ಚಿತ್ರದುರ್ಗ: ಜೂನ್ 9ರಿಂದ 20 ರವರೆಗೆ ಜಿಲ್ಲೆಯ ಆರು ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-3 ನಡೆಯಲಿದ್ದು, ನಿಯಾಮಾನುಸಾರ ಪರೀಕ್ಷಾ ಕಾರ್ಯ ನಿರ್ವಹಿಸುವಂತೆ ಎಡಿಸಿ ಬಿ.ಟಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಎಸಿ ಕಚೇರಿಯಲ್ಲಿ ಬುಧವಾರ ಪರೀಕ್ಷೆ ಸಿದ್ಧತಾ ಸಭೆಯಲ್ಲಿ ಮಾತನಾಡಿ,ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾರ್ಗಸೂಚಿಗಳನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಕ್ರಮಗಳು ಕಂಡು ಬಂದರೆ ಎಫ್‌ಐಆರ್ ದಾಖಲಿಸಲಾಗುವುದು. ಅಧಿಕಾರಿ ಹಾಗೂ ಸಿಬ್ಬಂದಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಪರೀಕ್ಷೆ ಕಾರ್ಯ ನಡೆಸಬೇಕು ಎಂದರು.
ಶಾಲೆ ಹಾಗೂ ಕಾಲೇಜುಗಳು ಪ್ರಾರಂಭವಾಗಿರುವುದರಿಂದ ಸಂಯುಕ್ತ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಿಯು ಪರೀಕ್ಷೆ ನಡೆಯುವ ಅವಧಿಗೆ ಬಿಡುವು ನೀಡಬೇಕು. ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿರುವ ಜೆರಾಕ್ಸ್ ಮತ್ತು ಕಂಪ್ಯೂಟರ್ ಅಂಗಡಿಗಳನ್ನು ತೆರೆಯುವಂತಿಲ್ಲ ಎಂದರು.
ಜಿಲ್ಲೆಯಲ್ಲಿ 8658 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ಕೊಂಡೊಯ್ಯುವ ಮತ್ತು ವಿತರಣೆ ಸಮಯಕ್ಕೆ 6 ಮಾರ್ಗಗಳ ತಂಡಕ್ಕೆ ಪ್ರತಿ ತಾಲೂಕಿನ ಮಾರ್ಗಾಧಿಕಾರಿಗಳ ಜತೆಗೆ ಪೊಲೀಸ್ ರಕ್ಷಣೆ ನೀಡಬೇಕು. ಪ್ರಶ್ನೆಪತ್ರಿಕೆಗಳನ್ನು ಕೊಂಡ್ಯೊಯುವ ವಾಹನಗಳಿಗೆ ಜಿಪಿಎಸ್ ಅಳವಡಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಮೊಬೈಲ್ ಫೋನ್ ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರ ಮುಖ್ಯಸ್ಥರು ಮಾತ್ರ ಬೇಸಿಕ್‌ಸೆಟ್ ಉಪಯೋಗಿಸಬೇಕು. ಇದನ್ನು ಹೊರತು ಪಡಿಸಿ, ಪರೀಕ್ಷೆ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿ ಯಾವುದೇ ಮೊಬೈಲ್ ಬಳಸುವಂತಿಲ್ಲ ಎಂದು ಎಡಿಸಿ ಹೇಳಿದರು.
ಪಿಯು ಡಿಡಿ ಕೆ. ತಿಮ್ಮಯ್ಯ ಮಾತನಾಡಿ, ಚಿತ್ರದುರ್ಗ ಸೇರಿ ಎಲ್ಲ ತಾಲೂಕು ಕೇಂದ್ರಗಳ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಪ್ರಾರಂಭವಾಗುವುದಕ್ಕಿಂತ ಒಂದು ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷೆ ನಂತರ 30 ನಿಮಿಷ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕು.
ಪ್ರಶ್ನೆ ಪತ್ರಿಕೆ ತೆರೆಯುವಾಗ ಹಾಗೂ ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡುವಾಗ ಸಿಸಿ ಕ್ಯಾಮರಾದಡಿ ಕಾರ್ಯನಿರ್ವಹಿಸುವುದು ಮತ್ತು ಎಲ್ಲ ಕೊಠಡಿಗಳಿಗೆ ಸಿಸಿ ಕ್ಯಾಮರಾ ಅಳವಡಿಸುವುದು ಕಡ್ಡಾಯ. ಜಿಪಂನಲ್ಲಿ ಪರೀಕ್ಷಾ ಕೇಂದ್ರಗಳ ವೀಕ್ಷಣೆಗೆ ವೆಬ್‌ಕಾಸ್ಟಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಎಎಸ್‌ಪಿ ಎಸ್‌ಜೆ. ಕುಮಾರಸ್ವಾಮಿ, ಎಸಿ ಮೆಹಬೂಬ್ ಜಿಲಾನಿ ಖುರೇಷಿ ಮತ್ತಿತರ ಅಧಿಕಾರಿಗಳು ಇದ್ದರು.
ಪರೀಕ್ಷಾ ವೇಳಾಪಟ್ಟಿ
ಜೂ.9 ರಂದು ಕನ್ನಡ, ಅರೇಬಿಕ್. 10 ರಂದು ಇತಿಹಾಸ, ಭೌತಶಾಸ್ತ್ರ, 11 ರಂದು ರಾಜ್ಯಶಾಸತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ. 12ರಂದು ರಸಾಯನಶಾಸ್ತ್ರ, ಅರ್ಥಶಾಸ್ತ್ರ. 13 ರಂದು ಇಂಗ್ಲೀಷ್. 14ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣಶಾಸ್ತ್ರ, ಗೃಹವಿಜ್ಞಾನ. 16 ರಂದು ಸಮಾಜಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ. 17ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ. 18ರಂದು ಹಿಂದಿ. 19 ರಂದು ಭೂಗೋಳಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ. 20 ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಪರೀಕ್ಷೆಗಳು ನಡೆಯಲಿವೆ.
---