ವಿಜಯಪುರ: ನಗರದ BLDE ಸಂಸ್ಥೆಯ ನರ್ಸಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ (IGNOU) ನಡೆಸಿದ ಎಂ.ಎ., ಇಂಗ್ಲಿಷ್ ಅಂತಿಮ ವರ್ಷದ ಪರೀಕ್ಷೆಯಲ್ಲಿ 81 ವರ್ಷ ವಯಸ್ಸಿನ ನಿಂಗಯ್ಯ ಒಡೆಯರ್ ಎಂಬುವವರು ಶುಕ್ರವಾರ ಪರೀಕ್ಷೆ ಬರೆಯುವ ಮೂಲಕ ಕಲಿಕೆಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಗುಡೂರು ಬಳಿಯ ಎಸ್.ಸಿ. ಹಳ್ಳಿ ನಿವಾಸಿ ನಿಂಗಯ್ಯ ಒಡೆಯರ್ ಸರ್ಕಾರಿ ಸೇವೆಯಿಂದ ನಿವೃತ್ತರಾದ ನಂತರ ಕಲಿಯಬೇಕೆಂಬ ಹಂಬಲದಿಂದ ಕನ್ನಡ, ಹಿಂದಿ, ಇಂಗ್ಲಿಷ್ ವಿಷಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಗ್ನೌದಿಂದ ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದು, ಈಗ ಮತ್ತದೇ ಮುಕ್ತ ವಿಶ್ವವಿದ್ಯಾಲಯದ ವತಿಯಿಂದ ಐದನೇ ಸ್ನಾತಕೋತ್ತರ ಪದವಿಗೆ ಪರೀಕ್ಷೆ ಎದುರಿಸಿದ್ದಾರೆ.
ನಿಂಗಯ್ಯನವರಿಗೆ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದು, ಐವರು ಮೊಮ್ಮಕ್ಕಳಿದ್ದಾರೆ. ಪುತ್ರಿ ಕೂಡ ಪಿಎಚ್‌ಡಿ ಪದವಿ ಪಡೆದಿದ್ದು, ಇವರ ಪುತ್ರರು ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯೋಗಪಟುವೂ ಆಗಿರುವ ನಿಂಗಯ್ಯ ಒಡೆಯರ್ ಉತ್ತಮ ಆರೋಗ್ಯ ಕಾಪಾಡಿಕೊಂಡಿರುವುದು ವಿಶೇಷ.
ಹಾಲಿ ನಡೆಯುತ್ತಿರುವ ಸ್ನಾತಕೋತ್ತರ ಪರೀಕ್ಷೆಯಲ್ಲಿ ನಿಂಗಯ್ಯನವರು ಆಕರ್ಷಣೆ ಕೇಂದ್ರವಾಗಿದ್ದು, ಇತರ ಅಭ್ಯರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಇಗ್ನೌ ಅಧ್ಯಯನ ಕೇಂದ್ರದ ಸಂಯೋಜಕ ಡಾ. ನಿಂಗನಗೌಡ ಪಾಟೀಲ್ ತಿಳಿಸಿದ್ದಾರೆ.