ಜಿಲ್ಲೆ

85.31 ಲಕ್ಷ ರೂ. ಲಾಭದಲ್ಲಿ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ

ವಿರಾಜಪೇಟೆ: ಕೊಡಗು ಜಿಲ್ಲಾ ಸಹಕಾರ ಮಹಾಮಂಡಳ ನಿಯಮಿತ (ಫೆಡರೇಷನ್) 2023-24ನೇ ಸಾಲಿನ 72ನೇ ವಾರ್ಷಿಕ ಮಹಾಸಭೆ ಫೆಡರೇಷನ್ ಅಧ್ಯಕ್ಷ ವಾಟೇರಿರ ಪಿ.ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಿತು.


ಕೊಡಗು ಜಿಲ್ಲಾ ಸಹಕಾರ ಮಹಾಮಂಡಳ ನಿಯಮಿತ (ಫೆಡರೇಷನ್) 2023-24 ನೇ ಸಾಲಿನ 72ನೇ ವಾರ್ಷಿಕ ಮಹಾಸಭೆಯು ನಗರದ ಕೊಡಗು ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ವಾಟೇರಿರ ಪಿ.ಬೋಪಣ್ಣ, ಸಂಘವು 2023-24ನೇ ಸಾಲಿನಲ್ಲಿ 12.76 ಕೋಟಿ ರೂ.ವ್ಯಾಪಾರ ವಹಿವಾಟು ಮಾಡಿದ್ದು, ಲಾಭ 85.31 ಲಕ್ಷ ರೂ.ಗಳಿಸಿದೆ ಎಂದರು.


ಇದರಲ್ಲಿ ಕಾಯ್ದಿರಿಸಿದ ಬಾಬ್ತು ಕಳೆದು 25.27 ಲಕ್ಷ ರೂ.ನಿವ್ವಳ ಲಾಭ ಗಳಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವಹಿವಾಟುಗಳು ಮಾಡಲು ಸಂಸ್ಥೆಯು ಮುಂದಾಗಿದೆ. ಕಳೆದ ಸಾಲಿನಲ್ಲಿ ನೂತನ ಅಕ್ಕಿಗಿರಣಿಯನ್ನು ಅಳವಡಿಸಲಾಗಿದ್ದು, ರೈತರು ಹಾಗೂ ಸದಸ್ಯರಿಗೆ ಹೆಚ್ಚು ಉಪಯುಕ್ತವಾಗಿದೆ. ಮಲಬಾರ್ ರಸ್ತೆಯಲ್ಲಿ ನೂತನವಾಗಿ ಆರಂಭಿಸಿರುವ ಮಳಿಗೆಯಲ್ಲಿ ಉತ್ತಮ ರೀತಿಯಲ್ಲಿ ವ್ಯಾಪಾರ ನಡೆಯುತ್ತಿದೆ. ಸಂಸ್ಥೆಯ ವತಿಯಿಂದ ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಚಿಂಗ್ ಘಟಕ ಆರಂಭಿಸಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತ್ತಿದೆ. ಸಂಸ್ಥೆಯು ಹೊಂದಿರುವ ಸ್ಥಳದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಗ್ರಾಹಕರಿಗೆ ಅನುಕೂಲವಾಗುವಂತೆ ಕಬ್ಬಿಣ, ಸಿಮೆಂಟು ಮಾರಾಟ ಘಟಕ ಪ್ರಾರಂಭಿಸುವ ಉದ್ದೇಶವಿದೆ ಎಂದರು.
ಸಂಸ್ಥೆಯ ಬ್ರಾಂದಿ ಅಂಗಡಿಯಿಂದ 15 ಲಕ್ಷ ರೂ.ಗೂ ಮಿಗಿಲಾಗಿ ಲಾಭಂಶವನ್ನು ಗಳಿಸಿದೆ. ಬ್ರಾಂದಿ ಅಂಗಡಿ ಹಿಂಭಾಗದಲ್ಲಿ ಬಾಕಿ ಉಳಿದ ಸ್ಥಳದಲ್ಲಿ ಮಳಿಗೆ ಕಟ್ಟಡ ನಿರ್ಮಿಸಲು ಸಂಸ್ಥೆಯು ಮುಂದಾಗಿದೆ ಎಂದು ಹೇಳಿದರು.


ಸಭೆಯ ಆರಂಭದಲ್ಲಿ ಸಂಸ್ಥೆಯ ಸದಸ್ಯತ್ವನ್ನು ಹೊಂದಿ ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಉಪಧ್ಯಕ್ಷ ತಾತಂಡ ಎಂ.ಬಿಪಿನ್ ಕಾವೇರಪ್ಪ, ಸಹ ಕಾರ್ಯದರ್ಶಿಗಳಾದ ಕೆ.ಎಂ. ಚಂದ್ರಕಾಂತ್, ನಿರ್ದೇಶಕರಾದ ಕಂಜಿತಂಡ ಮಂದಣ್ಣ, ಮುಲ್ಲೇಂಗಡ ಎಂ.ಕುಟ್ಟಪ್ಪ, ಮಾಚಿಮಂಡ ಬಿ.ವಸಂತ್, ಕೊಕ್ಕಂಡ ಎ.ಬಿದ್ದಪ್ಪ, ಚೇನಂಡ ಈ ಗೀರಿಶ್ ಪೂಣಚ್ಚ, ಮೂಕೊಂಡ ಶಶಿ ಸುಬ್ರಮಣಿ, ಕುಂಬೇರ ಮನುಕುಮಾರ್, ಅಂಜಪರವಂಡ ಎಂ ಮಂದಣ್ಣ, ಕೂತಂಡ ಸಚಿನ್ ಕುಟ್ಟಯ್ಯ, ಪುಲಿಯಂಡ ಎ.ಪೊನ್ನಣ್ಣ, ಕೆ.ಆರ್. ವಿನೋದ್, ಕರ್ತಚ್ಚಿರ ಲತಾ, ಪುಟ್ಟಿಚಂಡ ವೀಣಾ ಮಹೇಶ್, ಎಚ್.ಎನ್.ಶೇಖರ್, ಎಚ್.ಜಿ.ಆನಂದ ಹಾಜರಿದ್ದರು.