ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ): ಪೌರತ್ವ ಕಾಯ್ದೆ ಬಗ್ಗೆ ತಗಾದೆ, ತೊಗರಿ ವಿಚಾರ ಗದ್ದಲ, ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಮನು ಬಳಿಗಾರ ರಾಜೀನಾಮೆ ಕೊಡಬೇಕೆಂಬ ರಗಳೆ. ಇವು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಪ್ರಮುಖ ಅಂಶಗಳು.
ನದಿ, ನುಡಿ, ಗಡಿ ಆತಂಕದ ವಿಚಾರ ಮೀರಿದಂತೆಯೇ ನಿಗದಿಯಾಗಿದ್ದ ಗೋಷ್ಠಿಗಳ ಪೈಕಿ ಒಂದಷ್ಟು ಅನುರಕ್ತ ವಿಷಯಗಳೂ ಪ್ರವಹಿಸಿದವು. ನೀರಾವರಿ ಬಗ್ಗೆ ಕೃಷಿ ತಜ್ಞ ಶಿವಾನಂದ ಕಳವೆ ಮಾತು, ಪ್ರಮೇಯ ರೀತಿ ವಿಷಯ ಮನದಟ್ಟು ಮಾಡಿ ಕನ್ನಡಾತಂಕ ಕೊಂಚ ದೂರ ಮಾಡಿದ ಸಂಶೋಧಕ ಷ.ಷಟ್ಟರ್, ಮಹಿಳೆಯರು ಯಾವ ದಿಕ್ಕಿನಲ್ಲಿ ಹೋರಾಡಬೇಕೆಂದು ಹಾದಿ ತೋರಿದ ಶಿವಗಂಗಾ ರುಮ್ಮಾ ಮಾತುಗಳು ಉತ್ಕೃಷ್ಟವಾಗಿದ್ದವು.
ಈ ನಡುವೆಯೇ ಕೆಲವು ವೈರುಧ್ಯಗಳು ದಾಖಲಾದವು. ಸಮ್ಮೇಳನದ ದಿಕ್ಕನ್ನು ಬೇರೆಡೆ ಸೆಳೆಯುವ ಅಪ್ರಾಸಂಗಿಕ ವಿಚಾರ ಇದ್ದರೂ ನಾಡಿನ ಎಲ್ಲೆಡೆಯಿಂದ ಬಂದಿದ್ದ ಕನ್ನಡಿಗರು ಮಾತ್ರ ಸ್ಪಂದಿಸದೆ ತಮ್ಮ ಪಾಡಿಗೆ ತಾವಿದ್ದರು. ಎಲ್ಲವನ್ನೂ ಆಲಿಸಿದರು.
ಪ್ರಧಾನ ವೇದಿಕೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಾಹಿತ್ಯ ಸಮ್ಮೇಳನ ವೇದಿಕೆಯಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ ಎನ್ನುತ್ತಲೇ ಬಿಜೆಪಿ ವಿರುದ್ಧ ಪರೋಕ್ಷವಾಗಿ ಹರಿಹಾಯಲು ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ಸಂವಿಧಾನ ಅತಂಕ ಸ್ಥಿತಿಯಲ್ಲಿದೆ. ಕೆಲವರು ಸಂವಿಧಾನದ ಆಶಯಕ್ಕೆ ಧಕ್ಕೆ ತರುವಂಥ ಕೆಲಸ ಮಾಡುತ್ತಿದ್ದಾರೆ. ಈ ಆತಂಕಕಾರಿ ಬೆಳವಣಿಗೆ ಬಗ್ಗೆ ಸಮ್ಮೇಳನದಲ್ಲಿ ಭಾಗವಹಿಸಿರುವ ಎಲ್ಲ ಸಾಹಿತಿಗಳು, ಓದುಗರು ಎಚ್ಚೆತ್ತುಕೊಳ್ಳಬೇಕಿದೆ. ಸಾಹಿತಿಗಳು ದೇಶದ ಆಂತರಿಕ ವ್ಯವಸ್ಥೆಗೆ ಧಕ್ಕೆಯಾಗುವಂತಹ ಬೆಳವಣಿಗೆ ಬಗ್ಗೆ ಬರೆದು ಜಾಗೃತಿ ಮೂಡಿಸಬೇಕಿದೆ ಎನ್ನುವ ಮೂಲಕ ಕೇಂದ್ರ ಸರ್ಕಾರದ ಪದನಾಮ ಬಳಸದೆ ಕುಟುಕಿದರು.
ಇವರ ಮಾತಿಗೆ ಮುನ್ನ ಮಹಿಳಾ ಗೋಷ್ಠಿಯಲ್ಲಿ ಲೇಖಕಿ ಡಾ.ಆರ್.ಪೂರ್ಣಿಮಾ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಪೌರತ್ವ ಕಾಯ್ದೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದರು. ಪೂರ್ಣಿಮಾ ಅವರಂತೂ ಸಿಎಎ ಪ್ರತಿಭಟನೆ ಬಗ್ಗೆ ಪದೇಪದೆ ಪ್ರಸ್ತಾಪಿಸಿ ಜನರಿಗೆ ತಿಳಿಸುವ ಯತ್ನ ಮಾಡಿದರು.
ಅಯೋಧ್ಯೆಯಲ್ಲ...!: ಜಾತಕ ಕತೆಗಳ ಪ್ರಕಾರ ದಶರಥನ ರಾಜಧಾನಿ ವಾರಾಣಸಿಯೇ ಹೊರತು, ಅಯೋಧ್ಯೆ ಅಲ್ಲ ಎಂದು ಹಿರಿಯ ಸಾಹಿತಿ ದೇವೇಂದ್ರ ಹೆಗ್ಗಡೆ ವ್ಯಾಖ್ಯಾನಿಸಿದರು. ಜಾತಕ ಕತೆಗಳು ಪ್ರಾಚೀನವೊ? ಅಥವಾ ವಾಲ್ಮೀಕಿ ರಾಮಾಯಣ ಪ್ರಾಚೀನವೋ ಎಂಬ ಪ್ರಶ್ನೆ ಚರ್ಚೆಗೆ ಬರುತ್ತದೆ. ಇದನ್ನು ತಜ್ಞರು ಉತ್ತರಿಸಬೇಕಾಗಿದೆ ಎನ್ನುವ ಮೂಲಕ ಚರ್ಚೆಗೆ ಹೊಸ ವಿಷಯ ನೀಡಿದರು.
ವಿಷಯಾಂತರ ಮಾಡಿದ ಗೋಷ್ಠಿ ಅಧ್ಯಕ್ಷ
ಕಲಬುರಗಿ ಜಿಲ್ಲಾ ದರ್ಶನ ವಿಷಯ ಕುರಿತ ಗೋಷ್ಠಿಯಲ್ಲಿ ಉಪನ್ಯಾಸಕರೆಲ್ಲರೂ ನೀಡಿದ್ದ ವಿಷಯ ಮಂಡಿಸಿ ಕಲಬುರಗಿ ಸಮಗ್ರ ಅಭಿವೃದ್ಧಿ ಮೇಲೆ ಬೆಳಕು ಚೆಲ್ಲಿದರು. ಆದರೆ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪೊ›.ಆರ್.ಕೆ.ಹುಡಗಿ, ಸಮ್ಮೇಳನ ಮುಗಿದ ಕೂಡಲೇ ಕಸಾಪ ಅಧ್ಯಕ್ಷ ಮನು ಬಳಿಗಾರ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಬಲವೂ ಅಲ್ಲದ, ಎಡವೂ ಅಲ್ಲದ ಅವರೆಲ್ಲಿಯವರು ಎಂದು ಪ್ರಶ್ನಿಸಿದರು. ಇಷ್ಟಕ್ಕೆ ಸೀಮಿತವಾಗದ ಅವರ ಮಾತು, ಸಚಿವ ಸಿ.ಟಿ.ರವಿ ಮಾತಿನಂತೆ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಿರುವ ಅನುಮಾನವಿದೆ ಎನ್ನುವ ಮೂಲಕ ತಗಾದೆ ತೆಗೆದರು. ಇನ್ನೊಂದೆಡೆ ಕೃಷಿ ಮತ್ತು ನೀರಾವರಿ ಗೋಷ್ಠಿಯಲ್ಲಿ ತೊಗರಿ ಬೆಳೆ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ಸಭಿಕರ ಮಧ್ಯೆ ಕುಳಿತಿದ್ದ ಮಾರುತಿ ಮಾನ್ಪಡೆ ಅಧ್ಯಕ್ಷೀಯ ಭಾಷಣಕ್ಕೇ ಅಡ್ಡಿಪಡಿಸಿದರು. ಸಮಜಾಯಿಷಿಯನ್ನೂ ಕೇಳದ ಸ್ಥಿತಿಯಲ್ಲಿದ್ದ ಅವರ ಉದ್ದೇಶ ಸ್ಪಷ್ಟವಾಗುತ್ತಿದ್ದಂತೆ ಪೊಲೀಸರು ಅನಾಮತ್ತಾಗಿ ಸಭಾಂಗಣದಿಂದ ಎತ್ತಿ ಹೊರಹಾಕಿದರು. ಕೊನೆಗೆ ತಮ್ಮ ವಾಹನದಲ್ಲೇ ಕರೆದೊಯ್ದರು. ಇತ್ತ ಅಧ್ಯಕ್ಷರ ಭಾಷಣ ಮೊಟಕುಗೊಂಡಿತು.