ಜಿಲ್ಲೆ

ಒಂಬತ್ತು ಜಿಲ್ಲೆಗಳಲ್ಲಿ ಅಂತರ್ಜಲ ಚೇತನ: ಸಚಿವ ಕೆ.ಎಸ್.ಈಶ್ವರಪ್ಪ

Tumakuru

ತುಮಕೂರು: ಶಿವಮೊಗ್ಗ, ತುಮಕೂರು, ಚಿತ್ರದುರ್ಗ ಸೇರಿ 9 ಜಿಲ್ಲೆಗಳಲ್ಲಿ ಅಂತರ್ಜಲ ವೃದ್ಧಿಗೆ 'ಅಂತರ್ಜಲ ಚೇತನ' ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಜಿಪಂ ಸಭಾಂಗಣದಲ್ಲಿ ಮಂಗಳವಾರ ವಿವಿಧ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಸಂಸ್ಥೆ ಜತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಮೇ 5ರಂದು ಸಂಸ್ಥೆಯ ತಾಂತ್ರಿಕ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿ ಸಮಗ್ರ ಅಂತರ್ಜಲ ಅಭಿವೃದ್ಧಿ ಬಗ್ಗೆ ಕಾರ್ಯಯೋಜನೆ ರೂಪಿಸುವರು ಎಂದರು.

ಅಂತರ್ಜಲ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಜಿಲ್ಲೆಯ ಜನ ಪ್ರತಿನಿಧಿಗಳು, ಅಧಿಕಾರಿಗಳು ಕೈಜೋಡಿಸಿ ಕ್ರಿಯಾ ಯೋಜನೆ ರೂಪಿಸಿ ಅವುಗಳನ್ನು ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯಬೇಕಿದೆ ಎಂದು ಹೇಳಿದರು.

ಕುಡಿಯುವ ನೀರಿಗೆ 1 ಕೋಟಿ ರೂ.: ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಸರ್ಕಾರವು ಸಾಕಷ್ಟು ಹಣ ವಿನಿಯೋಗಿಸುತ್ತಿದ್ದು, ಬರಪೀಡಿತ ತಾಲೂಕಿಗೆ ತಲಾ 1 ಕೋಟಿ ರೂ. ಹಾಗೂ ಇತರ ತಾಲೂಕಿಗೆ ತಲಾ 50 ಲಕ್ಷ ರೂಪಾಯಿ ಅನುದಾನ ನೀಡಿದೆ. ಕ್ರಿಯಾಯೋಜನೆ ತಯಾರಿಸಿ ಅನುಮೋದನೆ ಪಡೆದು ಕಾರ್ಯಗತಗೊಳಿಸುವಂತೆ ಈಶ್ವರಪ್ಪ ಸೂಚಿಸಿದರು.

1495 ಆರ್‌ಒ ಘಟಕ: ಜಿಲ್ಲೆಯಲ್ಲಿ 1495ಶುದ್ಧ ನೀರಿನ ಘಟಕಗಳಿದ್ದು, ಏಜೆನ್ಸಿಗಳಿಂದ ನಿರ್ವಹಣೆ ಇಲ್ಲದೆ ಸಾಕಷ್ಟು ಸ್ಥಗಿತಗೊಂಡಿವೆ. ಇಲಾಖೆ ಇಂಜಿನಿಯರ್‌ಗಳು ಘಟಕಗಳ ಸ್ಥಿತಿಗತಿ ಬಗ್ಗೆ ಮುಂದಿನ ಸಭೆಯಲ್ಲಿ ಮಾಹಿತಿ ನೀಡಬೇಕು ಎಂದು ಈಶ್ವರಪ್ಪ ತಾಕೀತು ಮಾಡಿದರು. ಘಟಕಗಳ ನಿರ್ವಹಣೆಯಲ್ಲಿ ತಿಪಟೂರು ತಾಲೂಕನ್ನು ಮಾದರಿಯಾಗಿ ತೆಗೆದುಕೊಂಡು, ಅಲ್ಲಿನ ನಿರ್ವಹಣೆ ಆಧರಿಸಿ ಜಿಲ್ಲೆ ಹಾಗೂ ರಾಜ್ಯಕ್ಕೆ ವಿಸ್ತರಿಸಲಾಗುವುದು. ಆರ್‌ಒ ಘಟಕಗಳ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಯಕ್ರಮ ರೂಪಿಸುವಂತೆ ಶಾಸಕ ನಾಗೇಶ್‌ಗೆ ಸಚಿವರು ತಿಳಿಸಿದರು.

ನರೇಗಾ ಯೋಜನೆಯಡಿ ಕೃಷಿ, ತೋಟಗಾರಿಕೆ, ಸಾಮಾಜಿಕ ಅರಣ್ಯ, ಪಶುಸಂಗೋಪನೆ, ರೇಷ್ಮೆ, ಪಂಚಾಯತ್ ರಾಜ್ ಹಾಗೂ ಇನ್ನಿತರ ಇಲಾಖೆಗಳಿಗೆ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡಲಾಗಿದ್ದು, 10ಲಕ್ಷದವರೆಗಿನ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಜಿಪಂ ವತಿಯಿಂದ ಅನುಮೋದನೆ ಪಡೆದು ಆಯಾ ತಾಲೂಕಿನ ಕಾರ್ಯನಿರ್ವಹಣಾಧಿಕಾರಿಗಳು ಕಾಮಗಾರಿ ಕೈಗೊಳ್ಳಲು ಸಂಪೂರ್ಣ ಅಧಿಕಾರ ನೀಡಲಾಗಿದೆ. ಈ ವಿಷಯದಲ್ಲಿ ವಿಳಂಬ ಮಾಡದೆ ಕಾರ್ಯಪ್ರವೃತ್ತರಾಗುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಎ.ಅತಿಖ್ ಸೂಚನೆ ನೀಡಿದರು.

ಜಿಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಶಾರದಾ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ನಾಗೇಶ್, ಎಂ.ವಿ. ವೀರಭದ್ರಯ್ಯ, ಮಸಾಲ ಜಯರಾಮ್, ಬಿ.ಸತ್ಯನಾರಾಯಣ, ಗ್ರಾಮೀಣಾಭಿವೃದ್ಧಿ ಇಲಾಖೆಯ ವಿಶೇಷಾಧಿಕಾರಿ ಜಯರಾಂ, ಜಿಪಂ ಸಿಇಒ ಶುಭಾ ಕಲ್ಯಾಣ್ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಜಿಲ್ಲೆಯ ಪ್ರತಿ ತಾಲೂಕಿಗೆ 2 ಕೋಟಿ ರೂಪಾಯಿ ಕೊಡಿ: ಜಿಲ್ಲೆಯಲ್ಲಿ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪಡೆದು ಟ್ಯಾಂಕರ್ ಮೂಲಕ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜಿಗೆ ಪ್ರತೀ ತಾಲೂಕಿಗೆ 2 ಕೋಟಿ ರೂ., ಅನುದಾನ ನೀಡುವಂತೆ ಸಂಸದ ಜಿ.ಎಸ್.ಬಸವರಾಜು ಮನವಿ ಮಾಡಿದರು. ಮುಖ್ಯಮಂತ್ರಿ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಕೆ.ಎಸ್.ಈಶ್ವರಪ್ಪ ಭರವಸೆಯಿತ್ತರು.

ನಿರುದ್ಯೋಗಿಗಳ ಭತ್ಯೆ ನೀಡಿ: ಕರೊನಾ ಹಿನ್ನೆಲೆಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಮನೆಯಲ್ಲಿ ಪರಿತಪಿಸುತ್ತಿದ್ದಾರೆ. ಅಂತಹ ಕುಟುಂಬಗಳಿಗೆ 30 ದಿನ ಕೂಲಿ ನೀಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು. ಬಹುತೇಕ ಗ್ರಾಮೀಣ ಭಾಗಗಳು ಗ್ರೀನ್ ರೆನ್‌ನಲ್ಲಿ ಬರುವುದರಿಂದ ಅಲ್ಲಿಯ ಕೂಲಿ ಕಾರ್ಮಿಕರು ನರೇಗಾ ಅಡಿ ಸರ್ಕಾರದಿಂದ ಕೈಗೊಳ್ಳುವ ಕಾಮಗಾರಿಗಳು, ವೈಯಕ್ತಿಕ ಕಾಮಗಾರಿ ನಿರ್ವಹಿಸಲು ಭಯ ಬಿಟ್ಟು ಮುಂದೆ ಬರಬೇಕೆಂದು ಸಚಿವ ಈಶ್ವರಪ್ಪ ಮನವಿ ಮಾಡಿದರು.