ವಿಜಯಪುರ: ಗಾಣಿಗ ಗುರುಪೀಠದ ಪ್ರಥಮ ಜಗದ್ಗುರು ಪೂಜ್ಯ ಜಯದೇವ ಜಗದ್ಗುರುಗಳ 8 ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಜ. 12 ರಂದು ವಿವಿಧ ಅಭಿವೃದ್ಧಿಪರ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವನಶ್ರೀ ಸಂಸ್ಥಾನಮಠದ ಡಾ.ಜಯಬಸವಕುಮಾರ ಮಹಾಸ್ವಾಮೀಜಿ ಹಾಗೂ ಅಖಿಲ ಭಾರತ ಗಾಣಿಗ ಸಮಾಜ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಬಳಿ ಇರುವ ವನಶ್ರೀ ಸಂಸ್ಥಾನ ಮಠದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ಜಯದೇವ ಜಗದ್ಗುರುಗಳ ಪ್ರಣವ ಮಂಟಪ ಲೋಕಾರ್ಪಣೆ, ವೃತ್ತ ಉದ್ಘಾಟನೆ, ಗುರುಭವನ ಭೂಮಿಪೂಜೆ ಹಾಗೂ ಧಾರ್ಮಿಕ ಸಭೆಯನ್ನು ವಿಜೃಂಭಣೆಯಿಂದ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಅವರು ತಿಳಿಸಿದರು.
ಅಂದು ಬೆಳಗ್ಗೆ 9 ಕ್ಕೆ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ವನಶ್ರೀಮಠದವರೆಗೆ ಜಯದೇವ ಜಗದ್ಗುರುಗಳ ಭಾವಚಿತ್ರದೊಂದಿಗೆ 1,111 ಮಹಿಳೆಯರಿಂದ ಕುಂಭಮೇಳ ನಡೆಯಲಿದೆ. ನಂತರ ಶ್ರೀಮಠದ ಆವರಣದಲ್ಲಿ ನೂತನ ಗುರುಭವನದ ಕಟ್ಟಡ ನಿರ್ಮಾಣಕ್ಕೆ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಮತ್ತು ಸಕ್ಕರೆ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಭೂಮಿ ಪೂಜೆ ನೆರವೇರಿಸುವರು. ಜಿಪಂ ಮುಖ್ಯ ರಸ್ತೆಯಲ್ಲಿ ನಿರ್ಮಿಸಿರುವ ಜಯದೇವ ಜಗದ್ಗುರುಗಳ ವೃತ್ತವನ್ನು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಎಸ್. ಸವದಿ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅನಾವರಣಗೊಳಿಸುವರು ಎಂದು ಲೋಣಿ ತಿಳಿಸಿದರು.
ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಅವರು ಪೂಜ್ಯ ಜಯದೇವ ಜಗದ್ಗುರುಗಳ ಪ್ರಣವ ಮಂಟಪ ಲೋಕಾರ್ಪಣೆಗೊಳಿಸುವರು. ನಂತರ ಧಾರ್ಮಿಕ ಸಮಾವೇಶವನ್ನು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸುವರು. ಡಾ.ಜಯಬಸವಕುಮಾರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ಶ್ರೀ ಜಯದೇವ ಶಿವಯೋಗೇಶ್ವರ ಟ್ರಸ್ಟ್ ಅಧ್ಯಕ್ಷ ಸಿದ್ದಮುತ್ಯಾ ಅಧ್ಯಕ್ಷತೆಯಲ್ಲಿ ಹಾಗೂ ಜ್ಞಾನಯೋಗಾಶ್ರಮ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ, ಚಿತ್ತರಗಿ-ಇಲಕಲ್‌ನ ಗುರುಮಹಾಂತ ಮಹಾಸ್ವಾಮಿಗಳು, ವೇಮನ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ, ಮಕಣಾಪುರ ಅಮೋಘೇಶ್ವರ ಗುರುಪೀಠದ ಸೋಮೇಶ್ವರ ಸ್ವಾಮೀಜಿ, ಹಿರೇರೂಗಿ ಮುಕ್ತಿಮಂದಿರ ಸುಗಲಾದೇವಿ ಮಾತೋಶ್ರೀ, ಆಳೂರು-ಚಳಕಾಪುರದ ಶಂಕರಾನಂದ ಸ್ವಾಮೀಜಿ, ಕನಕನಾಳ ಅವಜಗಿರಿ ಆಶ್ರಮದ ಗಿರೀಶಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಗಣ್ಯರು ಸೇರಿದಂತೆ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವರೆಂದು ತಿಳಿಸಿದರು.
ವಿಪ ಮಾಜಿ ಸದಸ್ಯ ಬಿ.ಜಿ. ಪಾಟೀಲ ಹಲಸಂಗಿ, ಜಯದೇವ ಶಿವಯೋಗೇಶ್ವರ ಟ್ರಸ್ಟ್‌ನ ನಿರ್ದೇಶಕ ಎನ್.ಎಸ್. ಲೋಣಿ, ಶ್ರೀಕಾಂತ ಶಿರಾಡೋಣ, ಜಿಲ್ಲಾ ಗಾಣಿಗ ಸಮಾಜ ಸಂಘದ ಅಧ್ಯಕ್ಷ ಬಿ.ಬಿ. ಪಾಸೋಡಿ, ಗೌರವಾಧ್ಯಕ್ಷ ಬಿ.ಎಂ. ಪಾಟೀಲ ಕತ್ನಳ್ಳಿ, ಪ್ರಧಾನ ಕಾರ್ಯದರ್ಶಿ ಬಾಬು ಸಜ್ಜನ, ಉಪಾಧ್ಯಕ್ಷ ಶರಣಪ್ಪ ಶ್ಯಾಪೇಟಿ, ಖಜಾಂಚಿ ಬಿ.ಕೆ. ಚೌದ್ರಿ, ಕಾರ್ಯದರ್ಶಿ ಐ.ಎಸ್. ಶಿರಡೋಣ, ಗುರುನಾಥ ಅಂದೇವಾಡಿ ಮತ್ತಿತರರಿದ್ದರು.