ಕಡೂರು: ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಎರಡು ಕ್ಷೇತ್ರಗಳ ಮತದಾರು ಉತ್ಸುಕರಾಗಿ ಪಾಲ್ಗೊಂಡ ಮತಚಲಾಯಿಸಿದರು.
ತಾಲೂಕು ಪಂಚಾಯಿತಿ ಕಚೇರಿ ಮತ್ತು ಸಾಮಾರ್ಥ್ಯ ಸೌಧ ಕಟ್ಟಡದ ಕಚೇರಿ ಸ್ಥಾಪಿಸಿದ್ದ ಪದವೀಧರ ಕ್ಷೇತ್ರಗಳ ಎರಡು ಮತಗಟ್ಟೆಗಳಲ್ಲಿನ ಒಟ್ಟು 2,262 ಮತದಾರರಲ್ಲಿ 1,886 ಪದವೀಧರ ಮತದಾರರು ಹಕ್ಕು ಚಲಾಯಿಸಿದರು. ತಾಪಂ ಕಚೇರಿ ಮತಗಟ್ಟೆ 4ರ ಕೇಂದ್ರದಲ್ಲಿ 1,023 ಮತಗಳಿಗೆ 868 ಮತಗಳು ಚಲಾವಣೆಗೊಂಡಿದೆ. ಸಾಮಾರ್ಥ್ಯ ಸೌಧ ಕಟ್ಟಡದ ಕಚೇರಿಯ ಮತಗಟ್ಟೆ 5 ರಲ್ಲಿ 1,239 ಮತಗಳಿಗೆ 1,018 ಮತ ಚಲಾವಣೆಯಾಗಿದ್ದು, ಒಟ್ಟು ಶೇ. 83.3ರಷ್ಟು ಮತದಾನವಾಗಿದೆ.
ತಾಲೂಕು ಕಚೇರಿಯಲ್ಲಿ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಎರಡು ಮತಗಟ್ಟೆಗಳಲ್ಲಿ 1,122 ಶಿಕ್ಷಕ ಮತದಾರರ ಪೈಕಿ 994 ಶಿಕ್ಷಕರು ತಮ್ಮ ಹಕ್ಕು ಚಲಾಯಿಸಿದರು. ಮತಗಟ್ಟೆ 4ರಲ್ಲಿ 599 ಮತಗಳಿಗೆ 539, ಮತಗಟ್ಟೆ 4ಎಯಲ್ಲಿ 523 ಮತಗಳಿಗೆ 455 ಮತ ಚಲಾವಣೆಯಾಗಿದ್ದು, ಒಟ್ಟು ಶೇ.88.5ರಷ್ಟು ಮತದಾನವಾಗಿದೆ.
ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಚುರುಕುಗೊಂಡಿದ್ದವು. ಪದವೀಧರ ಕ್ಷೇತ್ರದ ಮತದಾರರು ಸರತಿ ಸಾಲಿನಲ್ಲಿ ನಿಂತು ಮತಚಲಾಯಿತಿದರು. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ತಮ್ಮ ಹಕ್ಕು ಚಲಾಯಿಸಿದ ನಂತರ ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರ ಜತೆ ಮಧ್ಯಾಹ್ನದವರೆಗೂ ಒಟ್ಟಾಗಿ ನಿಂತು ಮತಗಟ್ಟೆ ಕೇಂದ್ರದ ಸಮೀಪ ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದರು. ಕಾರ್ಯಕರ್ತರು ಇದಕ್ಕೆ ಸಾಥ್ ನೀಡಿದರು.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಸೂರು ಚಂದ್ರಮೌಳಿ, ಆಸಂದಿ ಕಲ್ಲೇಶ್ ಹಾಗೂ ಕಾಂಗ್ರೆಸ್ ಮುಖಂಡರು ಮತಯಾಚಿಸಿದರು. ಪಕ್ಷೇತರ ಅಭ್ಯರ್ಥಿ ರಘು ಪತಿ ಭಟ್ ಪರವಾಗಿ ಬಿಜೆಪಿ ಸ್ವಾಭಿಮಾನಿ ಕಾರ್ಯಕರ್ತರ ಬಳಗದ ಕೆ.ಬಿ.ಸೋಮೇಶ್, ತಾಪಂ ಮಾಜಿ ಸದಸ್ಯ ಜಿಗಣೇಹಳ್ಳಿ ಮಂಜು, ಕೆ.ಎಸ್.ಮಂಜು, ಕೆ.ಜಿ.ಲೋಕೇಶ್ವರ್ ಮತಯಾಚಿಸಿದರು.
ತಾಲೂಕು ಕಚೇರಿ ರಸ್ತೆ ಮಾರ್ಗದ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಲಾಗಿತ್ತು. ಸಿಪಿಐ ದುರ್ಗಪ್ಪ ನೇತೃತ್ವದಲ್ಲಿ ಪಿಎಸೈಗಳಾದ ಧನಂಜಯ್ ಮತ್ತು ನವೀನ್‌ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಶಾಂತಿಯುತ ಮತದಾನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು.