ಹೊನ್ನಾವರ: ಚಿರತೆ ಉಗುರು ಮಾರಾಟ ಮಾಡುತ್ತಿದ್ದ ತಂಡವನ್ನು ಪತ್ತೆ ಹಚ್ಚಿದ ಇಲ್ಲಿಯ ಅರಣ್ಯ ಇಲಾಖೆಯ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.
ಹೊಸಗೋಡಿನ ಗಣಪತಿ ನಾರಾಯಣ ಗೌಡ, ಮುಗ್ವಾದ ಅಂತೋನಿ ಮಿನಿನ್ ಫರ್ನಾಂಡೀಸ್, ಬೀರನಗೋಡ ಬೆಳ್ಳಿಮಕ್ಕಿಯ ರೋಶನ್ ವಿಲ್ಸೆಂಟ್ ಲೋಬೋ, ಸಾಲಕೋಡಿನ ಮಹೇಶ ರಾಮ ನಾಯ್ಕ ಬಂಧಿತ ಆರೋಪಿಗಳು. ಇವರಿಂದ 9 ಜೋಡಿ ಚಿರತೆ ಉಗುರುಗಳು, ಒಂದು ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ಸಂಜೆ ಹೊನ್ನಾವರ ವಲಯ ವ್ಯಾಪ್ತಿಯ ಮುಗ್ವಾ ಗ್ರಾಮ ಮತ್ತು ಅರೆ ಅಂಗಡಿಯಲ್ಲಿ ಚಿರತೆ ಉಗುರು ಮಾರಾಟ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು. ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಮಫ್ತಿನಲ್ಲಿ ದಾಳಿ ನಡೆಸಿ ಚಿರತೆಯ ಉಗುರು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ಮೇಲೆ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಕೇಸು ದಾಖಲಿಸಲಾಗಿದೆ. ಆರೋಪಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ವಿಚಾರಣೆ ಮುಂದುವರಿದಿದೆ ಎಂದು ಡಿಎಫ್ಒ ಗಣಪತಿ ಕೆ. ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಶಿವಾನಂದ ಕೋಟ್ಯಾಳ, ಉಪ ವಲಯ ಅರಣ್ಯಾಧಿಕಾರಿಗಳಾದ ರಾಜು ನಾಯ್ಕ, ತುಕಾರಾಮ, ಸುಬ್ರಹ್ಮಣ್ಯ ಗೌಡ, ಈಶ್ವರ ಗೌಡ, ಅರಣ್ಯ ರಕ್ಷಕರಾದ ಅಲ್ಲಾ ಮರ್ತಜ ಬಾವಿಕಟ್ಟಿ, ಯಲ್ಲಪ್ಪ ಚಂದ್ರಪ್ಪ ಭಾಗವಹಿಸಿದ್ದರು.