ಜಿಲ್ಲೆ

ನುಡಿತೇರು ಸಂಭ್ರಮ: ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನ ಇಂದಿನಿಂದ

ಕನ್ನಡ ನಾಡು-ನುಡಿಗೆ ಮೇಲಿಂದ ಮೇಲೆ ಆಪತ್ತು ಬಂದೊದಗುತ್ತಿರುವ ಹೊತ್ತಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಾಜ್ಯದ ಗಡಿ ಜಿಲ್ಲೆ ಕಲಬುರಗಿಯಲ್ಲಿ ಬುಧವಾರದಿಂದ ಮೂರು ದಿನ ನಡೆಯಲಿದೆ. ನಾಡಿನ ಮೇರು ಸಾಹಿತಿಗಳು ಕಳೆದ ಎಂಟೂವರೆ ದಶಕದಿಂದ ಮುನ್ನಡೆಸಿರುವ ನುಡಿತೇರಿನ ನೇತೃತ್ವವನ್ನು ಈ ಬಾರಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ವಹಿಸಲಿದ್ದಾರೆ. ಕಲ್ಯಾಣ ಕರ್ನಾಟಕದ ಶಕ್ತಿಕೇಂದ್ರ ಕಲಬುರಗಿ ಶರಣ ಸೂಫಿಸಂತರ ಭಾವೈಕ್ಯತೆ ನೆಲೆವೀಡು. ಬೌದ್ಧ ಜೈನರೊಳಗೊಂಡ ಸಮನ್ವಯತೆಯ ಪುಣ್ಯಭೂಮಿ. ಕನ್ನಡಕ್ಕೆ ಒದಗಿಬಂದಿರುವ ಕಷ್ಟಗಳ ಬಗ್ಗೆ ಇಲ್ಲಿ ಚರ್ಚೆ ನಡೆದು, ಒಮ್ಮತದ ದನಿ ಮೂಡುವ ನಿರೀಕ್ಷೆಯಿದೆ. ಕಲಬುರಗಿ ವಿಶ್ವವಿದ್ಯಾಲಯ ಆವರಣ ಅಕ್ಷರ ಜಾತ್ರೆಗೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಅನುಭವ ಮಂಟದ ಶ್ರೀವಿಜಯ ಪ್ರಧಾನ ವೇದಿಕೆ, ಡಾ. ಚನ್ನಣ್ಣ ವಾಲಿಕಾರ ವೇದಿಕೆ, ಡಾ. ಎಂ.ಎಸ್. ಲಠ್ಠೆ ವೇದಿಕೆಯಲ್ಲಿ ಪ್ರತ್ಯೇಕ ಗೋಷ್ಠಿಗಳು ನಡೆಯಲಿವೆ.

ನಾಡಿನ ಮೂಲೆಮೂಲೆಯಿಂದ ಆಗಮಿಸುವ ಕನ್ನಡಾಭಿಮಾನಿಗಳಿಗೆ ಆತಿಥ್ಯ ನೀಡಲು ಕಲಬುರಗಿ ಸಿದ್ಧಗೊಂಡಿದೆ. ಮೊದಲ ದಿನ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಬಳಿಕ ಮುಖ್ಯಮಂತ್ರಿ ಸಮ್ಮುಖದಲ್ಲಿ ಅಧ್ಯಕ್ಷರ ದಿಕ್ಸೂಚಿ ಭಾಷಣ ಇರಲಿದೆ. ಬಳಿಕ ಸಮಾನಾಂತರ ವೇದಿಕೆಗಳಲ್ಲಿ ನಾಡಿನ ಬದುಕು ಬವಣೆ, ಸಮಸ್ಯೆ ಸವಾಲು, ಕಲೆ ಸಂಸ್ಕೃತಿ ಇತ್ಯಾದಿ ವಿಚಾರದಲ್ಲಿ ವಿಚಾರ ಮಂಡನೆ, ಚರ್ಚೆ ನಡೆಯಲಿದೆ. ಕೊನೆಯಲ್ಲಿ ಕನ್ನಡ ಉಳಿಸಿ ಬೆಳೆಸಲು ಆಳುವವರ ಕರ್ತವ್ಯವೇನು? ಜನಸಾಮಾನ್ಯರು ಏನು ಮಾಡಬೇಕು? ಸಮಾಜದ ಜವಾಬ್ದಾರಿ ಏನು ಎಂಬ ಬಗ್ಗೆ ನಿರ್ಣಯ ಕೈಗೊಂಡು ಹಕ್ಕೊತ್ತಾಯ ಮಾಡಲಾಗುತ್ತದೆ.

ಏನೇನು ಚರ್ಚೆ?: ಸಂಪ್ರದಾಯದಂತೆ ಸಮ್ಮೇಳನದಲ್ಲಿ ಸ್ಥಳೀಯತೆಗೂ ಗಮನ ನೀಡಲಾಗುತ್ತಿದೆ. ಹೈದರಾಬಾದ್ ಕರ್ನಾಟಕ ‘ಕಲ್ಯಾಣ ಕರ್ನಾಟಕ’ವಾಗಿ ರೂಪಾಂತರವಾಗಿದೆ. ಜತೆಗೆ ಇತ್ತೀಚಿನ ವರ್ಷಗಳಲ್ಲಿ ಸಾವಿರಾರು ಕೋಟಿ ರೂ. ಅನುದಾನ ಈ ಭಾಗಕ್ಕೆ ಬಂದಿದೆ. ವಿಶೇಷ ಪ್ರಾತಿನಿಧ್ಯವೂ ಸಿಕ್ಕಿದೆ. ಇಷ್ಟೆಲ್ಲ ಆದ ಬಳಿಕ ಈ ಭಾಗದಲ್ಲಿ ಏನಾಗಿದೆ? ಏನಾಗಿಲ್ಲ ಎಂಬ ಬಗ್ಗೆ ಸಮ್ಮೇಳನದಲ್ಲಿ ಚರ್ಚೆಗೆ ಅವಕಾಶ ನೀಡಲಾಗಿದೆ. ನೀರಾವರಿ, ಜಾನಪದ, ಹೊಸ ತಂತ್ರಜ್ಞಾನ, ಸಮಕಾಲೀನ ಸಾಹಿತ್ಯಕ್ಕಿರುವ ಸವಾಲು, ಮಕ್ಕಳ ಮೇಲೆ ತಂತ್ರಜ್ಞಾನದ ಪರಿಣಾಮ ಇನ್ನಿತರ ವಿಷಯಗಳ ಬಗ್ಗೆಯೂ ಸಮ್ಮೇಳನ ಬೆಳಕು ಚೆಲ್ಲಲಿದೆ.

ಈ ಬಾರಿ ಹೊಸತು

# ಬೇಕಾಬಿಟ್ಟಿ ಭಾಷಣ ಮಾಡುವಂತಿಲ್ಲ.

# ಸಮಯಮಿತಿ ಪಾಲನೆಗೆ ಮುಂಚಿತ ವಾಗಿ ಭಾಷಣದ ಪ್ರತಿ ಸಲ್ಲಿಸುವುದು ಕಡ್ಡಾಯ.

# ಲೇಖಕರ ಕಟ್ಟೆಯಲ್ಲಿ ಪ್ರಮುಖರು ಕಾಣಿಸಿಕೊಳ್ಳಲಿದ್ದು, ಜನಸಾಮಾನ್ಯರಿಗೂ ಚರ್ಚೆ ನಡೆಸಲು ಅವಕಾಶ.

ಮುಂದಿನ ಸಮ್ಮೇಳನ?

ಹಾವೇರಿ ಮತ್ತು ಚಿಕ್ಕಬಳ್ಳಾಪುರದಲ್ಲಿ 86ನೇ ಸಮ್ಮೇಳನ ನಡೆಯುವ ಸಾಧ್ಯತೆ ಇದೆ. ಬಳ್ಳಾರಿ, ಮೂಡಬಿದರೆ ಸೇರಿ ವಿವಿಧೆಡೆಯಿಂದ ಸಮ್ಮೇಳನದ ಆತಿಥ್ಯಕ್ಕೆ ಒತ್ತಡ ಇದೆ. ಹಾವೇರಿ ಅಥವಾ ಚಿಕ್ಕಬಳ್ಳಾಪುರದಲ್ಲಿ ಸಮ್ಮೇಳನ ನಡೆಸಬೇಕೆಂದು ಕಸಾಪ ಮೇಲೆ ಒತ್ತಡ ಹೆಚ್ಚಿದೆ.

ಸರ್ಕಾರ ಸ್ಪಂದಿಸಲಿ...

ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಕ್ಯಾತೆಗೆ ರಾಜ್ಯ ಸರ್ಕಾರ ಈವರೆಗೆ ದೃಢ ಅಭಿಪ್ರಾಯ ನೀಡಿಲ್ಲ. ಹೀಗಾಗಿ ರಾಜ್ಯದಿಂದಲೂ ಸಮರ್ಥನೀಯ ದನಿ ಬರಬೇಕಿದೆ. ಜತೆಗೆ ಆಂಧ್ರದಲ್ಲಿ ಕನ್ನಡ ಮುಗಿಸುವ ಕೆಲಸ ನಡೆದಿದೆ. ಮಹದಾಯಿ ವಿವಾದ ಇತ್ಯರ್ಥವಾಗಬೇಕಿದೆ. ಇವೆಲ್ಲ ವಿಚಾರ ಇಟ್ಟುಕೊಂಡೇ ಸಮ್ಮೇಳನದಿಂದ ನಿರ್ಣಯ ಹೊರಬರಬೇಕಿದೆ. ಸರ್ಕಾರ ಸಮ್ಮೇಳನಕ್ಕೆ ಹಣಕೊಟ್ಟರೆ ಸಾಲದು, ಕಿವಿಯೂ ಆಗಬೇಕಿದೆ.

ಇಡೀ ಕರ್ನಾಟಕವನ್ನು, ಇತಿಹಾಸ, ಪರಂಪರೆ, ಪ್ರಸಕ್ತ ನಡಾವಳಿಯನ್ನು ಅರಿಯಬೇಕು. ಸಾಹಿತ್ಯ, ಸಂಸ್ಕೃತಿ, ಸಂಗೀತ, ಯಕ್ಷಗಾನ ಇವೆಲ್ಲ ಕನ್ನಡದ ಬೇರೆ-ಬೇರೆ ಅಂಗಗಳು. ಅವು ಎಲ್ಲವೂ ಒಟ್ಟಾಗಿ ಕನ್ನಡ ಸಂಸ್ಕೃತಿ. ಅದನ್ನು ನಾವು ನಮ್ಮೊಳಗೆ ತೆಗೆದುಕೊಳ್ಳದಿದ್ದರೆ ನಿಜವಾದ ಅಭಿಮಾನ ಹುಟ್ಟಲು ಸಾಧ್ಯವಿಲ್ಲ.

| ಡಾ. ಎಚ್.ಎಸ್. ವೆಂಕಟೇಶಮೂರ್ತಿ ಸಮ್ಮೇಳನಾಧ್ಯಕ್ಷರು

ಕನ್ನಡಕ್ಕೆ ಆತಂಕವೇನು?

  1. ಕನ್ನಡ ಮಾಧ್ಯಮ ಶಾಲೆಗಳ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಜಾಗತೀಕರಣದ ಬಲೆಯೊಳಗೆ ಸಿಲುಕಿ ಇಂಗ್ಲಿಷ್ ವ್ಯಾಮೋಹದಿಂದ ರಾಜ್ಯಭಾಷೆಯ ಅವಗಣನೆ ಹೆಚ್ಚಾಗುತ್ತಲೇ ಇದೆ.

2. ಮಹಾರಾಷ್ಟ್ರ ಸರ್ಕಾರ ಬೆಳಗಾವಿ ವಿಚಾರದಲ್ಲಿ ಕಾಲು ಕೆರೆದು ತಾಳ್ಮೆ ಕೆಡಿಸುತ್ತಿದೆ. ಇಬ್ಬರು ಸಚಿವರನ್ನು ಈ ಕೆಲಸಕ್ಕೆ ನೇಮಿಸಿ ತನ್ನ ಅಪ್ರಾಸಂಗಿಕತೆ ತೋರಿಸಿದೆ.

3. ಆಂಧ್ರದಲ್ಲಿ ಕನ್ನಡ ಮಾಧ್ಯಮವನ್ನೇ ಕೈಬಿಡುವ ದಾಷ್ಟರ್್ಯ ತೋರಲಾಗಿದೆ. ಈ ಬಗ್ಗೆ ಸ್ಪಷ್ಟತೆ ಬಯಸಿ ನಮ್ಮ ಶಿಕ್ಷಣ ಸಚಿವರು ಪತ್ರ ಬರೆದರೆ ಅಲ್ಲಿನ ಶಿಕ್ಷಣ ಸಚಿವರು ಉಡಾಫೆ ಪ್ರತಿಕ್ರಿಯೆ ನೀಡಿದ್ದಾರೆ.

4. ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಖ್ಯೆ ಹೆಚ್ಚಿಸಬೇಕೆಂಬ ಒತ್ತಡ ಹೆಚ್ಚಾಗಿದೆ. ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸಲು ದುಂಬಾಲು ಬೀಳುತ್ತಿದ್ದಾರೆ.

5. ಮಹದಾಯಿ ಯೋಜನೆ ಅನುಷ್ಠಾನಕ್ಕೆ ಗೋವಾ ಸರ್ಕಾರ ಅಡೆ ತಡೆ ಮಾಡುತ್ತಲೇ ಬಂದಿದೆ. ನಮ್ಮ ರಾಜ್ಯದ ಪಾಲಿನ ನೀರನ್ನು ಬಳಸಿಕೊಳ್ಳಲು ಇರುವ ತೊಂದರೆಗೆ ಪರಿಹಾರ ಸಿಕ್ಕಿಲ್ಲ.

6. ಕನ್ನಡಗರಿಗೆ ಉದ್ಯೋಗ ಮೀಸಲು ಸಿಗಬೇಕು ಎಂಬ ಕೂಗು ಆರಂಭ ವಾಗಿ ದಶಕಗಳೇ ಕಳೆದಿವೆ. ಈ ವಿಷಯ ಬಂದಾಗಲೆಲ್ಲ ಸರೋಜಿನಿ ಮಹಿಷಿ ವರದಿ ಬಗ್ಗೆ ಮಾತು ಬರುತ್ತವೇ ವಿನಃ, ರ್ತಾಕ ಅಂತ್ಯ ಕಂಡಿಲ್ಲ.

7. ಅನ್ಯಭಾಷೆ ಚಲನಚಿತ್ರಗಳ ಅಬ್ಬರಕ್ಕೆ ಕನ್ನಡ ಚಿತ್ರರಂಗ ಸೊರಗುತ್ತಿದೆ. ಕೆಲವೊಮ್ಮೆ ಅನ್ಯಭಾಷೆಯ ಚಿತ್ರಗಳ ಬಿಡುಗಡೆ ಸಂದರ್ಭದಲ್ಲಿ ಸದಭಿರುಚಿಯ ಕನ್ನಡ ಚಿತ್ರಗಳು ಎತ್ತಂಗಡಿ ಆಗುತ್ತಿವೆ. ಈ ಬೆಳವಣಿಗೆ ಕಡಿವಾಣ ಬೀಳುತ್ತಿಲ್ಲ.

8. ಕೇಂದ್ರ ಸರ್ಕಾರದಿಂದ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳು ಭಾಗಶಃ ಕನ್ನಡದಲ್ಲಿ ನಡೆಯುತ್ತಿವೆ. ಎಲ್ಲಾ ಪರೀಕ್ಷೆಗಳು ಕನ್ನಡದಲ್ಲಿ ನಡೆಯಬೇಕೆಂಬ ಕೂಗಿಗೆ ಪೂರ್ಣ ಸಹಮತಿ ಸಿಕ್ಕಿಲ್ಲ.

9. ಹಿಂದಿ ಹೇರಿಕೆ ನಿರಂತರ ಮುಂದುವರಿದಿದೆ. ಅನಗತ್ಯವಾದ ಕಡೆಯಲ್ಲೂ ಹಿಂದಿ ಬಳಕೆ ನಡೆಯುತ್ತಿದೆ. ಹೋರಾಟ ಹೆಚ್ಚಾದಾಗ ಮಾತ್ರ ಇದು ಸ್ವಲ್ಪ ಕಡಿಮೆಯಾಗುತ್ತದೆ.

| ಶ್ರೀಕಾಂತ್ ಶೇಷಾದ್ರಿ/ಜಯತೀರ್ಥ ಕಲಬುರಗಿ