ತುಮಕೂರು: ಜಿಲ್ಲೆಯಲ್ಲಿ ಕರೊನಾ ಮತ್ತೊಂದು ಬಲಿಪಡೆದಿದೆ. ಇದರೊಂದಿಗೆ ಸತ್ತವರ ಸಂಖ್ಯೆ 9ಕ್ಕೇರಿದೆ. ಸೋಮವಾರ ಹೊಸದಾಗಿ 16 ಜನರಲ್ಲಿ ಸೋಂಕು ಕಂಡುಬಂದಿದ್ದು, ಸೋಂಕಿತರ ಸಂಖ್ಯೆ 268ಕ್ಕೇರಿದೆ. ಒಟ್ಟು 194 ಸಕ್ರಿಯ ಪ್ರಕರಣಗಳಿವೆ. ತುಮಕೂರು 6, ಕೊರಟಗೆರೆ 4, ಮಧುಗಿರಿ 2, ಪಾವಗಡ 2, ಕುಣಿಗಲ್ ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ತಲಾ 1 ಪ್ರಕರಣ ಪತ್ತೆಯಾಗಿವೆ. ತುಮಕೂರು ನಗರ ಸೇರಿ ತಾಲೂಕು ಒಂದರಲ್ಲೇ ಈವರೆಗೆ 72 ಪ್ರಕರಣ ಕಂಡುಬಂದಿವೆ.
ತುಮಕೂರಿನ ವಿನಾಯಕನಗರದ 78 ವರ್ಷದ ವೃದ್ಧ ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದು, ಜು.4 ರಂದು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ತೆರಳಿದ್ದರು. ಈ ವೇಳೆ ಗಂಟಲುದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಭಾನುವಾರ ಸಂಜೆ ಮೃತಪಟ್ಟಿದ್ದು, ಸೋಮವಾರ ಸೋಂಕು ಇರುವುದು ದೃಢಪಟ್ಟಿದೆ. ಕೋವಿಡ್ ಮಾರ್ಗಸೂಚಿ ಅನ್ವಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮೃತ ಸೋಂಕಿತರ ಸಂಪರ್ಕದಲ್ಲಿದ್ದ ನಾಲ್ವರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಈ ವೃದ್ಧನ ಆರೋಗ್ಯಸ್ಥಿತಿ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಗಂಭೀರವಾಗಿತ್ತು ಎನ್ನಲಾಗಿದೆ.
ತಾಯಿ, ಮಗುವಿಗೆ ಸೋಂಕು: ಚಂದ್ರಮೌಳೇಶ್ವರ ಬಡಾವಣೆಯ 28 ವರ್ಷದ ಮಹಿಳೆ ಹಾಗೂ 1 ವರ್ಷದ ಹೆಣ್ಣುಮಗುವಿಗೆ ಸೋಂಕು ತಗುಲಿದೆ. ಯಾವುದೇ ರೋಗಲಕ್ಷಣಗಳಿಲ್ಲ. ಸೋಂಕಿತರ ಪ್ರಯಾಣ ಹಿನ್ನೆಲೆ ಹಾಗೂ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ.
ಶ್ರೀನಗರದ 38 ವರ್ಷದ ಮಹಿಳೆಗೆ ಜ್ವರ ಕಾಣಿಸಿಕೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ತೆರಳಿದಾಗ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೋಂಕು ತಗುಲಿರುವುದು ದೃಢವಾಗಿದೆ.
ಹಳ್ಳಿಗಳಿಗೂ ಎಂಟ್ರಿ: ತುಮಕೂರು ತಾಲೂಕಿನ ಹಳ್ಳಿಗಳಿಗೂ ಕರೊನಾ ಪ್ರವೇಶಿಸಿದೆ. ಹೆಗ್ಗೆರೆಯ 29 ವರ್ಷದ ವ್ಯಕ್ತಿಗೆ, ಕರ್ಣಕುಪ್ಪೆಯ 46 ವರ್ಷದ ವ್ಯಕ್ತಿಗೆ ಹಾಗೂ ಚಿಕ್ಕಸಾರಂಗಿಯ 55 ವರ್ಷದ ಮಹಿಳೆಗೂ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಮಧುಗಿರಿಯಲ್ಲಿ 2: ಮಧುಗಿರಿ ಪಟ್ಟಣದ ದಂಡೂರುಬಾಗಿಲು ರಸ್ತೆಯ 24 ವರ್ಷದ ಯುವತಿ ಹಾಗೂ ಎಂಎಸ್‌ಟಿ ರಸ್ತೆಯ 72 ವರ್ಷದ ವೃದ್ಧೆಗೆ ಸೋಂಕು ತಗುಲಿದೆ. ಈ ಹೊಸ ಪ್ರಕರಣಗಳಿಗೆ ಯಾವುದೆ ಟ್ರಾವೆಲ್ ಹಿಸ್ಟರಿ ಇರುವುದಿಲ್ಲ. ಸೋಂಕಿತ ವೃದ್ಧೆಯ ಪ್ರಾಥಮಿಕ 7, ದ್ವಿತೀಯ ಹಂತದ 7 ಸಂಪರ್ಕಿತರನ್ನು ಪತ್ತೆ ಹಚ್ಚಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಪಾವಗಡ ತಾಲೂಕಿನ ತಿಮ್ಮನಹಳ್ಳಿಯ 36 ವರ್ಷದ ವ್ಯಕ್ತಿಗೆ ಹಾಗೂ ವೈ.ಎನ್.ಹೊಸಕೋಟೆಯ 42 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಇಬ್ಬರಿಗೂ ರೋಗಲಕ್ಷಣಗಳಿಲ್ಲ.
ಕೊರಟಗೆರೆ 4 ಕೇಸ್: ಕೊರಟಗೆರೆ ತಾಲೂಕಿನಲ್ಲಿ ಕರೊನಾ ಸಮುದಾಯಕ್ಕೆ ಹರಡಿದ್ದು, ಸೋಮವಾರ 4 ಪ್ರಕರಣ ದಾಖಲಾಗಿದೆ. ಪಟ್ಟಣದ 27 ವರ್ಷದ ಯುವಕ, 29 ವರ್ಷದ ಮಹಿಳೆ, ಚಟ್ಟೇನಹಳ್ಳಿಯ 25 ವರ್ಷದ ಯುವಕ, ಬೈರೇನಹಳ್ಳಿ 22 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದ್ದು, ಇವರ‌್ಯಾರು ಇತ್ತೀಚಿನ ಪ್ರಯಾಣದ ಹಿನ್ನೆಲೆ ಹೊಂದಿಲ್ಲ. ಇವರ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.
ಹುಳಿಯಾರಿಗೂ ಎಂಟ್ರಿಕೊಟ್ಟ ಮಹಾಮಾರಿ:ಹುಳಿಯಾರು ಪಟ್ಟಣದಲ್ಲಿ ಮೊದಲ ಕರೊನಾ ಪಾಸಿಟಿವ್ ಪ್ರಕರಣ ಸೋಮವಾರ ವರದಿಯಾಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಸಂತೆಬೀದಿಯ 65 ವರ್ಷದ ಮಹಿಳೆ ತಿಪಟೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಪ್ರಯಾಣದ ಹಿನ್ನೆಲೆ ಇದ್ದು ಅವರಿಗೆ ಸೋಂಕು ದೃಢವಾಗಿದೆ. ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಹುಳಿಯಾರು ಪಟ್ಟಣದಲ್ಲಿ ಸೋಂಕು ತಲ್ಲಣ ಮೂಡಿಸಿದ್ದು ಜನರು ಎಚ್ಚರದಿಂದ ಇರಲು ಮನವಿ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ಹೊರಭಾಗದಿಂದ ಹಳ್ಳಿಗೆ ಬಂದಿರುವವ ಬಗ್ಗೆ ಮಾಹಿತಿ ನೀಡುವಂತೆ ಪಿಎಸ್ಸೈ ರಮೇಶ್ ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.