ತರೀಕೆರೆ: ಅಜ್ಜಂಪುರಲ್ಲಿ ವ್ಯಕ್ತಿಯೊಬ್ಬರಿಗೆ ಅಪರಿಚಿತರು ಮೊಬೈಲ್ ಕರೆ ಮೂಲಕ ಬೆದರಿಸಿ 9.59 ಲಕ್ಷ ರೂ ಹಣ ವರ್ಗಾವಣೆ ಮಾಡಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಡಿ.26 ರಂದು ಅಜ್ಜಂಪುರದ ನಿವಾಸಿಯೊಬ್ಬರಿಗೆ ಕರೆ ಮಾಡಿರುವ ಅಪರಿಚಿತರು ನಿಮ್ಮ ಮೇಲೆ ಮನಿಲ್ಯಾಂಡಿಗ್ ಕೇಸ್ ಇದೆ. ಅಲ್ಲದೇ ನಿಮ್ಮ ಆಧಾರ್‌ಕಾರ್ಡ್ ಮೇಲೆ ವಿವಿಧ ಕಡೆ 3 ಅಕೌಂಟ್ ಇದೆ. ಇವುಗಳ ಮೂಲಕ ಕಾನೂನು ಬಾಹಿರವಾಗಿ ಹಣ ವರ್ಗಾವಣೆಯಾಗುತ್ತಿದೆ. ನಿಮ್ಮನ್ನು ತಕ್ಷಣ ವಶಕ್ಕೆ ಪಡೆದು ಮುಂಬೈಗೆ ಕರೆದೊಯ್ಯಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.
ನಂತರ ವಿಡಿಯೋ ಕರೆ ಮೂಲಕ ಸಂಪರ್ಕಿಸಿ ಪ್ರಕರಣ ಗಂಭೀರವಾಗಿರುವುದರಿಂದ ತಕ್ಷಣ ಮುಂಬೈಗೆ ಕರೆದೊಯ್ಯಬೇಕಿದೆ ಎಂದು ಭಯ ಹುಟ್ಟಿಸಿ ವ್ಯಕ್ತಿ ಖಾತೆಯಿಂದ 9.59 ಲಕ್ಷ ರೂ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಲಕ್ಷಾಂತರ ರೂ ಕಳೆದುಕೊಂಡು ವ್ಯಕ್ತಿ ಅಜ್ಜಂಪುರ ಪೊಲೀಸರು ಸೈಬರ್ ಅಪರಾಧ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಇಲಾಖೆಯಿಂದ ಡಿಜಿಟಲ್ ಅರೆಸ್ಟ್ ಪ್ರಕ್ರಿಯೆ ಇಲ್ಲ. ಸಾರ್ವಜನಿಕರು ಈ ರೀತಿಯ ಕರೆಗಳ ಕುರಿತು ಎಚ್ಚರಿಕೆ ವಹಿಸಬೇಕು. ವಿಡಿಯೋ ಕರೆಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವ ಸೈಬರ್ ವಂಚಕರು ನಿಮ್ಮಲ್ಲಿ ಡಿಜಿಟಲ್ ಅರೆಸ್ಟ್ ನ ಆತಂಕ ಮೂಡಿಸಿ ಹಣ ವರ್ಗಾಯಿಸಿಕೊಳ್ಳುವ ಸಂಚು ರೂಪಿಸುತ್ತಾರೆ. ಇಂಥ ಕರೆಗಳು ಬಂದಾಗ ಹತ್ತಿರದ ಪೋಲಿಸ್ ಠಾಣೆ ಅಥವಾ ಸೈಬರ್ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಅಜ್ಜಂಪುರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ವೀರೇಂದ್ರ ತಿಳಿಸಿದ್ದಾರೆ.