ಬಂಗಾರಪೇಟೆ: ತಾಲೂಕಿನ ಪುತ್ರಸೊಣ್ಣೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹುಚ್ಕಾಯಿ ತಿಂದು 9 ಮಕ್ಕಳು ಅಸ್ವಸ್ಥರಾಗಿದ್ದು, ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಸೋಮವಾರ ಮಧ್ಯಾಹ್ನ ಬಿಸಿಯೂಟ ಸೇವಿಸಿದ ನಂತರ ಕೆಲ ಮಕ್ಕಳು ಆಟವಾಡುತ್ತಾ ಆವರಣ ಪಕ್ಕದ ಬೇಲಿಯಲ್ಲಿ ಬೆಳೆದಿದ್ದ ಹುಚ್ಚಕಾಯಿಯನ್ನು ಹಣ್ಣು ಎಂದು ಭಾವಿಸಿ ತಿಂದಿದ್ದಾರೆ. ನಂತರ ತರಗತಿಯಲ್ಲಿ ಕುಳಿತಿದ್ದಾಗ 3 ಗಂಟೆ ಸುಮಾರಿಗೆ ಹುಚ್ಕಾಯಿ ತಿಂದವರೆಲ್ಲರೂ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದಾರೆ.
ಶಿಕ್ಷಕಿ ಉಷಾರಾಣಿ ಮತ್ತು ಪಾಲಕರು ತಕ್ಷಣ ಮಕ್ಕಳನ್ನು ಆಟೋಗಳಲ್ಲಿ ಕರೆದುಕೊಂಡು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಒಂದರಿಂದ ಮೂರನೇ ತರಗತಿಯ ಮಕ್ಕಳಾದ ಗೌತಮ್ ನಂದ, ಎಂ.ಅಜಿತ್ ಸಿಂಹ, ಗಾನಶ್ರೀ, ಅನನ್ಯಾ, ಬಾಲವರ್ಧನ್ ವಂಶಿ, ಸಂಜನಾಶ್ರೀ, ರೋಹಿತ್, ಗೌತಮಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸ್ ಇನ್ಸ್ಪೆಕ್ಟರ್ ದಯಾನಂದ್ ಅವರು ಮಕ್ಕಳ ಆರೋಗ್ಯ ವಿಚಾರಿಸಿ ಪ್ರತಿ ಮಗುವಿಗೂ ಆರ್ಥಿಕ ಸಹಕಾರ ನೀಡಿ ಧೈರ್ಯ ತುಂಬಿದರು.ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಹೆಲ್ತ್ ರವಿ, ಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಗೌಡ, ಕಾರ್ಯದರ್ಶಿ ಸುಜಾತಮ್ಮ, ಶಿಕ್ಷಕರಾದ ರಮೇಶ್, ಉಷಾರಾಣಿ ವರಲಕ್ಷಿ$್ಮ, ಮುನ್ನಾರಾಯಣ ಆಸ್ಪತ್ರೆಗೆ ಭೇಟಿ ನೀಡಿದರು.