ಕಲಬುರಗಿ ಶ್ರೀವಿಜಯ ಪ್ರಧಾನ ವೇದಿಕೆ: ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಮಹಿಳೆಯರು ಹಾಕುತ್ತಿರುವ ಶ್ರಮ, ಹಣವನ್ನು ರಾಜಕೀಯ ದೇಗುಲಗಳಾದ ಸಂಸತ್ತು, ವಿಧಾನಸಭೆ, ಪಂಚಾಯಿತಿ ಪ್ರವೇಶಿಸಲು ವ್ಯಯಿಸಬೇಕು. ಏಕೆಂದರೆ ನಮ್ಮನ್ನಾಳುವ ಕಾನೂನು ತಯಾರಾಗುವುದು ಅಲ್ಲೇ. ಅದನ್ನು ಮಹಿಳೆಯರೇ ರಚಿಸುವಂತಾಗಬೇಕು ಎಂದು ಪ್ರೊ.ಶಿವಗಂಗಾ ರುಮ್ಮಾ ಅಭಿಪ್ರಾಯಪಟ್ಟರು.
‘ಸ್ತ್ರೀಲೋಕ: ತಲ್ಲಣಗಳು’ ಗೋಷ್ಠಿಯಲ್ಲಿ ಮಹಿಳೆ ಮತ್ತು ಲೋಕ ಗ್ರಹಿಕೆ ಬಗ್ಗೆ ವಿಚಾರ ಮಂಡಿಸಿದ ಅವರು, ಶಬರಿಮಲೆ ದೇಗುಲ ಪ್ರವೇಶಕ್ಕೆ ಅಷ್ಟೆಲ್ಲ ಹೋರಾಟ ನಡೆಯಿತು, ಸುಪ್ರೀಂಕೋರ್ಟ್ ತೀರ್ಪು ದೇವಾಲಯ ಪ್ರವೇಶಕ್ಕೆ ದೊಡ್ಡ ರಹದಾರಿ ಸಿಕ್ಕಂತಾಯಿತು. ಈಗ ಅದರ ಬಗ್ಗೆ ರ್ಚಚಿಸುತ್ತ ಕುಳಿತಿದ್ದೇವೆ. ಒಂದು ಕಾಲಕ್ಕೆ ಮಹಿಳೆಯರೇ ಪೂಜಿಸುತ್ತಿದ್ದ ದೇವಾಲಯಗಳಲ್ಲಿ ಇಂದು ಪುರುಷರು ಪೂಜಾರಿಗಳಾಗಿದ್ದಾರೆ. ದೇವಾಲಯಕ್ಕೆ ಹೋಗುವ ಹಕ್ಕು ಮಂಡಿಸುವುದೇ ಹೆಣ್ಣು ಮಕ್ಕಳ ಗುರಿಯಲ್ಲ ಎಂದರು. ಇವರ ಮಾತಿಗೆ ದನಿಗೂಡಿಸಿದ ಅಧ್ಯಕ್ಷತೆ ವಹಿಸಿದ್ದ ಬಿ.ಟಿ.ಲಲಿತಾ ನಾಯ್ಕ್ ಮಹಿಳೆಯರು ಎಲ್ಲಿ ಎಡವುತ್ತಿದ್ದೇವೆ? ಜಗತ್ತನ್ನು ಹೇಗೆ ಗ್ರಹಿಸುತ್ತಿದ್ದೇವೆ ಎಂಬ ಬಗ್ಗೆ ಯೋಚಿಸಬೇಕು ಎಂದರು.
ಈ ದೇಶದಲ್ಲಿ ಯಾರು ಹೇಗೆ ಬೇಕಿದ್ದರೂ ಇರಲು ಸ್ವತಂತ್ರವಿದೆ. ಎಲ್ಲರಿಗೂ ಒಂದೊಂದು ಹಕ್ಕಿದೆ. ಯಾರು ಏನು ತಿನ್ನಬೇಕು? ಏನು ತೊಡಬೇಕು ಎಂಬುದಕ್ಕೆ ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು. ‘ಮಹಿಳೆ ಮತ್ತು ಪ್ರಭುತ್ವ’ ವಿಚಾರವಾಗಿ ಲೇಖಕಿ ಡಾ.ಆರ್.ಪೂರ್ಣಿಮಾ ಮಾತನಾಡಿ, ಮಹಿಳೆಯರಿಗೆ ಸೌಲತ್ತು ಕೊಡುವುದೇ ಸಮಾನತೆಯಲ್ಲ, ರಾಜಕೀಯದಲ್ಲಿ ಮೀಸಲು ಸಿಗಬೇಕು. ಪ್ರಭುತ್ವಕ್ಕೆ ಇದೇಕೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ‘ಮಹಿಳೆ ಮತ್ತು ಸೃಜನಶೀಲತೆ’ ವಿಷಯದಲ್ಲಿ ಮಾತನಾಡಿದ ತಾರಿಣಿ ಶುಭದಾಯಿನಿ, ಹಿತ್ತಲು, ಮಕ್ಕಳು, ಅಡುಗೆ ಕೋಣೆಯಲ್ಲೇ ಮಹಿಳೆ ತನ್ನ ಅಭಿವ್ಯಕ್ತಿ ವ್ಯಕ್ತಪಡಿಸುತ್ತಾಳೆ. ಕೃಷಿಯಲ್ಲೂ ಮಹಿಳೆಯೇ ಮುಂಚೂಣಿ, ಕಂಪ್ಯೂಟರ್ ಪ್ರೋಗ್ರಾಮಿಂಗ್ನಲ್ಲೂ ಆಕೆಯೇ ಮೊದಲಿಗಳು ಎಂದರು. ಗಾಂಧಿ ಕೂಡ ಸ್ವಾತಂತ್ರ್ಯ ಚಳವಳಿಯಲ್ಲಿ, ಹೆಣ್ಣು ಮಕ್ಕಳು ಅಡುಗೆ ಮನೆಯಲ್ಲಿ ಬಳಸುವ ಸಾಮಾನನ್ನೇ ತಮ್ಮ ತಂತ್ರಗಾರಿಕೆಗೆ ಬಳಸಿದ್ದರು. ಉಪ್ಪು, ಕಸಬರಿಕೆ, ಜಪ ತಪ ಹೀಗೆ.. ರಾವಣನ ಸೆರೆಯಲ್ಲಿದ್ದ ಸೀತೆ ಹುಲ್ಲುಕಡ್ಡಿಯೊಂದಿಗೆ ಸಂಭಾಷಣೆ ಮಾಡುತ್ತಿದ್ದಳಂತೆ. ಒಂದು ಹುಲ್ಲುಕಡ್ಡಿಯೂ ನಮ್ಮ ಶಕ್ತಿಯಾಗಬಹುದು ಎಂದು ಸೂಚ್ಯವಾಗಿ ತಿಳಿಸಿದರು.