈಪೋಟಿ
ಜಿಲ್ಲಾ ಕೇಂದ್ರದ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ವೈ.ಎ. ನಾರಾಯಣಸ್ವಾಮಿ, ಕಾಂಗ್ರೆಸ್ ಬೆಂಬಲಿತ ಡಿ.ಟಿ. ಶ್ರೀನಿವಾಸ್ ಸೇರಿ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಮತ ಯಾಚಿಸುವಲ್ಲಿ ಪೈಪೋಟಿ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ವಕೀಲ ಕೆ.ಎಂ.ಮುನೇಗೌಡ ಮತ್ತಿತರರು ರಾಜ್ಯ ಸರ್ಕಾರದ ಕೊಡುಗೆಗಳು, ಅಭಿವೃದ್ಧಿ ಕೆಲಸಗಳ ಬಗ್ಗೆ ವಿವರಿಸುವ ಮೂಲಕ ಕೈ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಮತ್ತೊಂದೆಡೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ರಾಮಲಿಂಗಪ್ಪ, ಜಿಪಂ ಮಾಜಿ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ, ನಗರಸಭಾ ಮಾಜಿ ಅಧ್ಯಕ್ಷ ಡಿ.ಎಸ್. ಆನಂದ್ ರೆಡ್ಡಿ ಸೇರಿ ಹಲವರು ವೈ.ಎ.ನಾರಾಯಣಸ್ವಾಮಿ ಪರ ಮತ ಯಾಚಿಸಿದರು.

ನಿಲ್ಲದ ಹಣದ ಆಮಿಷ
ಮತದಾರರಿಗೆ ಹಣ ಹಂಚಿಕೆ ಮೂಲಕ ಆಮಿಷವನ್ನೊಡ್ಡುವಂತಹ ಕಸರತ್ತು ಮತಗಟ್ಟೆಗಳ ಬಳಿ ಕಂಡುಬಂದವು. ಎರಡು ದಿನಗಳ ಹಿಂದೆ ತಲಾ 5 ಸಾವಿರ ರೂ. ಹಂಚಿದ್ದ ಅಭ್ಯರ್ಥಿ ಕಡೆಯವರು ಸೋಮವಾರ ತಲಾ 2 ಸಾವಿರ ರೂ.ಗಳನ್ನು ಮತದಾರರ ಕೈಗಿಟ್ಟರು. ಅಭ್ಯರ್ಥಿಯೊಬ್ಬರು ತಲಾ 5 ಸಾವಿರ ರೂ. ನೀಡಿ, ಒಲವು ಅರಳಿಸಲು ಯತ್ನಿಸಿದರು. ಇನ್ನು ಪಕ್ಷೇತರ ಅಭ್ಯರ್ಥಿಯೊಬ್ಬರು ರಾಜಕೀಯ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಬೆರಗುಗೊಳಿಸುವಂತೆ ತಲಾ 10 ಸಾವಿರ ರೂ. ನೀಡಿದ್ದಾರೆ. ಮೂರು ಕಡೆಯಿಂದಲೂ ಅನೇಕ ಮತದಾರರಿಗೆ ತಲಾ 22 ಸಾವಿರ ರೂ. ಸಿಕ್ಕಿದೆ ಎಂಬುದಾಗಿ ಶಿಕ್ಷಕರೊಬ್ಬರು ಮಾಹಿತಿ ಹಂಚಿಕೊಂಡರು.

ಜಿಲ್ಲೆಯ ವಿವಿಧೆಡೆ ಮತದಾನ ವಿವರ

ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಜಿಲ್ಲೆಯಲ್ಲಿ ಶೇ.96.91ರಷ್ಟು ಮತದಾನವಾಗಿದೆ.
ಈ ಭಾಗದಲ್ಲಿ 2,219 ಪುರುಷರು, 1,541 ಮಹಿಳೆಯರು ಸೇರಿ 3,760 ಮತದಾರರಿದ್ದು, ಈ ಪೈಕಿ 2,152 ಪುರುಷರು, 1,492 ಮಹಿಳೆಯರು ಸೇರಿ 3,644 ಮತದಾರರು ಹಕ್ಕು ಚಲಾಯಿಸಿದ್ದಾರೆ.
ಗೌರಿಬಿದನೂರಿನಲ್ಲಿ 339 ಪುರುಷರು, 240 ಮಹಿಳೆಯರು ಸೇರಿ 579 ಮತದಾರರಿದ್ದು, ಈ ಪೈಕಿ 331 ಪುರುಷರು, 233 ಮಹಿಳೆಯರು ಸೇರಿ 564 ಮಂದಿ ಹಕ್ಕು ಚಲಾಯಿಸಿದ್ದಾರೆ.
ಮಂಚೇನಹಳ್ಳಿಯಲ್ಲಿ 51 ಪುರುಷರು, 23 ಮಹಿಳೆಯರು ಸೇರಿ 74 ಮತದಾರರಿದ್ದು ಈ ಪೈಕಿ 50 ಪುರುಷರು, 23 ಮಹಿಳೆಯರು ಸೇರಿ 73 ಮತದಾರರು ಹಕ್ಕು ಚಲಾಯಿಸಿದ್ದಾರೆ.
ಬಾಗೇಪಲ್ಲಿಯಲ್ಲಿ 257 ಪುರುಷರು, 119 ಮಹಿಳೆಯರು ಸೇರಿ 376 ಮತದಾರರಿದ್ದು, 253 ಪುರುಷರು, 108 ಮಹಿಳೆಯರು ಸೇರಿ 361 ಮತದಾರರು ಮತದಾನ ಮಾಡಿದ್ದಾರೆ.
ಚೇಳೂರಿನಲ್ಲಿ 171 (118 ಪುರುಷರು, 53 ಮಹಿಳೆಯರು) ಮತದಾರರಿದ್ದು, ಈ ಪೈಕಿ 168 (115 ಪುರುಷರು, 53 ಮಹಿಳೆಯರು) ಮಂದಿ ಹಕ್ಕು ಚಲಾಯಿಸಿದ್ದಾರೆ.
ಗುಡಿಬಂಡೆಯಲ್ಲಿ 110 (68 ಪುರುಷರು, 42 ಮಹಿಳೆಯರು) ಮತದಾರರಿದ್ದು, ಈ ಪೈಕಿ 108 (67 ಪುರುಷರು, 41 ಮಹಿಳೆಯರು) ಮಂದಿ ಹಕ್ಕು ಚಲಾಯಿಸಿದ್ದಾರೆ.
ಶಿಡ್ಲಘಟ್ಟದಲ್ಲಿ 484 (270 ಪುರುಷರು, 214 ಮಹಿಳೆಯರು) ಮತದಾರರಿದ್ದು, 468 (259 ಪುರುಷರು, 209 ಮಹಿಳೆಯರು) ಶಿಕ್ಷಕ ಮತದಾರರು ಮತದಾನ ಮಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ 914 (496 ಪುರುಷರು, 418 ಮಹಿಳೆಯರು) ಮತದಾರರಿದ್ದು, 887 (476 ಪುರುಷರು, 408 ಮಹಿಳೆಯರು) ಮಂದಿ ಮತ ಚಲಾಯಿಸಿದ್ದಾರೆ.
ಚಿಂತಾಮಣಿಯಲ್ಲಿ 1052 (620 ಪುರುಷರು, 432 ಮಹಿಳೆಯರು) ಮತದಾರರಿದ್ದು, 1015 (598 ಪುರುಷರು, 428 ಮಹಿಳೆಯರು) ಮತದಾರರು ಹಕ್ಕು ಚಲಾಯಿಸಿದ್ದಾರೆ.


ಮತಗಟ್ಟೆ ಮತದಾರರು ಮತ ಚಲಾವಣೆ ಶೇಕಡವಾರು

ಗೌರಿಬಿದನೂರು 579 564 97.41
ಮಂಚೇನಹಳ್ಳಿ 74 73 98.65
ಬಾಗೇಪಲ್ಲಿ 376 361 96.01
ಚೇಳೂರು 171 168 98.25
ಗುಡಿಬಂಡೆ 110 108 98.18
ಶಿಡ್ಲಘಟ್ಟ 484 468 96.69
ಚಿಕ್ಕಬಳ್ಳಾಪುರ 914 887 97.04
ಚಿಂತಾಮಣಿ 1052 1015 96.48