AIDSO LOGO 
ಜಿಲ್ಲೆ

9 ವಿವಿ ಮುಚ್ಚುವ ರಾಜ್ಯ ಸರ್ಕಾರದ ಕ್ರಮಕ್ಕೆ ಎಐಡಿಎಸ್‌ಒ ಖಂಡನೆ

ಮೈಸೂರು: ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರ ಕ್ರಮವನ್ನು ಎಐಡಿಎಸ್‌ಒ ಖಂಡಿಸಿದೆ.

ವಿಶ್ವವಿದ್ಯಾಲಯಗಳು ಜ್ಞಾನವೃದ್ಧಿಯ ಪೀಠಗಳು ಎಂಬ ಮೂಲ ಪರಿಕಲ್ಪನೆಯನ್ನೇ ಗಾಳಿಗೆ ತೂರಿ ಹಿಂದಿನ ಬಿಜೆಪಿ ಸರ್ಕಾರವು ಜಿಲ್ಲೆಗೊಂದು ವಿಶ್ವವಿದ್ಯಾಲಯ ಪ್ರಾರಂಭಿಸಿತು.

ಯಾವುದೇ ಶಿಕ್ಷಣ ತಜ್ಞರ ಅಭಿಪ್ರಾಯಗಳನ್ನು ಕೇಳದೆ, ಅಪ್ರಜಾತಾಂತ್ರಿಕವಾಗಿ ಈ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಲಾಯಿತು. ನೃಪತುಂಗ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಎಂಬ ಪಟ್ಟ ಕಟ್ಟಿ, ಇವುಗಳನ್ನು ಸ್ವ ಹಣಕಾಸು ಸಂಸ್ಥೆಗಳನ್ನಾಗಿ ಮಾಡಿ ಮೂರು ಪಟ್ಟು ಶುಲ್ಕವನ್ನು ಹೆಚ್ಚಿಸಲಾಗಿತ್ತು ಎಂದು ಜಿಲ್ಲಾ ಕಾರ್ಯದರ್ಶಿ ನಿತಿನ್ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.

ಒಂದು ವಿಶ್ವವಿದ್ಯಾಲಯಕ್ಕೆ ತಲಾ 2 ಕೋಟಿ ರೂ. ಅನುದಾನವನ್ನು ಮಾತ್ರ ನಿಗದಿಪಡಿಸಲಾಯಿತು. ಸರ್ಕಾರದ ಈ ಅವೈಜ್ಞಾನಿಕ ನಡೆಯನ್ನು ಎಐಡಿಎಸ್‌ಒ ಪ್ರಶ್ನಿಸಿತ್ತು. ಹಿಂದಿನ ಬಿಜೆಪಿ ಸರ್ಕಾರದ ರೀತಿಯಲ್ಲೇ ಕಾಂಗ್ರೆಸ್ ಸರ್ಕಾರವು ಎಲ್ಲ ಪ್ರಜಾತಾಂತ್ರಿಕ ಪ್ರಕ್ರಿಯೆಗಳನ್ನು ಗಾಳಿಗೆ ತೂರಿ ಕೇವಲ ತನ್ನ ಸಂಪುಟ ಸಭೆಯ ಉಪಸಮಿತಿಯ ಮೂಲಕ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರವನ್ನು ಕೈಗೊಂಡಿದೆ. ಸರ್ಕಾರದ ಈ ನಡೆಯನ್ನು ಖಂಡನೀಯ.

ಮುಚ್ಚಲ್ಪಡುತ್ತಿರುವ 9 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಬೋಧಕರು ಹಾಗೂ ಇತರ ಸಿಬ್ಬಂದಿ ಹೊಣೆ ಯಾರದ್ದು ಎಂಬ ಪ್ರಶ್ನೆಯನ್ನು ಸರ್ಕಾರದ ಮುಂದಿಡುತ್ತಿದೆ. ಶಿಕ್ಷಣ ಕ್ಷೇತ್ರದ ಯಾವುದೇ ನಿರ್ಧಾರವನ್ನು ಏಕಪಕ್ಷೀಯವಾಗಿ ಕೈಗೊಳ್ಳದೆ, ಬೋಧಕರು, ಪಾಲಕರು, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರನ್ನೊಳಗೊಂಡ ಪ್ರಜಾತಾಂತ್ರಿಕ ಪ್ರಕ್ರಿಯೆ ಅನುಸರಿಸಬೇಕು ಎಂದು ಆಗ್ರಹಿಸಿದ್ದಾರೆ.