ಜಿಲ್ಲೆ

ಹೆಸರು ಖರೀದಿ ಕೇಂದ್ರ ಆರಂಭ ವಿಳಂಬ, ಶೇ. 90ರಷ್ಟು ಬೆಳೆ ಮಾರಾಟ, ರೈತರಿಗೆ ದರ ಕುಸಿತದ ಹೊಡೆತ

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆ ಹೆಸರು. ಪ್ರಾರಂಭದ ದಿನಗಳಲ್ಲಿ 8-9 ಸಾವಿರ ರೂ. ಇದ್ದ ದರ ಏಕಾಏಕಿ ಕುಸಿತ ಕಂಡು ಈಗ 5-6ಸಾವಿರ ರೂ.ಗೆ ಇಳಿಕೆಯಾಗಿದೆ. ಈಗಾಗಲೇ ಅಕಾಲಿಕ ಮಳೆಯಿಂದ ಸಾಕಷ್ಟು ಬೆಳೆ ಹಾಳಾಗಿದೆ. ಉಳಿದ ಅಲ್ಪ ಸ್ವಲ್ಪ ಬೆಳೆಗೆ ಉತ್ತಮ ಬೆಲೆ ಇಲ್ಲದ್ದರಿಂದ ರೈತರು ಚಿಂತೆಗೊಳಗಾಗಿದ್ದಾರೆ.


ಕೋಡಿಕೊಪ್ಪ, ಕೋಚಲಾಪೂರ, ಅಬ್ಬಿಗೇರಿ, ತೋಟಗಂಟಿ, ಮಲ್ಲಾಪೂರ, ದ್ಯಾಂಪೂರ, ನಿಡಗುಂದಿ, ನಿಡಗುಂದಿಕೊಪ್ಪ, ಕುರಡಗಿ, ಡ.ಸ. ಹಡಗಲಿ, ಗುಜಮಾಗಡಿ, ಯರೇಬೇಲೇರಿ, ಜಕ್ಕಲಿ, ಮಾರನಬಸರಿ, ಬೂದಿಹಾಳ ಸೇರಿ ಹೋಬಳಿಯಾದ್ಯಂತ 1600 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿತ್ತು. ಆರಂಭದಲ್ಲಿ ತೇವಾಂಶ ಹೆಚ್ಚಳದಿಂದ ಹಳದಿ ರೋಗ, ಸೀರು ಬಾಧೆ ಕಾಡಿತ್ತು. ಸಾಕಷ್ಟು ಖರ್ಚು ಮಾಡಿ ಕೀಟ ನಾಶಕ ಸಿಂಪಡಣೆ ಮಾಡಿ ಬೆಳೆ ರಕ್ಷಿಸಲಾಗಿತ್ತು. ಇನ್ನೇನು ಹೆಸರು ಬುಡ್ಡಿ ಬಿಡಿಸಬೇಕು ಎನ್ನುವಷ್ಟರಲ್ಲಿ ಮಳೆ ಕಾಟ ಶುರುವಾಯಿತು.
ಸಂಗ್ರಹ ಕಷ್ಟಸಾಧ್ಯ: ಇತರೆ ಬೆಳೆಗಳಂತೆ ಹೆಸರನ್ನು ರಕ್ಷಣೆ ಮಾಡುವುದು ಬಹಳ ಕಷ್ಟದಾಯಕ ಕಾರ್ಯ. ಅಲ್ಪ- ಸ್ವಲ್ಪ ತೇವಾಂಶ ತಡೆದುಕೊಳ್ಳುವುದಿಲ್ಲ. ರಾಸಾಯನಿಕ ಸಿಂಪರಣೆ ಮಾಡಿ ಸಂಗ್ರಹ ಮಾಡಿದರೆ ಕಾಳು ಕಪ್ಪಾಗುತ್ತದೆ. ಆದ್ದರಿಂದ, ಬೆಳೆ ಕೈ ಸೇರುತ್ತಲೇ ಮಾರಾಟ ಮಾಡಲೇ ಬೇಕಾದ ಅನಿವಾರ್ಯತೆ ರೈತರದ್ದಾಗಿದೆ. ಶೇ. 90ರಷ್ಟು ರೈತರು ಈಗಾಗಲೇ ಹೆಸರು ಮಾರಾಟ ಮಾಡಿದ್ದಾರೆ. ಇನ್ನೂಳಿದ ಸ್ಥಿತಿವಂತ ರೈತರು ಮಾತ್ರ ಹೆಸರನ್ನು ಸಂಗ್ರಹಿಸಿಕೊಂಡಿದ್ದಾರೆ.

ಶಾಶ್ವತ ಖರೀದಿ ಕೇಂದ್ರ ಪ್ರಾರಂಭಕ್ಕೆ ಒತ್ತಾಯ: ರೈತಾಪಿ ವರ್ಗವು ಸಾಕಷ್ಟು ಕಷ್ಟ್ಟಳ ನಡುವೆ ಒಕ್ಕಲುತನ ಮಾಡಿಕೊಂಡು ಬರುತ್ತಿದ್ದು, ಮುಂಗಾರಿನಲ್ಲಿ ಹೆಸರು ಮತ್ತು ಹಿಂಗಾರಿನಲ್ಲಿ ಕಡಲೆ ಬೆಳೆ ಸೇರಿ ಇತರೆ ಬೆಳೆಗಳನ್ನು ಬೆಂಬಲ ಬೆಲೆಯಡಿ ಖರೀದಿಗಾಗಿ ಹೋಬಳಿಗೆ ಒಂದರಂತೆ ಶಾಶ್ವತ ಖರೀದಿ ಕೇಂದ್ರ ಪ್ರಾರಂಭಿಸಲು ಸರ್ಕಾರ ಮುಂದಾಗಬೇಕು. ಇದರಿಂದ ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗಲು ಸಾಧ್ಯ. ಇಲ್ಲದಿದ್ದರೆ ಪ್ರತಿ ವರ್ಷ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸುವುದೇ ಕಾಯಕವಾಗುತ್ತದೆ. ಬೆಳೆಗಳು ರೈತರ ಕೈಸೇರುವ ಮುನ್ನವೇ ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಎಲ್ಲ ಸಿದ್ಧತೆಗಳನ್ನು ಸರ್ಕಾರ ಏಕೆ ಮಾಡುವುದಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ ಎನ್ನುತ್ತಾರೆ ರೈತರು.

ನೋಂದಣಿಗೆ ವಿಘ್ನ
ಪ್ರತಿ ವರ್ಷ ಹೆಸರು ಬೆಳೆ ರಾಶಿ ಮಾಡಿ ಮಾರುಕಟ್ಟೆಗೆ ಬರುತ್ತಿದ್ದಂತೆ ದರ ಕುಸಿತ ಸಾಮಾನ್ಯವಾಗಿದೆ. ಇದು ಸರ್ಕಾರಕ್ಕೂ ಗೊತ್ತು. ಕಳೆದ ವಾರ 9 ಸಾವಿರ ವರೆಗೆ ಇದ್ದ ಬೆಲೆ ಈಗ 5-7 ಸಾವಿರ ರೂ. ಆಗಿದೆ. ಈಗಾಗಲೇ ಸರ್ಕಾರ ಪ್ರತಿ ಕ್ವಿಂಟಾಲ್ ಹೆಸರಿಗೆ 8682 ರೂ. ಬೆಲೆ ನಿಗದಿ ಮಾಡಿದೆ ಆದರೆ, ಇನ್ನೂ ಖರೀದಿಗೆ ನೋಂದಣಿ ಪ್ರಾರಂಭವಾಗಿಲ್ಲ.

ಬೆಂಬಲ ಬೆಲೆ ಹೆಸರು ಖರೀದಿ ಕೇಂದ್ರ ಪ್ರಾರಂಭಿಸಲು ಸರ್ಕಾರದಿಂದ ಅನುಮತಿ ದೊರಕಿದೆ. ಈಗಾಗಲೇ ಖರೀದಿ ಮಾಡಿದ ಹೆಸರು ಸಾಗಾಟಕ್ಕೆ ಬೇಕಾಗುವ ವಾಹನಗಳ ಟೆಂಡರ್ ಕರೆಯಲಾಗಿದೆ. ನಮ್ಮ ಹತ್ತಿರ 25 ಸಾವಿರ ಖಾಲಿ ಚೀಲಗಳಿದ್ದು, ಇನ್ನೂ 25 ಸಾವಿರ ಖಾಲಿ ಚೀಲಗಳಿಗೆ ಟೆಂಡರ್ ಕರೆಯಬೇಕಿದೆ. ಹೆಸರು ಖರೀದಿಗೆ ಆನ್​ಲೈನ್​ನಲ್ಲಿ ನೋಂದಣಿ ಮಾಡಲು ತಂತ್ರಾಂಶವನ್ನು ಅಪ್​ಡೇಟ್ ಮಾಡಲು ಮನವಿ ಮಾಡಲಾಗಿದ್ದು, ಇನ್ನೊಂದು ವಾರದಲ್ಲಿ ಹೆಸರು ಖರೀದಿ ಪ್ರಾರಂಭವಾಗಲಿದೆ.| ಸಚಿನ್ ನ ಪಾಟೀಲ, ಶಾಖಾ ವ್ಯವಸ್ಥಾಪಕರು ಕೆಎಸ್​ಸಿಎಂಎಫ್ ನರಗುಂದ