ಜಿಲ್ಲೆ

ವರ್ಷದಲ್ಲಿ 9 ಲಕ್ಷ ಆತ್ಮಹತ್ಯೆ ಪ್ರಕರಣ ವರದಿ

ಕೋಲಾರ ಡೆಸ್ಕ್

ಮುಳಬಾಗಿಲು: ಸಮಾಜದಲ್ಲಿ ಪ್ರತಿವರ್ಷ ಸುಮಾರು 9 ಲಕ್ಷ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದ್ದು, ಇದೊಂದು ಆತಂಕಕಾರಿ ವಿಷಯ. ಇದನ್ನು ತಡೆಗಟ್ಟುವುದು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಕರ್ತವ್ಯಗಳಲ್ಲೂ ಒಂದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ನಟೇಶ್​ ಹೇಳಿದರು.

ನಗರದ ಗುರುಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲೂಕು ಆಡಳಿತ ಸಹಕಾರದೊಂದಿಗೆ ಗ್ರಾಮಭಾರತಿ ಟ್ರಸ್ಟ್​ನಿಂದ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ದಿನ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳು, ಮಾದಕ ವಸ್ತುಗಳು ಸಂಗ್ರಹಣೆ ಮತ್ತು ಮಾರಾಟ, ಪರಿಸರದ ಮೇಲೆ ಆಗುತ್ತಿರುವ ಅಕ್ರಮಗಳ ಬಗ್ಗೆ ಜಾಗೃತಿವಹಿಸಿ ಆರೋಗ್ಯವಂತ ಸಮಾಜ ನಿಮಾರ್ಣದ ರೂವಾರಿಗಳಾಗಬೇಕು ಎಂದರು.

ಭಾರತ ಸರ್ಕಾರ ಸಂಕಲ್ಪಸಿರುವಂತೆ ಪ್ರತಿವ್ಯಕ್ತಿ ತನ್ನ ತಾಯಿ ಹೆಸರಿನಲ್ಲಿ ಈ ತಿಂಗಳಾಂತ್ಯಕ್ಕೆ 80 ಕೋಟಿ, ಮಾರ್ಚ್​ ಅಂತ್ಯಕ್ಕೆ 140 ಕೋಟಿ ಸಸಿ ನೆಟ್ಟು ಬೆಳೆಸುವ ಜವಾಬ್ದಾರಿ ನೀಡಿದ್ದು, ಈ ಅಭಿಯಾನದಲ್ಲಿ ದೇಶದ ಪ್ರತಿನಾಗರಿಕನು ಪಾಲ್ಗೊಳ್ಳಬೇಕಾದ ಜವಾಬ್ದಾರಿ ಇದೆ ಎಂದರು.

ತಹಸೀಲ್ದಾರ್​ ವಿ.ಗೀತಾ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟ್ಟಗಳಿಗೆ ಬಲಿಯಾಗಬಾರದು, ಅಂಕಗಳಿಸುವುದೇ ಮಾನದಂಡವಾಗಬಾರದು, ಸಜ್ಜನ ಪ್ರಜೆಗಳಾಗಿ ಸಮಾಜದಲ್ಲಿ ಬಾಳಿ ಬದುಕುವ ಕೌಶಲ ಬೆಳೆಸಿಕೊಳ್ಳಬೇಕು. ಉನ್ನತ ಶಿಕ್ಷಣ ಪದವಿ ಪಡೆದವರೇ ದೇಶದ್ರೋಹ ಪ್ರಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೃಷಿಕರು ಕೂಲಿ ಕಾರ್ಮಿಕರು ಈ ದೇಶದ ಸಂವಿಧಾನ ಗೌರವಿಸಿ ಸಮಾಜದ ಅಭಿವೃದ್ಧಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ತಹಸೀಲ್ದಾರ್​ ವಿ.ಗೀತಾ, ಗ್ರಾಮ ಭಾರತಿ ಟ್ರಸ್ಟ್​ ಅಧ್ಯಕ್ಷ ಎಂ.ಬಿ.ಕೃಷ್ಣಮೂರ್ತಿ, ಮಾಲೂರು ಫುಡ್​ ಬ್ಯಾಂಕ್​ ಸಂಯೋಜಕ ಪ್ರದಿಪ್​, ಸಿಗೇನಹಳ್ಳಿ ಗಂಗಾಧರ್​ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಜೆ.ಜಿ. ನಾಗರಾಜ್​ ಇದ್ದರು.