ಮಡಿಕೇರಿ:
ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಯನ್ನು ನೀಡುತ್ತಿರುವ ಕೊಡವ ಮಕ್ಕಡ ಕೂಟ ಈಗಾಗಲೇ 94 ಪುಸ್ತಕಗಳನ್ನು ಬಿಡುಗಡೆ ಮಾಡಿದ್ದು, ಮಹತ್ವಾಕಾಂಕ್ಷೆಯ 100ನೇ ಪುಸ್ತಕವನ್ನು ನವೆಂಬರ್ ತಿಂಗಳಿನಲ್ಲಿ ಅದ್ದೂರಿಯಾಗಿ ಸಮರ್ಪಿಸಲಾಗುವುದು ಎಂದು ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದ್ದಾರೆ. ಇಲ್ಲಿನ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 94ನೇ ಪುಸ್ತಕ, ಬರಹಗಾರ್ತಿ ಬೊಟ್ಟೋಳಂಡ ನಿವ್ಯಾ ದೇವಯ್ಯ ಅವರ 2ನೇ ಪುಸ್ತಕ "ಏಳ್ ದಿನಕ್ಕೊಮ್ಮ… ಬ್ರಹ್ಮಗಿರಿಲ್" ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
\ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ದಾಖಲೆಯ ಪುಸ್ತಕಗಳನ್ನು ಬಿಡುಗಡೆ ಮಾಡಿ ಹಿರಿಯ ಹಾಗೂ ಕಿರಿಯ ಬರಹಗಾರರಿಗೆ ಪ್ರೋತ್ಸಾಹ ನೀಡಿದೆ. ಯುವ ಬರಹಗಾರರಿಗೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿಂ ತುಂಬಿದೆ. ಕೂಟದ ಮೂಲಕ 99ನೇ ಪುಸ್ತಕವಾಗಿ ಲೇಖಕಿ ತೆನ್ನಿರ ಟೀನಾ ಚಂಗಪ್ಪ ಬರೆದಿರುವ “ಈ ಮಣ್ಣ್ರ ಋಣ" ಕಾದಂಬರಿಯನ್ನು ಅ.26 ರಂದು ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಲಾಗುವುದು. ನೂರನೇ ಪುಸ್ತಕದಲ್ಲಿ ಜಿಲ್ಲೆಯ ಹಿರಿಯ ಹಾಗೂ ಕಿರಿಯ ಲೇಖಕರ ಕನ್ನಡ, ಕೊಡವ, ಮತ್ತು ಇಂಗ್ಲೀಷ್ ಭಾಷೆಯ ಬರಹಗಳು ಹಾಗೂ ಲೇಖನಗಳು ಸಮಗ್ರವಾಗಿ ಅಡಕವಾಗಿರುತ್ತವೆ. ಈಗಾಗಲೇ 35ಕ್ಕೂ ಹೆಚ್ಚು ಲೇಖನಗಳು ಬಂದಿದ್ದು, ಆಸಕ್ತರು ಕಥೆ, ಕವನ, ಚುಟುಕು, ಲೇಖನ, ಕೊಡಗು ಜಿಲ್ಲೆ ಮತ್ತು ಸ್ಥಳೀಯ ಸಂಸ್ಕೃತಿ, ಆಚಾರ, ವಿಚಾರ, ಸ್ಥಳ ಪರಿಚಯಕ್ಕೆ ಸಂಬAಧಿಸಿದ ಬರಹಗಳನ್ನು ಕಳುಹಿಸಬಹುದಾಗಿದೆ.
ಕೊಡವ ಮಕ್ಕಡ ಕೂಟ ಪ್ರಕಟಿಸಿರುವ 93 ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ "ಗೌರಮ್ಮ ದತ್ತಿ ನಿಧಿ" ಪ್ರಶಸ್ತಿ ಬಂದಿದೆದ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ ಎಂದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸಮಾಜ ಸೇವಕ ಪೆಮ್ಮಡಿಯಂಡ ವೇಣು ಅಪ್ಪಣ್ಣ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಪುಸ್ತಕ ಬರೆಯುವ ಮತ್ತು ಓದುವವರ ಸಂಖ್ಯೆ ಕಡಿಮೆಯಾಗಿದೆ. ಇದರ ನಡುವೆಯೇ ಹೊಸ ಬರಹಗಾರರಿಗೆ ಸಮಾನ ಮನಸ್ಕರು ಸೇರಿ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಬಾಲ್ಯದಿಂದಲೇ ಸಾಹಿತ್ಯ ಆಸಕ್ತಿ ಮೂಡಿಸುವ ಕಾರ್ಯವಾಗಬೇಕು ಎಂದರು.
ಬರಹಗಾರ್ತಿ ಬೊಟ್ಟೋಳಂಡ ನಿವ್ಯಾ ದೇವಯ್ಯ ಮಾತನಾಡಿ ಸಮಯ ಮತ್ತು ಅವಕಾಶವನ್ನು ಸದ್ಬಳಕೆ ಮಾಡಿಕೊಂಡರೆ ಪುಸ್ತಕ ರಚನೆ ಸುಲಭವಾಗುತ್ತದೆ. ಬರಹಕ್ಕೆ ಬೆಲೆ ನೀಡುವ ಕಾರ್ಯವನ್ನು ಕೊಡವ ಮಕ್ಕಡ ಕೂಟ ಮಾಡುತ್ತಿದೆ. ಕೂಟ ಅವಕಾಶ ನೀಡಿದ ಕಾರಣದಿಂದ ನನಗೆ ಎರಡನೇ ಪುಸ್ತಕ ಬರೆಯಲು ಸಾಧ್ಯವಾಯಿತು ಎಂದರು.
ಸಮಾಜ ಸೇವಕ ಪೆಮ್ಮಡಿಯಂಡ ಎಂ.ಉತ್ತಪ್ಪ ಮಾತನಾಡಿ ಹೊಸ ಬರಹಗಾರರನ್ನು ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯವಾಗಬೇಕು ಎಂದು ಹೇಳಿದರು. ಬರಹಗಾರ್ತಿ ಐಚಂಡ ರಶ್ಮಿ ಮೇದಪ್ಪ ಮಾತನಾಡಿ ಕವಿಗಳು ತಮ್ಮ ಭಾವನೆಗಳನ್ನು ಬರಹದ ರೂಪದಲ್ಲಿ ಅಭಿವ್ಯಕ್ತಪಡಿಸುತ್ತಾರೆ. ಆ ಮೂಲಕ ಓದುಗರ ಮನಸ್ಸನ್ನು ಗೆಲ್ಲುತ್ತಾರೆ. ಕೊಡವ ಮಕ್ಕಡ ಕೂಟದಿಂದ ಆದಷ್ಟು ಶೀಘ್ರ 100ನೇ ಪುಸ್ತಕ ಬಿಡುಗಡೆಯಾಗಲಿ ಎಂದು ಶುಭ ಹಾರೈಸಿದರು.
ವ್ಯಾಲಿಡ್ಯೂ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಇದ್ದರು.