ಹಾಸನ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿರುವ ಹಾನಿಗೆ ಪರಿಹಾರ ಕಲ್ಪಿಸಲು ಎನ್‌ಡಿಆರ್‌ಎಫ್ ಮಾನದಂಡದ ಪ್ರಕಾರ 90 ಕೋಟಿ ರೂ. ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿ ಕುರಿತು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಇನ್ನೂ 16 ಕೋಟಿ ರೂ. ಹಣವಿದೆ. ತಕ್ಷಣದ ಪರಿಹಾರ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ಮಳೆಯಿಂದ ಹಾನಿಗೊಳಗಾಗಿರುವ ಮನೆಗಳ ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ. ಅಂಗನವಾಡಿ ಮತ್ತು ಶಾಲಾ ಕಟ್ಟಡಗಳ ದುರಸ್ತಿಗೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಮಳೆ ಸಂಪೂರ್ಣವಾಗಿ ನಿಂತ ನಂತರ ಬೆಳೆ ಹಾನಿ ಕುರಿತು ಸಮಗ್ರ ವರದಿ ಪಡೆದು ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆಗಸ್ಟ್‌ನಲ್ಲಿ ಅತಿಹೆಚ್ಚು ಹಾನಿ:
ಕಳೆದ ವಾರದಲ್ಲಿ ಬಿದ್ದ ಮಳೆಯ ಪರಿಣಾಮ 1,239 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಭತ್ತ, ರಾಗಿ, ಮುಸುಕಿನ ಜೋಳ, ಆಲೂಗಡ್ಡೆ, ಮೆಣಸು, ಕಾಫಿ ಬೆಳೆ ಸೇರಿದಂತೆ ಎಲ್ಲ ರೀತಿಯ ಬೆಳೆಗಳ ನಷ್ಟ ಸಂಭವಿಸಿದೆ. ಆಗಸ್ಟ್‌ನಲ್ಲಿ ಬಿದ್ದ ಮಳೆಯಿಂದ ಜಿಲ್ಲೆಯಲ್ಲಿ 255 ಅಂಗನವಾಡಿ ಕಟ್ಟಡಗಳು ಮತ್ತು 206 ಶಾಲಾ ಕೊಠಡಿಗಳಿಗೆ ಹಾನಿಯಾಗಿದೆ. 23 ಸರ್ಕಾರಿ ಕಟ್ಟಡಗಳು, 915 ಕಿ.ಮೀ. ಪಂಚಾಯತ್‌ರಾಜ್ ಇಲಾಖೆ ರಸ್ತೆಗಳು, 48 ಸೇತುವೆಗಳು, 197 ಕೆರೆಗಳಿಗೆ ಹಾನಿ ಉಂಟಾಗಿದೆ. 419 ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. 91 ಮನೆಗಳು ಸಂಪೂರ್ಣ ಕುಸಿದು ಬಿದ್ದಿವೆ. 754 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 12 ಜಾನುವಾರುಗಳು ಮೃತಪಟ್ಟಿವೆ ಎಂದು ಸಚಿವರು ಮಾಹಿತಿ ನೀಡಿದರು.
ಕೇಂದ್ರ ಸ್ಥಾನದಲ್ಲಿರಲು ಸೂಚನೆ:
ಅಧಿಕಾರಿಗಳು ಮತ್ತು ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿದ್ದು ಪರಿಹಾರ ಕೈಗೊಳ್ಳಬೇಕು. ಸಮಸ್ಯೆ ಉಂಟಾಗಿರುವ ಸ್ಥಳಗಳಿಗೆ ತಕ್ಷಣ ತೆರಳಿ ಜನರ ಕಷ್ಟಗಳಿಗೆ ಸ್ಪಂದಿಸಿ ಪರಿಹಾರ ಒದಗಿಸಬೇಕು. ಯಾರೂ ಕೂಡ ಸಂಕಷ್ಟದಲ್ಲಿರುವ ಜನರಿಂದ ಹಣಕ್ಕೆ ಬೇಡಿಕೆ ಇಡಬಾರದು. ದಾಖಲಾತಿಗಳು ಸರಿ ಇರದಿದ್ದರೂ ನಿಜವಾದ ಬಡವರಿಗೆ ಸೂಕ್ತ ದಾಖಲಾತಿ ಹೊಂದಿಸಲು ನೆರವಾಗಬೇಕು ಎಂದು ಸೂಚನೆ ನೀಡಿದರು.
ಕಂದಾಯ ಇಲಾಖೆ ಅಧಿಕಾರಿಗಳು 48 ಗಂಟೆಗಳ ಒಳಗೆ ಬಿದ್ದಿರುವ ಮನೆ ಗುರುತಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ ದಾಖಲೆ ಪಡೆದು, ಪರಿಹಾರ ನೀಡಲು ಕ್ರಮ ವಹಿಸಬೇಕು. ತುರ್ತು ಅಗತ್ಯವಿರುವ ಕಾಮಗಾರಿಗಳನ್ನು ಪಟ್ಟಿಮಾಡಿ ತಕ್ಷಣ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆದು ಕೆಲಸ ಮಾಡಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆ ದುರಸ್ತಿ ಮಾಡಬೇಕು. ಅಪಾಯಕಾರಿ ಕೆರೆಗಳನ್ನು ಗುರುತಿಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್, ಸಿ.ಎನ್.ಬಾಲಕೃಷ್ಣ, ಎ.ಟಿ.ರಾಮಸ್ವಾಮಿ, ಜಿಲ್ಲಾಧಿಕಾರಿ ಅರ್ಚನಾ, ಎಸ್ಪಿ ಹರಿರಾಮ್ ಶಂಕರ್, ಜಿಪಂ ಸಿಇಒ ಕಾಂತರಾಜ್, ಉಪವಿಭಾಗಾಧಿಕಾರಿ ಜಗದೀಶ್, ಜಂಟಿ ಕೃಷಿ ನಿರ್ದೇಶಕ ಎಚ್.ಕೆ.ರವಿ ಮತ್ತಿತರಿದ್ದರು.