ಜಿಲ್ಲೆ

ಸಮ್ಮೇಳನಾಧ್ಯಕ್ಷರಿಗೆ ಅದ್ದೂರಿ ಸ್ವಾಗತ: ಇಂದಿನ ಕಾರ್ಯಕ್ರಮ ಹೀಗಿದೆ...

ಕಲಬುರಗಿ ನಗರದಲ್ಲಿ ಬುಧವಾರದಿಂದ ಆರಂಭವಾಗುವ 85ನೇ ನುಡಿ ಜಾತ್ರೆಯ ಸರ್ವಾಧ್ಯಕ್ಷರಾಗಿರುವ ಭಾವಗೀತೆಗಳ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಮಂಗಳವಾರ ಬೆಳಗ್ಗೆ ಉದ್ಯಾನ್ ಎಕ್ಸಪ್ರೆಸ್ ರೈಲಿನ ಮೂಲಕ ಬಂದಿಳಿಯುತ್ತಲೇ, ಅವರಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು. ಎಚ್​ಎಸ್​ವಿ ಅವರನ್ನು ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಸ್ವಾಗತ ಸಮಿತಿ ಸದಸ್ಯರು ಪುಷ್ಪಗುಚ್ಛ ನೀಡಿ ಬರಮಾಡಿಕೊಂಡರು. ವೆಂಕಟೇಶಮೂರ್ತಿ ಜತೆ ಪುತ್ರರಾದ ಸುಹಾಸ್, ಸುಮಂತ, ಸಂಜಯ ಮತ್ತು ಸೊಸೆ ಶಾಲಿನಿ ಆಗಮಿಸಿದ್ದು, ಅವರನ್ನೂ ಸ್ವಾಗತಿಸಲಾಯಿತು. ನಂತರ ಬೈಕ್ ರ‍್ಯಾಲಿ ಮೂಲಕ ಅವರು ತಂಗಲಿರುವ ವಿಟಿಯು ಅತಿಥಿ ಗೃಹಕ್ಕೆ ಕರೆತರಲಾಯಿತು.

ಮಕ್ಕಳನ್ನೂ ಕರೆತನ್ನಿ: ಸಮ್ಮೇಳನಕ್ಕೆ ಆಗಮಿಸುವವರು ನಿಮ್ಮ ಕುಟುಂಬ ಮತ್ತು ಮಕ್ಕಳೊಂದಿಗೆ ಬನ್ನಿ ಎಂದು ಸರ್ವಾಧ್ಯಕ್ಷ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಕರೆ ನೀಡಿದರು. ಇಂಥ ಸಮ್ಮೇಳನದಲ್ಲಿ ಕಲ್ಯಾಣ ಕರ್ನಾಟಕ ಮತ್ತು ಅಖಂಡ ಕರ್ನಾಟಕದ ಜನರು ಭಾಗಿಯಾಗಿ ಯಶಸ್ವಿಗೊಳಿಸಬೇಕು. ಬೆಂಗಳೂರಿನ ಕಲಾ ಮಂದಿರಗಳಲ್ಲಿ ಮಕ್ಕಳನ್ನು ಬಿಡುವುದಿಲ್ಲ. ಹೀಗಾಗಿ ಇಲ್ಲಿ ಮಕ್ಕಳನ್ನು ಕರೆದುಕೊಂಡು ಬರಬೇಕು ಎಂದು ಮನವಿ ಮಾಡಿದರು.

# ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ ಬೆಳಗ್ಗೆ 8ಕ್ಕೆ ಡಿಸಿಎಂ ಗೋವಿಂದ ಕಾರಜೋಳ ರಾಷ್ಟ್ರ ಧ್ವಜಾರೋಹಣ, ಕಸಾಪ ಅಧ್ಯಕ್ಷ ಮನು ಬಳಿಗಾರ ಪರಿಷತ್ ಧ್ವಜಾರೋಹಣ ಹಾಗೂ ಪರಿಷತ್ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ನಾಡ ಧ್ವಜಾರೋಹಣ ನೆರವೇರಿಸಲಿದ್ದಾರೆ.

# ಬೆಳಗ್ಗೆ 8.30ಕ್ಕೆ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಡಿಸಿ ಶರತ್ ಚಾಲನೆ.

# ಬೆಳಗ್ಗೆ 10.30ಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಂದ ಸಮ್ಮೇಳನಕ್ಕೆ ಚಾಲನೆ.

# ಸಂಜೆ 6.30ರಿಂದ ರಾತ್ರಿ 11ರವರೆಗೆ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ.

# ಸಂಜೆ 6.40ರಿಂದ ರಾತ್ರಿ 10.30ಕ್ಕೆ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣ (ಸಮಾನಾಂತರ ವೇದಿಕೆ-1)ದಲ್ಲಿ ವಿವಿಧ ಕಾರ್ಯಕ್ರಮ.

# ಸಂಜೆ 5.30ರಿಂದ ರಾತ್ರಿ 10.30ರವರೆಗೆ ಮಹಾತ್ಮಗಾಂಧಿ ಸಭಾಂಗಣ (ಸಮಾನಾಂತರ ವೇದಿಕೆ-2)ದಲ್ಲಿ ಕಾರ್ಯಕ್ರಮ ಆಯೋಜನೆ.

ಆಲಂಗಿಸುವ ಅನುಭವ ಮಂಟಪ

ಅಕ್ಷರ ಜಾತ್ರೆ ಸಭಾಂಗಣಕ್ಕೆ ಅನುಭವ ಮಂಟಪ ಎಂದು ಹೆಸರಿಸಲಾಗಿದ್ದು, ನಿಜಕ್ಕೂ 12ನೇ ಶತಮಾನದ ಬಸವಾದಿ ಶರಣರನ್ನು ಕಂಡ ಅನುಭೂತಿ ಸಿಗುವಂತೆ ಪ್ರವೇಶದಲ್ಲಿ ವಿಶ್ವದ ಮೊದಲ ಸಂಸತ್ತು ‘ಅನುಭವ ಮಂಟಪ’ ಕಲಾಕೃತಿಯನ್ನು ನಾಡೋಜ ಜೆ.ಎಸ್.ಖಂಡೇರಾವ್ ಚಿತ್ರಿಸಿದ್ದು, ಅದರ ಪ್ರತಿರೂಪ ಸಾಹಿತ್ಯ ಪ್ರೇಮಿಗಳನ್ನು ಆಕರ್ಷಿಸಲಿದೆ. ಅನುಭವ ಮಂಟಪ ಪ್ರವೇಶಿಸುವ ಎರಡು ದ್ವಾರಗಳಿಗೆ ದೊಡ್ಡಪ್ಪ ಅಪ್ಪ ಮತ್ತು ಶಾಂತರಸ ಹೆಸರಿಡಲಾಗಿದೆ.