ಮೈಸೂರು: ನಗರದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಮನೆ ಮಾಡಿದ್ದ ಸಂಭ್ರಮ… ಚಿನ್ನದ ಪದಕ ವಿಜೇತರಿಗೆ ಶೈಕ್ಷಣಿಕ ಸಾಧನೆಯ ಖುಷಿ… ಪದವಿ ಪಡೆದವರಿಗೆ ಉನ್ನತ ಶಿಕ್ಷಣ ಪೂರೈಸಿದ ಸಡಗರ…
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವ ಸಮಾರಂಭದಲ್ಲಿ ಉಲ್ಲಾಸ, ಲವಲವಿಕೆ ಕಳೆಗಟ್ಟಿತ್ತು. ವಿದ್ಯಾರ್ಥಿಗಳ ಜತೆ ಪಾಲಕರಿಗೂ ಸಂತಸದ ಘಳಿಗೆ ಅದಾಗಿತ್ತು.
ಒಬ್ಬ ವಿದ್ಯಾರ್ಥಿನಿಗೆ ಪಿಎಚ್‌ಡಿ, 44 ಅಭ್ಯರ್ಥಿಗಳಿಗೆ ಚಿನ್ನದ ಪದಕ, 27 ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರಚಂದ್ ಗೆಹಲೋತ್ ವಿತರಿಸಿದರು.
2021-22ನೇ ಶೈಕ್ಷಣಿಕ ಸಾಲಿನ 8,722 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪದವಿ ಪಡೆದವರಲ್ಲಿ ವನಿತೆಯರು ಮೇಲುಗೈ ಸಾಧಿಸಿದರು. 5,241 ಮಹಿಳೆಯರು, 3,481 ಪುರುಷರು ಪದವಿ ಪಡೆದುಕೊಂಡರು.
ಸ್ನಾತಕೋತ್ತರ ವಿಭಾಗದಲ್ಲಿ 4,281 ಮಹಿಳೆಯರು, 2,776 ಪುರುಷರು ಸೇರಿದಂತೆ ಒಟ್ಟು 7,057 ಅಭ್ಯರ್ಥಿಗಳಿಗೆ ಪದವಿ ನೀಡಲಾಯಿತು. ಸ್ನಾತಕ ಪದವಿ ವಿಭಾಗದಲ್ಲಿ 959 ಮಹಿಳೆಯರು, 705 ಪುರುಷರು ಸೇರಿ ಒಟ್ಟು 1,664 ಅಭ್ಯರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಸ್ನಾತಕೋತ್ತರ ವಿಭಾಗದ ಕನ್ನಡ ವಿಷಯದಲ್ಲಿ 976, ಇಂಗ್ಲಿಷ್‌ನಲ್ಲಿ 713, ಹಿಂದಿ 173, ಸಂಸ್ಕೃತ 47, ಉರ್ದು 23, ಸ್ನಾತಕ ಪದವಿ ಬಿಎ 2757, ಇತಿಹಾಸ 943, ರಾಜ್ಯಶಾಸ್ತ್ರ 651, ಅರ್ಥಶಾಸ್ತ್ರ 474, ಸಮಾಜಶಾಸ್ತ್ರ 416, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ 73, ಸಾರ್ವಜನಿಕ ಆಡಳಿತ 75, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ 30 ಅಭ್ಯರ್ಥಿಗಳು ಪದವಿ ಪಡೆದರು.
ಎಂ.ಕಾಂ 1,729, ಬಿ.ಕಾಂ 1862, ಬಿ.ಎಡ್ 472 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಎಂಎಲ್‌ಐಎಸ್ಸಿ 134, ಗಣಕ ವಿಜ್ಞಾನ 69, ಎಂಎಸ್ಸಿ ರಸಾಯನಶಾಸ್ತ್ರ 43, ಗಣಿತಶಾಸ್ತ್ರ 30, ಪರಿಸರ ವಿಜ್ಞಾನ 35, ಮಾಹಿತಿ ವಿಜ್ಞಾನ 4, ಭೂಗೋಳಶಾಸ್ತ್ರ 32, ಆಹಾರ ವಿಜ್ಞಾನ ಮತ್ತು ಪೌಷ್ಟಿಕತೆ 71, ಜೀವರಸಾಯನಶಾಸ್ತ್ರ 20, ಜೈವಿಕ ತಂತ್ರಜ್ಞಾನ 22, ಭೌತಶಾಸ್ತ್ರ 36, ಸೂಕ್ಷ್ಮಜೀವಶಾಸ್ತ್ರ 30, ಮನೋ ವಿಜ್ಞಾನ ವಿಷಯದಲ್ಲಿ 32 ಅಭ್ಯರ್ಥಿಗಳು ಪದವಿಯನ್ನು ಮುಡಿಗೇರಿಸಿಕೊಂಡರು.
ನಾಲ್ವರಿಗೆ ಡಬಲ್ ಗೋಲ್ಡ್:
44 ಅಭ್ಯರ್ಥಿಗಳು ಚಿನ್ನದ ಪದಕ ಪಡೆದರು. ಅದರಲ್ಲಿ ನಾಲ್ವರು ತಲಾ ಎರಡು ಚಿನ್ನದ ಪದಕ ಪಡೆದರು. ಈ ಪೈಕಿ ಉರ್ದು ಐಚ್ಛಿಕ ವಿಷಯದ 3 ಅಭ್ಯರ್ಥಿಗಳಿರುವುದು ವಿಶೇಷ. ಎಂಎ ಕನ್ನಡ ವಿಭಾಗದಲ್ಲಿ ಎಚ್.ಎಂ.ಸೌಭಾಗ್ಯ, ಉರ್ದುವಿನಲ್ಲಿ ನಜ್ಮಾ ನಿಖಾತ್, ಆಯೆಷಾ ಸಿದ್ದಿಕ ಕೌಸರ್, ಫಾತಿಮಾ ಜಹ್ರ ಡಬಲ್ ಗೋಲ್ಡ್ ಪಡೆದ ವನಿತೆಯರು.