ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ದಿನಗಳಲ್ಲಿ 1,242 ಡೆಂಘೆ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 9 ಸಾವಿರ ಗಡಿ ದಾಟಿದೆ.
ಕಳೆದ 24 ಗಂಟೆಗಳಲ್ಲಿ 2,557 ಶಂಕಿತರ ಪರೀಕ್ಷೆ ನಡೆಸಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ 202, ಧಾರವಾಡ, ಮಂಡ್ಯ, ಹಾಸನ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ 20, ಕೋಲಾರ ಮತ್ತು ಚಿತ್ರದರ್ಗು ತಲಾ 17, ಶಿವಮೊಗ್ಗ 16, ತುಮಕೂರು, ಬಾಗಲಕೋಟೆ ಮತ್ತು ಕಲಬುರಗಿ ತಲಾ 12 ಸೇರಿ 424 ಹೊಸ ಡೆಂಘೆ ಪ್ರಕರಣಗಳು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 9,082 ಕ್ಕೆ ಏರಿಕೆಯಾಗಿದೆ. ಏಳು ಮಂದಿ ಮೃತಪಟ್ಟಿದ್ದಾರೆ. ಸೋಂಕಿತರಲ್ಲಿ 353 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಬ್ಬರು ಬಲಿ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಶಂಭೂರು ನಿವಾಸಿ, ಪ್ರಸ್ತುತ ಪುತ್ತೂರಿನ ಕಬಕದಲ್ಲಿ ನೆಲೆಸಿದ್ದ ಯತೀಶ್(50) ಡೆಂೆಗೆ ಶನಿವಾರ ಬಲಿಯಾಗಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಅವರಿಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಶಂಕಿತ ಡೆಂೆ ಜ್ವರದಿಂದ ಬಳಲುತ್ತಿದ್ದ ಉಡುಪಿ ಮೂಲದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಹುಬ್ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾಳೆ.