ಕಾರವಾರ: ಜಿಲ್ಲೆಯ ಕರಾವಳಿಯ 101 ಗ್ರಾಮ ಪಂಚಾಯಿತಿಗಳ 1380 ಸ್ಥಾನಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಯಿತು. ಒಟ್ಟು 4432 ನಾಮಪತ್ರಗಳು ಸಲ್ಲಿಕೆಯಾಗಿದ್ದು, 87 ನಾಮಪತ್ರಗಳು ತಿರಸ್ಕೃತವಾಗಿವೆ. ಒಂದೇ ಅಭ್ಯರ್ಥಿ ಸಲ್ಲಿಸಿದ್ದ ಎರಡು, ಮೂರು ನಾಮಪತ್ರಗಳಲ್ಲಿ ಒಂದನ್ನು ಪರಿಗಣಿಸಲಾಗಿದ್ದು, 4267 ಅಭ್ಯರ್ಥಿಗಳ ನಾಮಪತ್ರಗಳು ಕ್ರಮ ಬದ್ಧವಾಗಿವೆ. ಡಿ. 14 ರಂದು ಮಧ್ಯಾಹ್ನ 3ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ನಂತರ ಅಂತಿಮ ಕಣದ ಚಿತ್ರಣ ಲಭ್ಯವಾಗಲಿದೆ.
ತಾಲೂಕುವಾರು ಮಾಹಿತಿ: ಕಾರವಾರದ 18 ಗ್ರಾಪಂಗಳ 226 ಸ್ಥಾನಗಳಿಗೆ 694 ನಾಮಪತ್ರಗಳು ಸಲ್ಲಿಕೆಯಾಗಿದ್ದು, 1 ನಾಮಪತ್ರ ತಿರಸ್ಕೃತವಾಗಿದೆ. 672 ಆಕಾಂಕ್ಷಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಅಂಕೋಲಾದ 21 ಗ್ರಾಪಂಗಳ 226 ಸ್ಥಾನಗಳಿಗೆ 745 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 22 ನಾಮಪತ್ರಗಳು ತಿರಸ್ಕೃತವಾಗಿದ್ದು, 715 ಜನರ ನಾಮಪತ್ರಗಳು ಕ್ರಮಬದ್ಧವಾಗಿವೆ. ಕುಮಟಾದ 22 ಗ್ರಾಪಂಗಳ 321 ಸ್ಥಾನಗಳಿಗೆ 1068 ನಾಮಪತ್ರಗಳು ಸಲ್ಲಿಕೆಯಾಗಿದ್ದವು. 19 ನಾಮಪತ್ರ ತಿರಸ್ಕೃತವಾಗಿದ್ದು, 1041 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.
ಹೊನ್ನಾವರದ 24 ಗ್ರಾಪಂಗಳ 323 ಸ್ಥಾನಗಳಿಗೆ 1072 ನಾಮಪತ್ರಗಳು ಸಲ್ಲಿಕೆಯಾಗಿದ್ದವು. 24 ನಾಮಪತ್ರಗಳು ತಿರಸ್ಕೃತವಾಗಿದ್ದು, 1019 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಭಟ್ಕಳದ 16 ಗ್ರಾಪಂಗಳ 284 ಸ್ಥಾನಗಳಿಗೆ 853 ನಾಮಪತ್ರಗಳು ಸಲ್ಲಿಕೆಯಾಗಿದ್ದು, 21 ತಿರಸ್ಕೃತವಾಗಿವೆ. 820 ಜನರ ನಾಮಪತ್ರಗಳು ಕ್ರಮಬದ್ಧವಾಗಿವೆ.
7 ಸ್ಥಾನ ಖಾಲಿ: ನಾಮಪತ್ರ ಪರಿಶೀಲನೆಯ ನಂತರ ಕಾರವಾರದ 2, ಅಂಕೋಲಾದ 3, ಹೊನ್ನಾವರ ಹಾಗೂ ಭಟ್ಕಳದ ತಲಾ 1 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗದೇ ಖಾಲಿ ಉಳಿದಿವೆ.
ಅವಿರೋಧ ಆಯ್ಕೆಗೆ ಆಮಿಷವೊಡ್ಡಿದರೆ ಕ್ರಮ
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವಿರೋಧ ಆಯ್ಕೆಗೆ ಆಮಿಷವೊಡ್ಡುವುದು, ನಿಯಮ ಬಾಹಿರ ವ್ಯವಹಾರ ನಡೆಸಿದಲ್ಲಿ ಕಾನೂನು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಎಚ್ಚರಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾಪಂ ಸದಸ್ಯ ಸ್ಥಾನ ಹರಾಜು ಮುಂತಾದ ವ್ಯವಹಾರಗಳನ್ನು ಚುನಾವಣೆ ಆಯೋಗ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ವಹಿಸುತ್ತಿದೆ. ಅದರಂತೆ ಜಿಲ್ಲೆಯಲ್ಲಿಯೂ ನಡೆಯುವ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಸೂಚಿಸಿದೆ. ಒಂದು ಕ್ಷೇತ್ರಕ್ಕೆ ಒಬ್ಬ ಮಾತ್ರ ನಾಮಪತ್ರ ಸಲ್ಲಿಸಿದರೆ ಅದನ್ನು ಅವಿರೋಧ ಆಯ್ಕೆ ಎಂದು ಪರಿಗಣಿಸಲಾಗುವುದು. ಆದರೆ, ಈ ಸಂಬಂಧ ಪರಿಶೀಲನೆ ನಡೆಸಲಾಗುವುದು. ತಾಲೂಕಿನ ಎಲ್ಲ ನೀತಿ ಸಂಹಿತೆ ತಂಡ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಯು ಟ್ಯೂಬ್ ಚಾನಲ್ಗಳ ವಿರುದ್ಧ ಕ್ರಮ
ಯು ಟ್ಯೂಬ್ ಚಾನಲ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗಳ ತೇಜೋವಧೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ.ಎಚ್ಚರಿಸಿದ್ದಾರೆ. ಯು ಟ್ಯೂಬ್ ಚಾನಲ್ಗಳ ಹೆಸರಿನಲ್ಲಿ ಗ್ರಾಪಂ ಚುನಾವಣೆಯ ಆಕಾಂಕ್ಷಿಗಳ ಬಗ್ಗೆ ಅಪ ಪ್ರಚಾರ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಯಾವುದೇ ನೋಂದಣಿ ಇಲ್ಲದ ಇವುಗಳನ್ನು ನಿಯಂತ್ರಿಸುವ ಅಧಿಕಾರ ಜಿಲ್ಲಾಧಿಕಾರಿಗಿದೆ. ಈ ಸಂಬಂಧ ನಿರಂತರ ನಿಗಾ ಇಡುವಂತೆ ಪೊಲೀಸ್ ಇಲಾಖೆಗೂ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸದಿದ್ದರೂ ಪ್ರಚಾರ ಶುರು
ಸಿದ್ದಾಪುರ: ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸದವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಕಣಕ್ಕಿಳಿಯುವ ಅಭ್ಯರ್ಥಿಗಳು ಹಾಗೂ ಹಲವು ವರ್ಷಗಳಿಂದ ಪಕ್ಷದ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೂ ಮುಖಂಡರು ಕಡೆಗಣಿಸಿ ಇತ್ತೀಚೆಗೆ ಪಕ್ಷಕ್ಕೆ ಸೇರಿದವರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಮಣೆ ಹಾಕುತ್ತಿದೆ ಎಂಬುದು ಕೆಲ ಕಾರ್ಯಕರ್ತರ ಆರೋಪ. ಹೀಗಾಗಿ ಕೆಲವರು ಏನಾದರಾಗಲಿ ಈ ಬಾರಿ ಚುನಾವಣೆ ಎದುರಿಸುತ್ತೇವೆ ಎಂದು ಬೆಂಬಲಿಗರೊಂದಿಗೆ ತಮ್ಮ ವ್ಯಾಪ್ತಿಯ ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸುತ್ತಿದ್ದಾರೆ. ಅಸಮಾಧಾನಗೊಂಡ ಕಾರ್ಯಕರ್ತರ ಮನವೊಲಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಮುಂದಾಗಿದ್ದಾರೆ.
ಹಳ್ಳಿಯಲ್ಲಿ ಚುನಾವಣೆ ಪಟ್ಟಣದಲ್ಲಿ ಚರ್ಚೆ:
ಗ್ರಾಮೀಣ ಪ್ರದೇಶದಲ್ಲಿ ಎಲ್ಲಿ ಹೋದರೂ ಗ್ರಾಪಂ ಚುನಾವಣೆಯದ್ದೆ ಮಾತುಕತೆ. ಯಾರು ನಿಲ್ಲಬೇಕು, ಬೇಡ, ಯಾರು ಗೆಲುವು ಸಾಧಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ, ಇದಕ್ಕಿಂತ ಮುಖ್ಯವಾಗಿ ಹಳ್ಳಿಯಲ್ಲಿ ನಿಂತಿರುವ ತಮ್ಮ ಪಕ್ಷದ ಬೆಂಬಲಿಗರನ್ನು ಹೇಗೆ ಗೆಲ್ಲಿಸಬೇಕು, ಯಾರ ಹತ್ತಿರ ಹೇಳಿಸಿದರೆ ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಬಹುದು ಎನ್ನುವ ಲೆಕ್ಕಾಚಾರ, ಬಿಸಿ ಬಿಸಿ ಚರ್ಚೆ ಪಟ್ಟಣದಲ್ಲಿ ಕಂಡು ಬರುತ್ತಿದೆ.