ಜಿಲ್ಲೆ

ಶೇ.85 ಟಿಬಿ ರೋಗಿಗಳು ಗುಣಮುಖ

ಬೆಳಗಾವಿ: ಜಿಲ್ಲೆಯಲ್ಲಿ ಪ್ರತಿವರ್ಷ ಸುಮಾರು 5 ಸಾವಿರದಷ್ಟು ಕ್ಷಯರೋಗಿಗಳನ್ನು ಪತ್ತೆ ಹಚ್ಚಿ, ಶೇ. 90 ಕ್ಷಯರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಿ ರೋಗ ಮುಕ್ತರನ್ನಾಗಿ ಮಾಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಉಪ ನಿರ್ದೇಶಕಿ ಡಾ.ಶೈಲಜಾ ತಮ್ಮಣ್ಣವರ ಹೇಳಿದರು. ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯ ಚರಕ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ 2003ರಿಂದ ಇಲ್ಲಿಯವರೆಗೆ 78,979 ಕ್ಷಯ ರೋಗಿಗಳನ್ನು ಪತ್ತೆ ಹಚ್ಚಿ ಶೇ. 85 ರೋಗಿಗಳನ್ನು ಗುಣಪಡಿಸಲಾಗಿದೆ ಎಂದರು.

ರಾಜ್ಯಮಟ್ಟದ ಪ್ರಶಸ್ತಿ: 2020-21ನೇ ಸಾಲಿನ ‘ಅತ್ಯುತ್ತಮ ಹಿರಿಯ ಚಿಕಿತ್ಸಾ ಮೇಲ್ವಿಚಾರಕ’ ರಾಜ್ಯಮಟ್ಟದ ಪ್ರಶಸ್ತಿಯು ಬೆಳಗಾವಿ ಜಿಲ್ಲೆಯ ಅಥಣಿ ಕ್ಷಯರೋಗ ಘಟಕದ ರಾಜಶೇಖರ ಕುರಹಟ್ಟಿ ಅವರಿಗೆ ಲಭಿಸಿದೆ ಎಂದು ಮಾಹಿತಿ ನೀಡಿದ ಅವರು, ಎಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸಿ ಜಿಲ್ಲೆಯನ್ನು ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಆಂದೋಲನವಾಗಲಿ: ಪ್ರೊ. ಆರ್.ಜಿ. ವಿವೇಕಿ ಉಪನ್ಯಾಸ ನೀಡಿ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳು ಕ್ಷಯರೋಗ ನಿಯಂತ್ರಣಕ್ಕೆ ಸಹಕಾರ ಹಾಗೂ ಸೌಲಭ್ಯ ಕಲ್ಪಿಸುತ್ತಿದೆ. ಕ್ಷಯರೋಗಿ ಎಂದು ದೃಢಪಟ್ಟವರಿಗೆ ಮಾಸಿಕ 500 ರೂ. ಹಾಗೂ ಕ್ಷಯರೋಗಿಯ ಮಾಹಿತಿ ನೀಡುವ ಎಲ್ಲ ಖಾಸಗಿ ವೈದ್ಯರಿಗೆ 500 ರೂ. ಪ್ರೋತ್ಸಾಹಧನ ಹಾಗೂ ರೋಗಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ ಚಿಕಿತ್ಸಾ ನಿರ್ವಾಹಕರಿಗೆ 1,000 ರೂ. ಗೌರವಧನ ನೀಡಲಾಗುತ್ತಿದೆ. ಹೀಗಾಗಿ ಆಂದೋಲನ ರೂಪದಲ್ಲಿ ಕ್ಷಯ ಪತ್ತೆ ಚಟುವಟಿಕೆ ಕೈಗೊಳ್ಳಬೇಕು ಎಂದು ಹೇಳಿದರು.

ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯ ನಿರ್ದೇಶಕ ಎಸ್.ಸಿ. ಧಾರವಾಡ, ಬಿಮ್ಸ್ ಶಸ್ತ್ರಚಿಕಿತ್ಸಕ ಡಾ.ಹುಸೇನಸಾಹೇಬ್ ಖಾಜಿ, ಜಿಲ್ಲಾ ವೈದ್ಯಾಧಿಕಾರಿ ಡಾ. ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಬಿ.ಎನ್. ತುಕ್ಕಾರ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಚಾಂದನಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಕಿವಡಸಣ್ಣವರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಅನಿಲ ಎಸ್. ಕೊರಬು, ಜಿಲ್ಲೆಯ ಆರೋಗ್ಯ ಇಲಾಖೆಯ ಜಿಲ್ಲಾ ಸಂಯೋಜಕ ಸ್ವಪ್ನಿಲ್ ಕಾಂಬಳೆ, ಹಿರಿಯ ಆರೋಗ್ಯ ನಿರೀಕ್ಷಕ ಸಿ.ಜಿ. ಅಗ್ನಿಹೋತ್ರಿ, ಎಸ್.ಜಿ. ಲಾಡ್ ಇತರರು ಉಪಸ್ಥಿತರಿದ್ದರು.