ಜಿಲ್ಲೆ

9.69 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ

ವಿಕ್ರಮ ನಾಡಿಗೇರ ಧಾರವಾಡ
ಧಾರವಾಡ ಹಾಲು ಒಕ್ಕೂಟ ವ್ಯಾಪ್ತಿಯ ಹಾಲು ಪೂರೈಕೆದಾರರಿಗೆ ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹ ಧನ ಬಿಡುಗಡೆಗೆ ಸರ್ಕಾರ ಮೀನಮೇಷ ಎಣಿಸುತ್ತಿದೆ. ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡಿರುವ ರೈತರಿಗೆ 5 ತಿಂಗಳ ಪ್ರೋತ್ಸಾಹ ಧನ 9.69 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಹೈನುಗಾರಿಕೆ ಮಾಡುತ್ತಿರುವ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಧಾರವಾಡ, ಉತ್ತರ ಕನ್ನಡ ಹಾಗೂ ಗದಗ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಒಕ್ಕೂಟ ವ್ಯಾಪ್ತಿಯಲ್ಲಿ 698 ಕಾರ್ಯನಿರತ ಹಾಲು ಉತ್ಪಾದಕ ಸಂಘಗಳಿದ್ದು, 28000ಕ್ಕೂ ಹೆಚ್ಚು ರೈತರು ಒಕ್ಕೂಟಕ್ಕೆ ಹಾಲು ಪೂರೈಸುತ್ತಿದ್ದಾರೆ. ಆದರೆ ಇವರಿಗೆ ಸರ್ಕಾರದಿಂದ ಬರಬೇಕಿರುವ ಪ್ರೋತ್ಸಾಹ ಧನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕ್ಷೀರೋದ್ಯಮ ಪ್ರೋತ್ಸಾಹಿಸಲು ಹಾಗೂ ಹೈನುಗಾರಿಕೆ ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ಸರ್ಕಾರ ರೈತರಿಗೆ ಪ್ರತಿ ಲೀಟರ್​ ಹಾಲಿಗೆ 5 ರೂ.ದಂತೆ ಪ್ರೋತ್ಸಾಹ ಧನ ನೀಡುತ್ತದೆ. ಆದರೆ ಪ್ರಸಕ್ತ ಸಾಲಿನಲ್ಲಿ 5 ತಿಂಗಳ ಪ್ರೋತ್ಸಾಹ ಧನ ಇನ್ನೂ ಬಿಡುಗಡೆ ಮಾಡಿಲ್ಲ. ಜನವರಿಯಿಂದ ಜುಲೈವರೆಗೆ (ಮಾರ್ಚ್​, ಏಪ್ರಿಲ್​ ಹೊರತುಪಡಿಸಿ) 9.69 ಕೋಟಿ ರೂ. ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ.
5 ತಿಂಗಳಿಂದ ಬಿಡುಗಡೆಯಾಗಬೇಕಿರುವ ಪ್ರೋತ್ಸಾಹ ಧನದಲ್ಲಿ ಕೆಲ ತಿಂಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹೈನುಗಾರರಿಗೆ ನೀಡಿದೆ. ಆದರೆ ಸಾಮಾನ್ಯ ವರ್ಗದ ಹೈನುಗಾರರಿಗೆ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ.
ಜನವರಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಜನವರಿಯಲ್ಲಿ 78.40 ಲಕ್ಷ ರೂ., ಗದಗ ಜಿಲ್ಲೆ 51.74 ಲಕ್ಷ ರೂ. ಹಾಗೂ ಉತ್ತರ ಕನ್ನಡ ಜಿಲ್ಲೆಗೆ 60.53 ಲಕ್ಷ ರೂ. ಸೇರಿ ಒಟ್ಟು 1.9 ಕೋಟಿ ರೂ. ಬಾಕಿ ಇದೆ. ಫೆಬ್ರವರಿಯಲ್ಲಿ ಧಾರವಾಡ 70.77 ಲಕ್ಷ ರೂ., ಗದಗ 45.17 ಲಕ್ಷ ರೂ. ಹಾಗೂ ಉತ್ತರ ಕನ್ನಡ 53.25 ಲಕ್ಷ ರೂ.ಸೇರಿ ಒಟ್ಟು 1.69 ಕೋಟಿ ರೂ. ಬಾಕಿ ಇದೆ. ಮೇ ತಿಂಗಳಲ್ಲಿ ಧಾರವಾಡ 77.94 ಲಕ್ಷ ರೂ., ಗದಗ 42.86 ಲಕ್ಷ ರೂ., ಉತ್ತರ ಕನ್ನಡ 61.35 ಲಕ್ಷ ರೂ. ಸೇರಿ 1.82 ಕೋಟಿ ರೂ., ಜೂನ್​ನಲ್ಲಿ ಧಾರವಾಡ 84.10 ಲಕ್ಷ ರೂ., ಗದಗ 50.28 ಲಕ್ಷ ರೂ., ಉತ್ತರ ಕನ್ನಡ 66.92 ಲಕ್ಷ ರೂ. ಸೇರಿ 2.01 ಕೋಟಿ ರೂ.ಹಾಗೂ ಜುಲೈ ತಿಂಗಳಲ್ಲಿ ಧಾರವಾಡ 91.99 ಲಕ್ಷ ರೂ., ಗದಗ 64.82 ಲಕ್ಷ ರೂ., ಉತ್ತರ ಕನ್ನಡ 69.11 ಲಕ್ಷ ರೂ. ಸೇರಿ 2.14 ಕೋಟಿ ರೂ.ಬಾಕಿ ಉಳಿಸಿಕೊಂಡಿದೆ.
ಈಗಾಗಲೇ ಗ್ಯಾರಂಟಿಗಳ ಹಣ ಹೊಂದಾಣಿಕೆಯಲ್ಲಿ ಹೆಚ್ಚು ಕಾಳಜಿ ವಹಿಸಿರುತ್ತಿರುವ ಕಾರಣದಿಂದಲೇ ಇತರ ಯೋಜನೆಗಳಿಗೆ ಹಿನ್ನಡೆ ಉಂಟಾಗುತ್ತಿದೆ. ಹೀಗಾಗಿ ಪ್ರೋತ್ಸಾಹ ಧನ ಬಿಡುಗಡೆ ನಿಯಮಿತವಾಗಿ ಆಗುತ್ತಿಲ್ಲ. ಸರ್ಕಾರ ಅನುದಾನ ಬಿಡುಗಡೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಬಿಡುಗಡೆ ಮಾಡಬೇಕು ಎಂಬುದು ಹೈನೋದ್ಯಮಿಗಳ ಆಗ್ರಹವಾಗಿದೆ.

ಪ್ರತಿ ತಿಂಗಳು ಪ್ರೋತ್ಸಾಹ ಧನದ ಮೊತ್ತದ ಮಾಹಿತಿ ನೀಡಲಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ ಅನುದಾನ ಬಿಡುಗಡೆಗೆ ಸಮಯವಾಗಲಿದೆ. ಹೀಗಾಗಿ ಈ ತಿಂಗಳಲ್ಲಿ ಬಾಕಿ ಉಳಿದ ಹಣ ಬಿಡುಗಡೆಯಾಗುವ ಭರವಸೆ ಇದೆ. * ಶಂಕರ ಮುಗದ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ