ಮೈಸೂರು: ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಿಂದ ಡಿ.8ರಿಂದ 25ರವರೆಗೆ ವಿಶೇಷ ಕೈಮಗ್ಗ ಮೇಳ ‘ಸಂಸ್ಕೃತಿ-2022’ ಆಯೋಜಿಸಲಾಗಿದೆ.
ಹೆಬ್ಬಾಳು ರಿಂಗ್ ರಸ್ತೆಯಲ್ಲಿರುವ ಅರ್ಬನ್ ಹಾತ್‌ನಲ್ಲಿ ಡಿ.8 ರಂದು ಸಂಜೆ 4ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಕೈಮಗ್ಗ ಮತ್ತು ಜವಳಿ ಇಲಾಖೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅತಿಥಿಯಾಗಿ ಭಾಗವಹಿಸಲಿದ್ದು, ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಡಾ.ಎಚ್.ಆರ್. ಮಹದೇವಸ್ವಾಮಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವಿಶೇಷ ಕೈಮಗ್ಗ ಮೇಳದಲ್ಲಿ ಸುಮಾರು 60 ನೇಕಾರರರು, ನೇಕಾರರ ಸಹಕಾರ ಸಂಘಗಳು ಉತ್ತರ ಭಾರತ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಅಲ್ಲದೇ ರಾಜ್ಯದ ವಿವಿಧೆಡೆಗಳಿಂದ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರೇಷ್ಮೆ ಸೀರೆ, ಮೊಳಕಾಲ್ಮ್ಮೂರು ಸೀರೆ, ಇಳಕಲ್ ಸೀರೆ, ಕಾಂಜೀವರಂ ಸೀರೆ, ತಷರ್ ಸೀರೆ, ಕಾಂತ ಸೀರೆ, ಪಟೋಲ ರೇಷ್ಮೆ ಸೀರೆ, ಕಸೂತಿ ವಸ್ತ್ರ, ಟವೆಲ್, ಮೇಲು ಹಾಸು ಮತ್ತು ಹೊದಿಕೆ, ನೆಲಹಾಸು, ಇತರ ಕೈಮಗ್ಗದ ಉತ್ಪನ್ನಗಳು ಒಂದೇ ಸೂರಿನಡಿ ಶೇ.20ರ ರಿಯಾಯಿತಿ ದರದಲ್ಲಿ ದೊರೆಯಲಿವೆ ಎಂದು ಹೇಳಿದರು.
ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನ ಯೋಜನಾಧಿಕಾರಿ ಎಂ.ಶಿವನಂಜಸ್ವಾಮಿ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಲಕ್ಷ್ಮಣ ತಳವಾರ ಇದ್ದರು.