ಹನೂರು: ಶೈಕ್ಷಣಿಕ ವಲಯದಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 2,373 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 9 ಕೇಂದ್ರಗಳಲ್ಲಿ ಮಾ.21 ರಿಂದ ಪರೀಕ್ಷೆ ಆರಂಭವಾಗಲಿದೆ.
ಹನೂರಿನ ಕ್ರಿಸ್ತರಾಜ, ಜಿ.ವಿ.ಗೌಡ ಪ್ರೌಢಶಾಲೆ, ಮಲೆಮಹದೇಶ್ವರ ಬೆಟ್ಟದ ಶ್ರೀ ಮಹದೇಶ್ವರ ಶಾಲೆ, ರಾಮಾಪುರದ ಜೆಎಸ್‌ಎಸ್ ಪ್ರೌಢಶಾಲೆ, ಮಾರ್ಟಳ್ಳಿಯ ಸೇಂಟ್ ಮೇರಿಸ್ ಪ್ರೌಢಶಾಲೆ, ಲೊಕ್ಕನಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆ, ಮಣಗಳ್ಳಿಯ ಸರ್ಕಾರಿ ಪ್ರೌಢಶಾಲೆ, ಕೌದಳ್ಳಿಯ ಸಂತ ಅಂತೋಣಿ ಪ್ರೌಢಶಾಲೆ ಹಾಗೂ ಹೂಗ್ಯಂನ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಈ ಬಾರಿ 1,226 ಬಾಲಕರು ಹಾಗೂ 1,147 ಬಾಲಕಿಯರು ಸೇರಿ ಒಟ್ಟು 2,373 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಈಗಾಗಲೇ ಬಿಇಒ ಗುರುಲಿಂಗಯ್ಯ ಅವರು ಆಯಾ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು, ಸ್ಥಾನಿಕ ಜಾಗೃತಿ ದಳದ ಅಧಿಕಾರಿಗಳು ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ನರ್ಸ್‌ಗಳನ್ನು ನಿಯೋಜಿಸಲಾಗಿದ್ದು, ಸುಸೂತ್ರ ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪರೀಕ್ಷೆ ಏ.4ರಂದು ಮುಕ್ತಾಯವಾಗಲಿದೆ.
ವಿದ್ಯಾರ್ಥಿಗಳಿಗೆ ಶಾಸಕರ ಕಿವಿಮಾತು
ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂಬಂಧ ಶಾಸಕ ಎಂ.ಆರ್.ಮಂಜುನಾಥ್ ವಿಜಯವಾಣಿಯೊಂದಿಗೆ ಮಾತನಾಡಿ, ಈ ಬಾರಿ ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಆಯಾಸವಾಗದಂತೆ ಅನುಕೂಲಕರ ವಾತಾವರಣವನ್ನು ನಿರ್ಮಿಸಬೇಕು. ಮಕ್ಕಳ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜಿಸಬೇಕು. ಶುದ್ಧ ಕುಡಿಯುವ ನೀರಿನ ಸೌಕರ್ಯವನ್ನು ಒದಗಿಸಬೇಕು. ಯಾವುದೇ ಲೋಪವಾಗದಂತೆ ಯಶಸ್ವಿ ಪರೀಕ್ಷೆಗೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದ್ದಾರೆ.
ಇನ್ನು ಪರೀಕ್ಷೆಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿರುವ ಸಾರಿಗೆ ಬಸ್ ಸೌಕರ್ಯವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಯಾವುದೇ ಗೊಂದಲಕ್ಕೆ ಒಳಗಾಗದೇ ಆತ್ಮಸ್ಥೈರ್ಯದೊಂದಿಗೆ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಬೇಕು. ಹೆಚ್ಚು ಅಂಕ ಗಳಿಸುವುದರತ್ತ ಗಮನ ಕೇಂದ್ರೀಕರಿಸಬೇಕು. ಆರೋಗ್ಯದ ಕಡೆ ಕಾಳಜಿ ವಹಿಸಬೇಕು. ಪಾಲಕರು ಮಕ್ಕಳ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.